ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಸಚಿವ ರಮೇಶ ಜಾರಕಿಹೊಳಿ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆಲಸ ಕೊಡುವುದಾಗಿ ಆಮಿಷವೊಡ್ಡಿ ಯುವತಿಗೆ ಲೈಂಗಿಕ ದೌರ್ಜನ್ಯ ನೀಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ದಿನೇಶ ಕಲ್ಲಹಳ್ಳಿ ಸಿಡಿ ಸಹಿತ ಪ್ರಕರಣ ದಾಖಲಿಸಿದ್ದಾರೆ.
ಈ ಪ್ರಕರಣ ಈಗ ರಾಜ್ಯಾದ್ಯಂತ ತೀವ್ರ ಸಂಚಲನ ಸೃಷ್ಟಿಸಿದ್ದು, ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ. ಮಹಿಳೆ, ಸಂಸ್ಕೃತಿ ಎಂದೆಲ್ಲ ಮಾತನಾಡುವ ಭಾರತೀಯ ಜನತಾಪಾರ್ಟಿ ಸರಕಾರದ ಸಚಿವರು ಸಿಡಿ ಪ್ರಕರಣದಲ್ಲಿ ಸಿಲುಕಿರುವುದು ಪಕ್ಷಕ್ಕೂ ಮುಜುಗರವನ್ನುಂಟು ಮಾಡಿದೆ.
ಪ್ರಕರಣ ಕುರಿತಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗೃಹ ಸಚಿವ ರಮೇಶ ಜಾರಕಿಹೊಳಿ ಜೊತೆ ಸುದೀರ್ಘ ಚರ್ಚೆ ನಡೆಸಿದ್ದಾರೆ. ಸಚಿವರನ್ನು ಸಂಪುಟದಿಂದ ಕೈಬಿಡುವ ಕುರಿತಂತೆ ಚರ್ಚಿಸಲಾಗಿದ್ದು, ಬಿಜೆಪಿ ಹೈಕಮಾಂಡ್ ಕೂಡ ಸಂಪರ್ಕಿಸಲಾಗಿದೆ.
ರಮೇಶ ಜಾರಕಿಹೊಳಿಯಿಂದ ರಾಜಿನಾಮೆ ಪಡೆಯುವ ಸಂಬಂಧ ಬುಧವಾರ ನಿರ್ಧಾರ ತೆಗೆದುಕೊಳ್ಳಲು ಮುಖ್ಯಮಂತ್ರಿ ಯಡಿಯೂರಪ್ಪ ನಿರ್ಧರಿಸಿದ್ದಾರೆ. ವರಿಷ್ಠರೊಂದಿಗೆ ಮತ್ತೊಮ್ಮೆ ಚರ್ಚಿಸಿ ನಿರ್ಧರಿಸಲು ಯಡಿಯೂರಪ್ಪ ನಿರ್ಧರಿಸಿದ್ದಾರೆ. ನಾಳೆ ಮಧ್ಯಾಹ್ನ 2 ಗಂಟೆಗೆ ಸಚಿವಸಂಪುಟ ಸಭೆ ನಡೆಯಲಿದ್ದು ಸಭೆಯಲ್ಲಿ ಪ್ರಕರಣ ಕುರಿತು ಚರ್ಚೆಯಾಗುವ ಸಾಧ್ಯತೆ ಇದೆ.
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ರಮೇಶ ಜಾರಕಿಹೊಳಿ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ ಎನ್ನಲಾಗಿದೆ. ಯಡಿಯೂರಪ್ಪ ಸಹ ಜಾರಕಿಹೊಳಿ ಸಂಪರ್ಕಕ್ಕೆ ಪ್ರಯತ್ನಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಮಧ್ಯೆ ಹೇಳಿಕೆ ನೀಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಕೇಂದ್ರದ ನಾಯಕರೊಂದಿಗೆ ನಾಳೆ ಚರ್ಚಿಸಿ ರಮೇಶ ಜಾರಕಿಹೊಳಿ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ನಮ್ಮದು ಶಿಸ್ತಿನ ಪಕ್ಷ. ನಾಳೆ ಶಿಸ್ತು ಕ್ರಮದ ಕುರಿತು ಚರ್ಚಿಸುವುದಾಗಿ ಅವರು ಹೇಳಿದ್ದಾರೆ.
BIG NEWS: ಸಚಿವ ರಮೇಶ್ ಜಾರಕಿಹೊಳಿ ಅವರ ರಾಸಲೀಲೆ ಸಿಡಿ ಬಿಡುಗಡೆ; ದೂರು
ಕೆಪಿಟಿಸಿಎಲ್ ನಲ್ಲಿ ನೌಕರಿ ಭರವಸೆ ನೀಡಿ ಯುವತಿಯ ಮೇಲೆ ಸಚಿವರಿಂದ ಲೈಂಗಿಕ ದೌರ್ಜನ್ಯ?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ