ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಯಾವುದೇ ಸಕ್ಕರೆ ಕಾರ್ಖಾನೆಯ ಸಾಲ ಮನ್ನಾ ಮಾಡಬಾರದು. ಯಾರೇ ಸಾಲ ಪಾವತಿಸದಿದ್ದರೂ ಅವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ, ಹರ್ಷ ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಚನ್ನರಾಜ ಹಟ್ಟಿಹೊಳಿ ಆಗ್ರಹಿಸಿದ್ದಾರೆ.
ಗುರುವಾರ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು. ನಾನೂ ಸಕ್ಕರೆ ಕಾರ್ಖಾನೆ ಮಾಲೀಕ. ಆದರೆ ನಾನು ಸಾಲ ಮನ್ನಾ ಕೇಳುವುದಿಲ್ಲ. ನಾವು ಸರಿಯಾದ ವೇಳೆಯಲ್ಲಿ ಸಾಲ ಮತ್ತು ಬಡ್ಡಿ ಮರುಪಾವತಿ ಮಾಡುತ್ತಿದ್ದೇವೆ. ಯಾವುದೇ ಪರಿಸ್ಥಿತಿಯಲ್ಲಿ ಸಾಲಮನ್ನಾ ಮಾಡುವ ಕೆಲಸ ನಡೆದಿದ್ದರೆ ಸರ್ಕಾರ ನಿಲ್ಲಿಸಬೇಕು. ಬ್ಯಾಂಕ್ ಠೇವಣಿದಾರರಿಗೆ ಅನ್ಯಾಯವಾಗಬಾರದು. ಅಂಬಾನಿಯಿಂದ ಚನ್ನರಾಜ ಹಟ್ಟಿಹೊಳಿವರೆಗೂ ಒಂದೇ ರೀತಿಯ ಕಾನೂನು ಜಾರಿ ಆಗಬೇಕು ಎಂದು ಆಗ್ರಹಿಸಿದರು.
ಬ್ಯಾಂಕ್‌ನವರು ನಮ್ಮ ಮೇಲೆ ವಿಶ್ವಾಸ ಇಟ್ಟು ಸಾಲ ನೀಡಿರುತ್ತಾರೆ. ಬ್ಯಾಂಕ್‌ನಲ್ಲಿ ಜನಸಾಮಾನ್ಯರು, ರೈತರು, ದಿನದಲೀತರು, ಭಿಕ್ಷುಕರೂ ಹಣ ಠೇವಣಿ ಮಾಡುತ್ತಾರೆ. ಅದು ದುರ್ಬಳಕೆ ಆಗಬಾರದು. ಸಾಲಮನ್ನಾ ಪದವನ್ನು ಎಲ್ಲರೂ ತಮ್ಮ ಡಿಕ್ಷನರಿಯಿಂದ ತೆಗೆದು ಹಾಕಬೇಕು. ಬ್ಯಾಂಕ ಡಿಫಾಲ್ಟರ್ಸ್ ಯಾರೇ ಇರಲಿ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಆಗಬೇಕು ಎಂದು ಚನ್ನರಾಜ ಆಗ್ರಹಿಸಿದರು.
ಮತಾಂತರ ಕಾಯ್ದೆ –
ಸರಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳಲು ಮತಾಂತರ ಕಾಯ್ದೆಯನ್ನು ತರಾತುರಿಯಲ್ಲಿ ಜಾರಿಗೊಳಿಸಲು ಹೊರಟಿದೆ. ಎಲ್ಲ ರಂಗಗಳಲ್ಲೂ ವಿಫಲವಾಗಿರುವ ಸರಕಾರ ತನ್ನ ಅಕ್ರಮಗಳನ್ನು ಮುಚ್ಚಿಕೊಳ್ಳಲು ವಾಮ ಮಾರ್ಗಗಳನ್ನು ಹಿಡಿಯುತ್ತಿದೆ ಎಂದು ಚನ್ನರಾಜ ಹಟ್ಟಿಹೊಳಿ ಆರೋಪಿಸಿದರು.
ಬೆಳಗಾವಿ ಅಧಿವೇಶನ ವೇಳೆ ವಿಧಾನಸಭೆಯಲ್ಲಿ ಮತಾಂತರ ನಿಷೇಧ ಕಾಯ್ದೆ ಮಂಡನೆಯಾಗಿದೆ. ಪರಿಷತ್‌ಗೆ ಈ ಮಸೂದೆ ಕಳುಹಿಸದೇ ವಾಮಮಾರ್ಗದ ಮೂಲಕ ಕಾಯ್ದೆ ಜಾರಿಗೆ ಮುಂದಾಗಿದೆ.
ನಾವು ಮತಾಂತರ ನಿಷೇಧ ಕಾಯ್ದೆ ಜಾರಿಯನ್ನು ಖಂಡಿಸುತ್ತೇವೆ. ಈ ಬಗ್ಗೆ ಬಿ.ಕೆ. ಹರಿಪ್ರಸಾದ್ ನೇತೃತ್ವದಲ್ಲಿ ಇನ್ನೆರಡು ದಿನಗಳಲ್ಲಿ ಕಾಂಗ್ರೆಸ್ಸಿನ ಪರಿಷತ್ ಸದಸ್ಯರ ಸಭೆ ಬೆಂಗಳೂರಲ್ಲಿ ನಡೆಯಲಿದೆ. ಕಾಯ್ದೆ ಜಾರಿ ವಿರುದ್ಧ ಯಾವ ರೀತಿ ಹೋರಾಟ ಮಾಡಬೇಕು ಎಂಬುದನ್ನು ಚರ್ಚಿಸುತ್ತೇವೆ ಎಂದರು.
ರಮ್ಯಾ ದೂರವಿರಲಿ –
ಮಾಜಿ ಸಂಸದೆ, ನಟಿ ರಮ್ಯಾ ರಾಜಕೀಯ ವಿಶ್ಲೇಷಣೆಯಿಂದ ದೂರ ಉಳಿಯುವುದು ಒಳಿತು ಎಂದು ಚನ್ನರಾಜ ಹಟ್ಟಿಹೊಳಿ ಹೇಳಿದರು.
ಸಚಿವ ಅಶ್ವತ್ಥನಾರಾಯಣ ಹಾಗೂ ಎಂ.ಬಿ.ಪಾಟೀಲ್ ಭೇಟಿ ವಿಚಾರವಾಗಿ ರಮ್ಯಾ ಪ್ರತಿಕ್ರಿಯೆ ಕುರಿತು ಮಾತನಾಡಿದ ಚನ್ನರಾಜ ಹಟ್ಟಿಹೊಳಿ, ರಮ್ಯಾ ಅವರು ಬಹಳ ದಿನಗಳಿಂದ ರಾಜಕಾರಣದಿಂದ ದೂರ ಇದ್ದಾರೆ. ಈಗ ಏಕಾಏಕಿ ಸ್ಟೇಟ್ ಮೆಂಟ್ ಗಳನ್ನು ಕೊಡುತ್ತಿರುವುದು ಯಾಕೆ? ರಾಜಕೀಯ ವಿಶ್ಲೇಣೆ ಮಾಡುವುದನ್ನು ರಮ್ಯಾ ನಿಲ್ಲಿಸಲಿ ಎಂದರು.
ಯಡಿಯೂರಪ್ಪನವರನ್ನು ನಾವು ಕೂಡ ಹಲವು ಬಾರಿ ಭೇಟಿಯಾಗಿದ್ದೇವೆ. ವೈಯಕ್ತಿಕವಾಗಿ ಬೊಮ್ಮಾಯಿ ಸಾಹೇಬ್ರನ್ನೂ ಭೇಟಿಯಾಗಿದ್ದೇವೆ. ವೈಯಕ್ತಿಕ ಸಂಬಂಧವೇ ಬೇರೆ ರಾಜಕಾರಣವೇ ಬೇರೆ. ಅಶ್ವತ್ಥನಾರಾಯಣ, ಎಂ.ಬಿ.ಪಾಟೀಲ್ ಭೇಟಿಯಾಗಿದ್ದರೂ ತಪ್ಪಿಲ್ಲ. ಅದರ ಬಗ್ಗೆ ಅವರೇ ಸ್ಪಷ್ಟೀಕರಣ ನೀಡಿದ್ದಾರೆ ಎಂದು ಹೆಳಿದರು.
5 ವೈವಿದ್ಯಮಯ ಕಾರ್ಯಕ್ರಮಗಳೊಂದಿಗೆ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಜನ್ಮದಿನ ಆಚರಣೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ