ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಬೆಳಗಾವಿ ಗಡಿ ವಿವಾದದ ಬಗ್ಗೆ ಮಹಾರಾಷ್ಟ್ರ ಸಂಸದ ಅರವಿಂದ್ ಸಾವಂತ್ ಲೋಕಸಭೆಯಲ್ಲಿ ಪ್ರಸ್ತಾಪಿಸಿದ್ದು, ಬೆಳಗಾವಿಯಲ್ಲಿ ಶಿವಸೇನೆ ನಾಯಕರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಹೇಳಿದ್ದಾರೆ.
ಶೂನ್ಯವೇಳೆಯಲ್ಲಿ ಗಡಿ ವಿವಾದ ಪ್ರಸ್ತಾಪಿಸಿದ ಸಾವಂತ್, ದೇಶದಲ್ಲಿ ಭಾಷಾವಾರು ಪ್ರಾಂತ್ಯ ರಚನೆಯಾಗಿದೆ. ಬೀದರ್, ಭಾಲ್ಕಿ, ನಿಪ್ಪಾಣಿ, ಬೆಳಗಾವಿ, ಕಾರವಾರದಲ್ಲಿ ಮರಾಠಿಗರು ಬಹುಭಾಷಿಗರಿದ್ದಾರೆ. ಶಿವಸೇನೆ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ಹಿಂದಿನಿಂದ ಹೋರಾಟ ನಡೆಸುತ್ತಿದೆ. ಹೋರಾಟದಲ್ಲಿ ನಿರತರಾಗಿರುವ ಶಿವಸೇನೆ ನಾಯಕರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿದರು.
ಸಂಸದ ಅರವಿಂದ್ ಸಾವಂತ್ ಹೇಳಿಕೆಗೆ ರಾಜ್ಯದ ಸಂಸದರಾದ ಶಿವಕುಮಾರ್ ಉದಾಸಿ, ಪ್ರತಾಪ್ ಸಿಂಹ, ಸಂಗಣ್ಣ ಕರಡಿ, ದೇವೇಂದ್ರಪ್ಪ ಸೇರಿ ಹಲವು ಸಂಸದರು ತೀವ್ರ ವಿರೋಧ ವ್ಯಕ್ತಪಡಿಸಿದರು. ಮಹಾರಾಷ್ಟ್ರ ಜನರ ಗಮನ ಬೇರೆಡೆ ಸೆಳೆದು, ಅಧಿಕರಕ್ಕಾಗಿ ಇಂಥಹ ಆರೋಪಗಳನ್ನು ಮಾಡಿ ಅನಗತ್ಯ ವಿಷಯ ಪ್ರಸ್ತಾಪ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.
ಕರ್ನಾಟಕ-ಮಹಾರಾಷ್ಟ್ರ ಗಡಿವಿವಾದ ಅಂತ್ಯವಾದ ವಿಚಾರ. 1960ರಲ್ಲಿ ಮಹಾಜನ್ ವರದಿ ರಚನೆಯಾಗಿ 1964ರಲ್ಲಿ ವರದಿ ಸಲ್ಲಿಕೆಯಾಗಿದೆ. ಗಡಿ ವಿಚಾರದಲ್ಲಿ ಮಹಾಜನ್ ವರದಿಯೇ ಅಂತಿಮ. ಹಾಗಾಗಿ ಈಗ ಈ ವಿಚಾರ ಅಪ್ರಸ್ತುತ. ಅನಗತ್ಯ ಗೊಂದಲವನ್ನುಂಟು ಮಾಡಲು ಮಹಾರಾಷ್ಟ್ರ ಸಂಸದರ ಈ ಹೇಳಿಕೆ ಸರಿಯಲ್ಲ ಎಂದು ಸಂಸದ ಶಿವಕುಮಾರ್ ಉದಾಸಿ ಕಿಡಿಕಾರಿದರು.
ಒಟ್ಟಾರೆ ಬೆಳಗಾವಿ ಗಡಿ ವಿವಾದ ಲೋಕಸಭೆಯಲ್ಲಿ ಪ್ರಸ್ತಾಪವಾಗಿದ್ದು, ಕೆಲಕಾಲ ಗದ್ದಲದ ವಾತಾವರಣ ನಿರ್ಮಾಣವಾಯಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ