Latest
ಭ್ರಷ್ಟಾಚಾರ ನಿರ್ಮೂಲನೆಗೆ ನೈತಿಕ ಮತದಾನವೇ ಪ್ರಮುಖ ಅಸ್ತ್ರ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಭ್ರಷ್ಟಾಚಾರ ನಿರ್ಮೂಲನೆಗೆ ನೈತಿಕ ಮತದಾನವೇ ಪ್ರಮುಖ ಅಸ್ತ್ರವಾಗಿದೆ ಎಂದು ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಪಂ ಸಿಇಒ ಡಾ. ರಾಜೇಂದ್ರ ಕೆ.ವಿ. ಹೇಳಿದರು.
ಜಿಲ್ಲಾ ಸ್ವೀಪ್ ಸಮಿತಿ ಹಾಗೂ ವಿವಿಧ ಬಿ.ಎಡ್. ಕಾಲೇಜುಗಳ ವತಿಯಿಂದ ಮಂಗಳವಾರ ನಗರದ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿದ್ದ ಮತದಾರರ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಇಂದಿನ ಯುವ ಸಮುದಾಯವೇ ನವಭಾರತದ ಶಿಲ್ಪಿಗಳು. ಆದ್ದರಿಂದ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು. ತಮ್ಮ ನೆರೆಹೊರೆಯವರು ಹಾಗೂ ಸ್ನೇಹಿತರಿಗೂ ಮತದಾನದಲ್ಲಿ ಭಾಗವಹಿಸಲು ಪ್ರೇರೇಪಣೆ ನೀಡಬೇಕು ಎಂದು ಕರೆ ನೀಡಿದರು.

ಜಿಪಂ ಮುಖ್ಯ ಲೆಕ್ಕಾಧಿಕಾರಿ ಪರಶುರಾಮ ದುಡಗುಂಟಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎ.ಬಿ. ಪುಂಡಲೀಕ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕ ಸೀಬಿರಂಗಯ್ಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಪ್ಪಾಸಾಹೇಬ ನರಟ್ಟಿ, ಜಿಲ್ಲಾ ಸ್ವೀಪ್ ಸಮಿತಿ ಸಹಾಯಕ ಅಧಿಕಾರಿ ರವಿ ಭಜಂತ್ರಿ, ಬಿ.ಎಡ್. ಕಾಲೇಜುಗಳ ಅಧ್ಯಾಪಕರು ಉಪಸ್ಥಿತರಿದ್ದರು.
ನಗರದ ಆಯ್ದ ಬಿ.ಎಡ್. ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು. ಚನ್ನಮ್ಮ ವೃತ್ತದಿಂದ ಆರಂಭಗೊಂಡ ಜಾಥಾ ವನಿತಾ ವಿದ್ಯಾಲಯ, ಖಡೆ ಬಜಾರ್, ಕಾಕತಿ ವೇಸ್ ಮೂಲಕ ಸಂಚರಿಸಿ ಸರ್ದಾರ್ ಮೈದಾನದಲ್ಲಿ ಮುಕ್ತಾಯಗೊಂಡಿತು.
(ಪ್ರಗತಿವಾಹಿನಿ ಸುದ್ದಿಗಳನ್ನು ಇತರರೊಂದಿಗೆ ಶೇರ್ ಮಾಡಿ)




