Latest

ಹಿಂದೂ ಜಾಗೃತಿ ಉತ್ಸವ; ಬೃಹತ್ ಶೋಭಾ ಯಾತ್ರೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಮನ ಆಯ್ಕೆ ಬೇಕೋ ಅಥವಾ ರಾವಣನ ಆಯ್ಕೆ ಬೇಕೋ, ರಾಮನ ಆಯ್ಕೆ ಮಾಡಿದರೆ ಆದರ್ಶ ರಾಮರಾಜ್ಯ ಸಿಗುವುದು, ರಾವಣನ ಆಯ್ಕೆ ಮಾಡಿದರೆ ಕಿತ್ತು ತಿನ್ನುವ ಆದರ್ಶ ನಾವು ನೋಡಬೇಕಾಗುತ್ತದೆ ಎಂದು ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ಶ್ರೀಗಳು ಅಭಿಪ್ರಾಯಪಟ್ಟಿದ್ದಾರೆ

ಹಿಂದೂ ಜಾಗೃತಿ ಉತ್ಸವ ಸಮಿತಿ ವತಿಯಿಂದ ದಾಸರಹಳ್ಳಿ ಕ್ಷೇತ್ರ, ಬೆಂಗಳೂರಿನ ಅಬ್ಬಿಗೆರೆ ಪ್ರೌಢ ಶಾಲೆಯ ಆವರಣದಲ್ಲಿ ಬೃಹತ್ ಶೋಭಾಯಾತ್ರೆಯನ್ನು ಆಯೋಜಿಸಲಾಗಿತ್ತು. ಈ ಶೋಭಾಯಾತ್ರೆಯಲ್ಲಿ ಶ್ರೀ ವಿಶ್ವ ಪ್ರಸನ್ನ ತೀರ್ಥರು ಪೇಜಾವರ ಮಠ ಇವರ ಗುರುವಂದನಾ ಕಾರ್ಯಕ್ರಮದೊಂದಿಗೆ ಪ್ರಾರಂಭವಾಯಿತು. ಈ ಕಾರ್ಯಕ್ರಮದಲ್ಲಿ ಕಮ್ಮಗೊಂಡನಹಳ್ಳಿಯ ಪ್ರಮುಖ ರಸ್ತೆಯಲ್ಲಿ ಶ್ರೀಗಳನ್ನು 108 ಪೂರ್ಣ ಕುಂಭ ಮೇಳ ಮತ್ತು ಪುಷ್ಪಾರ್ಚನೆ, ಬೆಳ್ಳಿ ರಥದ ಮೆರವಣಿಯೊಂದಿಗೆ ಶಾಲಾ ಆವರಣಕ್ಕೆ ಕರೆ ತರಲಾಯಿತು. 2000 ಕ್ಕೂ ಹೆಚ್ಚಿನ ಯುವಕರು ಬೈಕ್ ರ್ಯಾಲಿ ಮೂಲಕ ಈ ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು ಹಾಗೂ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪೂಜ್ಯ ಸ್ವಾಮೀಜಿಯವರ ದಿವ್ಯ ಹಸ್ತದಿಂದ ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮದ ಉದ್ಘಾಟನೆ ಮಾಡಲಾಯಿತು, ಈ ಸಂಧರ್ಭದಲ್ಲಿ ಮಾಜಿ ಮುಖ್ಯಮಂತ್ರಿಗಳು ಹಾಗೂ ಸಂಸದರಾದ ಶ್ರೀ. ಡಿ.ವಿ ಸದಾನಂದ ಗೌಡ, ದಾಸರಹಳ್ಳಿ ಕ್ಷೇತ್ರದ ನಿಕಟಪೂರ್ವ ಶಾಸಕರಾದ ಶ್ರೀ. ಮುನಿರಾಜು, ರಾಷ್ಟ್ರೀಯ ಚಿಂತಕರಾದ ಡಾ. ಗಿರಿಧರ್ ಉಪಾಧ್ಯಾಯ, ರಾಷ್ಟ್ರೀಯವಾದಿಗಳು ಹಾಗೂ ಆಧ್ಯಾತ್ಮಿಕ ಚಿಂತಕರಾದ ಶ್ರೀ. ರವೀಂದ್ರ ವರ್ಣ ಮತ್ತು ಹಿಂದೂ ಜನಜಾಗೃತಿ ಸಮಿತಿಯ ರಣರಾಗಿಣಿ ಮಹಿಳಾ ಶಾಖೆಯ ಸೌ. ಭವ್ಯ ಗೌಡ ಇವರು ಉಪಸ್ಥಿತರಿದ್ದರು.

ಶ್ರೀಗಳು ಆಶೀರ್ವಚನ ಮಾಡುತ್ತಾ, ‘ನಮ್ಮ ಮಾತೆಯರು, ನಮ್ಮ ರಾಜ್ಯದ ಬಗ್ಗೆ ಹೇಗೆ ಗೌರವವಿರಬೇಕು, ಹೇಗೆ ಗೌರವ ಕೊಡಬೇಕು ಎಂಬುದನ್ನು ಪ್ರಭು ಶ್ರೀರಾಮಚಂದ್ರ ನಮಗೆ ಕಲಿಸಿದ್ದಾರೆ. ಅವರ ಆದರ್ಶವನ್ನು ನಾವು ಇಟ್ಟುಕೊಳ್ಳಬೇಕು. ಇವತ್ತು ರಾಮ-ರಾವಣ ಇಬ್ಬರು ನಮ್ಮ ಮುಂದೆ ಇದ್ದಾರೆ. ನಮಗೆ ಯಾರ ಆದರ್ಶ ಬೇಕು ? ರಾಮನ ಆಯ್ಕೆ ಬೇಕೋ ಅಥವಾ ರಾವಣನ ಆಯ್ಕೆ ಬೇಕೋ, ರಾಮನ ಆಯ್ಕೆ ಮಾಡಿದರೆ ಆದರ್ಶ ರಾಮರಾಜ್ಯ ಸಿಗುವುದು, ರಾವಣನ ಆಯ್ಕೆ ಮಾಡಿದರೆ ಕಿತ್ತು ತಿನ್ನುವ ಆದರ್ಶ ನಾವು ನೋಡಬೇಕಾಗುತ್ತದೆ. ರಾಮರಾಜ್ಯದಲ್ಲಿ ಸ್ತ್ರೀಯರು ಸುಖ-ಶಾಂತಿ-ನೆಮ್ಮದಿಯಲ್ಲಿದ್ದರು, ರಾಜರು ಆದರ್ಶವಾಗಿದ್ದರು. ಹಾಗಾಗಿ ನಾವು ರಾಷ್ಟ್ರ ರಕ್ಷಣೆ ಹಿತದೃಷ್ಟಿಯಿಂದ ರಾಜರುಗಳನ್ನು ಆಯ್ಕೆ ಮಾಡಬೇಕು, ಉಪನಿಷತ್ತುಗಳಲ್ಲಿ ‘ಮಾತೃದೇವೋಭವ’, ‘ಪಿತೃದೇವೋಭವ’ ಎಂದು ಹೇಳಲಾಗಿದೆ, ನಮ್ಮ ಗುರುಗಳು ಅದರೊಂದಿಗೆ ‘ರಾಷ್ಟ್ರದೇವೋಭಾವ’ ಎಂದು ಸೇರಿಸಿದ್ದಾರೆ. ರಾಷ್ಟ್ರದೇವೋಭಾವ ಎಂದರೆ ನಮ್ಮ ರಾಷ್ಟ್ರದ ಬಗ್ಗೆ ಪ್ರೇಮ ಹಾಗೂ ಗೌರವ ಇರುವವರು ಈ ನೆಲದ ನಿಜವಾದ ರಾಷ್ಟ್ರ ಪ್ರೇಮಿಗಳು. ರಾಷ್ಟ್ರ-ಧರ್ಮವನ್ನು ಗೌರವಿಸುವವರನ್ನು ರಾಜನನ್ನಾಗಿ ಮಾಡಬೇಕು. ಅಂತಹವರು ಮಾತ್ರ ನಮ್ಮ ರಾಷ್ಟ್ರವನ್ನು ಮುಂದೆ ನಡೆಸಲು ಸಾಧ್ಯ’ ಎಂದು ಶ್ರೀಗಳು ಆಶೀರ್ವಚನ ನೀಡಿದರು.

ಶ್ರೀ. ರವೀಂದ್ರ ವರ್ಣ ಇವರು ಮಾತನಾಡಿ, ಮತದಾನದ ದಿನ ರಜೆ ತೆಗೆದುಕೊಂಡು ಯಾವುದೇ ಪ್ರವಾಸಕ್ಕೆ ಹೋಗದೇ, ಎಲ್ಲಾ ಹಿಂದೂಗಳು ಕಡ್ಡಾಯವಾಗಿ ತಮ್ಮ ಮತವನ್ನು ಚಲಾಯಿಸಬೇಕು. ಮುಂಬರುವ ದಿನಗಳಲ್ಲಿ ಮತವನ್ನು ಚಲಾಯಿಸುವಾಗ ಈ ನಾಯಕ ಅಥವಾ ನಾಯಕಿ ನಮ್ಮ ಹಿಂದೂ ಧರ್ಮದ ರಕ್ಷಣೆ ಮಾಡುತ್ತಾರೆಯಾ ಎಂಬುದನ್ನು ಅಲೋಚನೆ ಮಾಡಿ ನಮ್ಮ ಮತದಾನ ಮಾಡಬೇಕು’ ಎಂದರು.

ಡಾ. ಗಿರಿಧರ್ ಉಪಾಧ್ಯಾಯ ಇವರು ಮಾತನಾಡಿ, ನಾವೆಲ್ಲರೂ 1 ಗಂಟೆ ಈ ಧರ್ಮರಕ್ಷಣೆಗಾಗಿ ನಿಂತು ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸೋಣ, ನಾವೆಲ್ಲರೂ ಗಡಿಯಲ್ಲಿ ವರ್ಷಗಟ್ಟಲೆ ಮಳೆ, ನೀರು, ಬಿಸಿಲಿನಲ್ಲಿಯೂ ದೇಶವನ್ನು ರಕ್ಷಿಸುವ ಸೈನಿಕರ ಆದರ್ಶವನ್ನು ಇಟ್ಟುಕೊಳ್ಳಬೇಕು. ಈ ದಿನ ಇಂತಹ ಮಳೆಯಲ್ಲಿಯೂ ನೀವೆಲ್ಲರೂ ಧರ್ಮರಕ್ಷಣೆಗಾಗಿ ನಿಂತಿರುವುದು ಶ್ಲಾಘನೀಯ. ಬಾಂಧವರೇ ಯಾರು ಈ ದೇಶದ, ಈ ದೇಶದ ಸಂಸ್ಕೃತಿಯನ್ನು ಗೌರವಿಸುವುದಿಲ್ಲ, ಕಾನೂನಿನ ವಿರುದ್ಧವಾಗಿ ಮಾತನಾಡುತ್ತಾರೆ, ದಂಗೆ ಮಾಡುತ್ತಾರೆ ಹಲಾಲ್ ಸರ್ಟಿಫಿಕೇಶನ್ ನ ದೇಶವಿರೋಧಿ ಮೂಲಕ ಉತ್ಪಾದನೆಗಳನ್ನು ಮಾರಾಟ ಮಾಡುತ್ತಾರೆ, ಅಂಥಹವರ ಬಳಿ ಯಾವುದೇ ವ್ಯಾಪಾರ ವಹಿವಾಟನ್ನು ನಾವು ಮಾಡಬಾರದು, ಆತಹವರ ವಿರುದ್ಧ ಹಿಂದೂಗಳು ಒಗ್ಗೂಡಿ ಬಹಿಷ್ಕರಿಸಬೇಕು. ಬೆಂಗಳೂರಿನ ಸಾದರಹಳ್ಳಿಯ ಶಿಲೆಗಳಿಂದಲೇ ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣವಾಗುತ್ತಿದೆ, ಅಂತಹ ಶ್ರೇಷ್ಠ ಭೂಮಿ ನಮ್ಮ ಬೆಂಗಳೂರಾಗಿದೆ’, ಎಂದರು.

ಹಿಂದೂ ಜನಜಾಗೃತಿ ಸಮಿತಿಯ ಸೌ. ಭವ್ಯ ಗೌಡ ಮಾತನಾಡಿ, ಹಿಂದೂ ಧರ್ಮ ಪರಂಪರೆಯ ರಕ್ಷಣೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಇಂದು ನಾವು ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆ ಮಾಡಿ, ನಮ್ಮ ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ. ಇದರಿಂದ ನಮ್ಮ ಎಷ್ಟೋ ಹೆಣ್ಣುಮಕ್ಕಳು ಇಂದು ಲವ್ ಜಿಹಾದ್ ಷಡ್ಯಂತ್ರಕ್ಕೆ ಬಲಿಯಾಗುತ್ತಿದ್ದಾರೆ. ಸುಳ್ಳು ಪ್ರೇಮ ಜಾಲದಲ್ಲಿ ಸಿಲುಕಿ ನಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದೇವೆ. ಇಡೀ ವಿಶ್ವಕ್ಕೆ ಆದರ್ಶ ನಮ್ಮ ಭಾರತ ದೇಶದಲ್ಲಿ ನಾವು ಹಲವಾರು ವೀರವನಿತೆಯರನ್ನು ನೋಡಿದ್ದೇವೆ. ಅವರು ರಾಷ್ಟ್ರ ಹಾಗೂ ಧರ್ಮಕ್ಕೆ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟು ಧರ್ಮ ರಕ್ಷಣೆಯನ್ನು ಮಾಡಿದ್ದಾರೆ. ಅಂತಹ ಮಹಿಳೆಯರ ಆದರ್ಶವನ್ನು ನಾವು ಇಟ್ಟುಕೊಂಡು ಧರ್ಮ ರಕ್ಷಣಾ ಕಾರ್ಯದಲ್ಲಿ ಪ್ರತಿಯೊಬ್ಬರೂ ಸಹ ಸಹಭಾಗಿ ಆಗಬೇಕಿದೆ’ ಎಂದರು.
ಅಪರಾಧಿಗಳಿಗೆ ರಕ್ಷಣೆ ನೀಡುವ ಕೆಲಸ ಮಾಡಬಾರದು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button