ಪ್ರಗತಿವಾಹಿನಿ ಸುದ್ದಿ; ಚೆನ್ನೈ: ಭಾರತೀಯ ಚಿತ್ರರಂಗದ ಸ್ವರ ಸಾಮ್ರಾಟ, ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ತೀವ್ರ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಈ ಕುರಿತು ಅವರ ಪುತ್ರ ಎಸ್ ಪಿ ಚರಣ್ ಮಾಹಿತಿ ನೀಡಿದ್ದು, ತಂದೆ ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರು ಮಧ್ಯಾಹ್ನ 1 ಗಂಟೆ 4 ನಿಮಿಷಕ್ಕೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿಸಿದ್ದಾರೆ.
ಆ.5ರಂದು ಕೊರೊನ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಎಸ್ ಪಿ ಬಾಲಸುಬ್ರಹ್ಮಣ್ಯಂ ಚೆನ್ನೈನ ಎಂಜಿಎಂ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ 50 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಸ್ ಪಿ ಬಾಲಸುಬ್ರಹ್ಮಣ್ಯಂ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ವೈದ್ಯರು ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ ಎಂದು ಪುತ್ರ ಚರಣ್ ತಿಳಿಸಿದ್ದಾರೆ.
ಅಭಿಮಾನಿಗಳು ಇರುವವರೆಗೂ ತಂದೆ ಎಸ್ ಪಿ ಬಾಲಸುಬ್ರಹ್ಮಣ್ಯಂ ಅಮರರಾಗಿರುತ್ತಾರೆ. ಸಂಗೀತವಿರುವವರೆಗೂ ಅವರು ಚಿರಸ್ಥಾಯಿಯಾಗಿರುತ್ತಾರೆ ಎಂದು ಚರಣ್ ದು:ಖಿಸಿದ್ದಾರೆ.
1946, ಜೂನ್ 4ರಂದು ಶ್ರೀಪತಿ ಪಂಡಿತಾರಾಧ್ಯಾಯಲು ಬಾಲಸುಬ್ರಹ್ಮಣ್ಯಂ ಆಂಧ್ರಪ್ರದೇಶ ಚಿತ್ತೂರಿನ ಕೊನೇಟಮ್ಮಪೇಟಾ ಎಂಬಲ್ಲಿ ಜನಿಸಿದ್ದರು. ಸಾಂಬಮೂರ್ತಿ, ಶಕುಂತಲಮ್ಮ ದಂಪತಿಯ ಮೊದಲ ಮಗನಾಗಿ ಜನಿಸಿದ್ದರು. ಹರಿಕಥೆ ಹೇಳುತ್ತಿದ್ದ ತಂದೆ ಎಸ್.ಪಿ.ಸಾಂಬಮೂರ್ತಿ ಅವರೇ ಎಸ್ ಪಿಬಿಗೆ ಸಂಗೀತದ ಪ್ರೇರಣೆಯಾಗಿದ್ದರು.
ಖ್ಯಾತ ಗಾಯಕ ಘಂಟಸಾಲಾ ಮತ್ತು ಎಸ್.ಪಿ. ಕೋದಂಡಪಾಣಿ ತೀರ್ಪುಗಾರರಾಗಿದ್ದ ಸಂಗೀತ ಸ್ಪರ್ಧೆಯೊಂದರಲ್ಲಿ ಬಾಲಸುಬ್ರಹ್ಮಣ್ಯಂ ವಿಜೇತರಾಗಿದ್ದರು. ಇದನ್ನು ನೋಡಿದ ಕೋದಂಡಪಾಣಿ ಎಂಬ ನಿರ್ದೇಶಕರು ತಮ್ಮ ತೆಲುಗಿನ ಶ್ರೀ ಶ್ರೀ ಶ್ರೀ ಮರ್ಯಾದಾ ರಾಮಣ್ಣ ಎಂಬ ಚಿತ್ರದಲ್ಲಿ ಹಾಡಲು ಅವಕಾಶ ನೀಡಿದರು. ಅಂದಿನಿಂದ ಭಾರತೀಯ ಚಿತ್ರರಂಗದಲ್ಲಿ ಗಾನ ಕೋಗಿಲೆ ಎಸ್ ಪಿಬಿಯವರ ಸ್ವರ ಪಯಣ ಆರಂಭವಾಯಿತು.
ಎಸ್ ಪಿಬಿ ಅವರು ಒಟ್ಟು 16 ಭಾಷೆಗಳಲ್ಲಿ, 40,000 ಹಾಡುಗಳನ್ನು ಹಾಡಿದ್ದಾರೆ. ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಗಾಯಕರಾಗಿ ಮಾತ್ರವಲ್ಲ ಸಂಗೀತ ನಿರ್ದೇಶಕರಾಗಿ, ಕಂಠದಾನ ಕಲಾವಿದರಾಗಿ, ನಿರ್ಮಾಪಕರಾಗಿಯೂ ಎಸ್ ಪಿಬಿ ಪ್ರಸಿದ್ಧರಾಗಿದ್ದರು. ಕನ್ನಡದಲ್ಲಿ ಒಂದೇ ದಿನ 16 ಹಾಡುಗಳನ್ನು ಧ್ವನಿ ಮುದ್ರಿಸಿದ್ದ ಕೀರ್ತಿ ಎಸ್ ಪಿಬಿಯವರದ್ದು.
ನಾಲ್ಕು ಭಾಷೆಗಳಲ್ಲಿ ಎಸ್ ಪಿಬಿ 6 ರಾಷ್ಟ್ರ ಪ್ರಶಸ್ತಿಗಳನ್ನು ಪಡೆದಿದ್ದರು. ಆಂಧ್ರಪ್ರದೇಶ ಸರ್ಕಾರ ಅವರಿಗೆ 25 ಬಾರಿ ನಂದಿ ಪ್ರಶಸ್ತಿ ನೀಡಿ ಗೌರವಿಸಿತ್ತು. ಪದ್ಮಶ್ರೀ, ಪದ್ಮಭೂಷಣ, ಹಲವು ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್ ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದರು. ಸ್ವರ ಸಾಮ್ರಾಟನ ನಿಧನಕ್ಕೆ ಇಡೀ ಭಾರತೀಯ ಚಿತ್ರರಂಗ, ಕೋಟ್ಯಂತರ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ