CrimeKannada NewsKarnataka NewsLatest

*ಪಬ್​ನಲ್ಲಿ ಐಡಿ ಕಾರ್ಡ್​ ಕೇಳಿದ್ದಕ್ಕೆ ಇನ್ಸ್ಪೆಕ್ಟರ್ ಕಪಾಳಕ್ಕೆ ಬಾರಿಸಿದ IAS​ ಅಧಿಕಾರಿ*: *ವಿಕಾಸ್ ಮರ್ಮಠ್ ವಿರುದ್ಧ FIR*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯ ಪಬ್‌ನಲ್ಲಿ ಗಲಾಟೆ ನಡೆಸಿ, ಕರ್ತವ್ಯದಲ್ಲಿದ್ದ ಪೊಲೀಸ್ ಇನ್‌ಸ್ಪೆಕ್ಟರ್ ಮೇಲೆ ಹಲ್ಲೆ ಮಾಡಿದ ಆರೋಪ ಆಂಧ್ರಪ್ರದೇಶ ಕೇಡರ್‌ನ ಐಎಎಸ್ ಅಧಿಕಾರಿ ವಿಕಾಸ್ ಮರ್ಮಠ್ ವಿರುದ್ಧ ಕೇಳಿಬಂದಿದೆ. ಮಧ್ಯರಾತ್ರಿ ನಡೆದ ಈ ಘಟನೆಗೆ ಸಂಬಂಧಿಸಿದಂತೆ ಅಧಿಕಾರಿ ಹಾಗೂ ಅವರ ಮೂವರು ಸ್ನೇಹಿತರ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಆಂಧ್ರಪ್ರದೇಶದ ಕುಪ್ಪಂನಲ್ಲಿ ವಿಶೇಷ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ವಿಕಾಸ್ ಮರ್ಮಠ್ ಅವರು ತಮ್ಮ ಸ್ನೇಹಿತರಾದ ನಿತೇಶ್, ಅಭಯ್ ಉದಯ್ ಸಿಂಗ್ ಮತ್ತು ರೋಷನ್ ಜೊತೆ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ‘ಕಾವೂರ್’ ಪಬ್‌ಗೆ ತೆರಳಿದ್ದರು. ರಾತ್ರಿ ಸುಮಾರು 1.30ರ ವೇಳೆಗೆ ಸಿಸಿಬಿ ಅಧಿಕಾರಿಗಳು ಸಮವಸ್ತ್ರದಲ್ಲೇ ಪಬ್ ಪರಿಶೀಲನೆಗೆ ಬಂದಿದ್ದರು.

ನಿಯಮಿತ ಪರಿಶೀಲನೆಯ ಭಾಗವಾಗಿ ಪೊಲೀಸರು ಅಲ್ಲಿದ್ದವರ ಗುರುತಿನ ಚೀಟಿಗಳನ್ನು ಕೇಳಿದ್ದಾರೆ. ಈ ವೇಳೆ ವಿಕಾಸ್ ಮರ್ಮಠ್ ಅವರು ಆಕ್ಷೇಪ ವ್ಯಕ್ತಪಡಿಸಿ, ಪೊಲೀಸ್ ಅಧಿಕಾರಿಗಳೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಇದನ್ನು ಪ್ರಶ್ನಿಸಲು ಮುಂದಾದ ಪೊಲೀಸ್ ಇನ್‌ಸ್ಪೆಕ್ಟರ್‌ಗೆ ಕಪಾಳಮೋಕ್ಷ ಮಾಡಿ ಹಲ್ಲೆ ನಡೆಸಿದ್ದಾರೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ. “ನಾನು ಐಎಎಸ್ ಅಧಿಕಾರಿ, ನಿಮ್ಮಿಂದ ಏನು ಮಾಡಲು ಸಾಧ್ಯವೋ ನೋಡಿಕೊಳ್ಳಿ” ಎಂದು ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಹಿನ್ನೆಲೆಯಲ್ಲಿ ದೂರು ದಾಖಲಿಸಲಾಗಿದೆ. ದೂರಿನ ಆಧಾರದ ಮೇಲೆ ವಿಕಾಸ್ ಮರ್ಮಠ್ ಹಾಗೂ ಅವರ ಮೂವರು ಸ್ನೇಹಿತರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button