Belagavi NewsBelgaum NewsKannada NewsKarnataka NewsNational

*ಹೆಚ್ಚಿನ ಬಡ್ಡಿ ನೀಡುವ ಆರೋಪ: ಬೆಳಗಾವಿಯಲ್ಲಿ ಮತ್ತೆರಡು ಕಂಪನಿಗಳ ಮೇಲೆ ದಾಳಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹೆಚ್ಚಿನ ಬಡ್ಡಿ ನೀಡುವುದಾಗಿ ಸಾರ್ವಜನಿಕರಿಗೆ ಆಮಿಷವೊಡ್ಡಿ ಕೋಟ್ಯಂತರ ರೂಪಾಯಿ ಹಣ ಸಂಗ್ರಹಿಸುತ್ತಿದ್ದ ಆರೋಪದ ಮೇಲೆ ಬೆಳಗಾವಿ ನಗರದಲ್ಲಿ ಮತ್ತೆರಡು ಫೈನಾನ್ಸ್ ಕಂಪನಿಗಳ ಮೇಲೆ ಅಧಿಕಾರಿಗಳು ಜಂಟಿ ದಾಳಿ ಮಾಡಿದ್ದಾರೆ.

ಇತ್ತೀಚೆಗೆ ಶಿವಂ ಅಸೋಸಿಯೇಟ್ಸ್ ಹಾಗೂ ಆದಿತ್ಯರಾಜ್ ಕ್ಯಾಪಿಟಲ್ ವಿರುದ್ಧ ನಡೆದ ಕ್ರಮದ ಬೆನ್ನಲ್ಲೆ ಶುಕ್ರವಾರ ರಾತ್ರಿ ಸಿಟಿ ಇಂಡೆಕ್ಸ್ ಹಾಗೂ ಗ್ರೋಧನ್ ಎಲ್‌ಎಲ್‌ಪಿ ಎಂಬ ಕಂಪನಿಗಳ ಮೇಲೆ ದಾಳಿ ನಡೆಸಲಾಗಿದೆ.

Home add -Advt

ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಆದೇಶದ ಮೇರೆಗೆ ಉಪವಿಭಾಗಾಧಿಕಾರಿ ಶ್ರವಣಕುಮಾರ್ ನಾಯಕ್ ನೇತೃತ್ವದಲ್ಲಿ ಕಂದಾಯ, ಸಹಕಾರ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳ ತಂಡ ಬೆಳಗಾವಿಯ ಟಿಳಕವಾಡಿಯಲ್ಲಿರುವ ಗ್ರೋಧನ್ ಎಲ್‌ಎಲ್‌ಪಿ ಹಾಗೂ ಮಹಾತ್ಮಾ ಫುಲೆ ರಸ್ತೆಯಲ್ಲಿರುವ ಸಿಟಿ ಇಂಡೆಕ್ಸ್ ಕಂಪನಿಗಳ ಕಚೇರಿಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ಕೈಗೊಂಡಿತು

ಪ್ರಾಥಮಿಕ ತನಿಖೆಯಲ್ಲಿ ಈ ಕಂಪನಿಗಳು ಸಾರ್ವಜನಿಕರಿಗೆ ತಿಂಗಳಿಗೆ ಶೇ.4 ರಿಂದ 5ರಷ್ಟು ಹೆಚ್ಚಿನ ಬಡ್ಡಿ ನೀಡುವುದಾಗಿ ಭರವಸೆ ನೀಡಿ ದೊಡ್ಡ ಪ್ರಮಾಣದಲ್ಲಿ ಹಣ ಸಂಗ್ರಹಿಸಿರುವುದು ಬೆಳಕಿಗೆ ಬಂದಿದೆ. 

ಅಧಿಕಾರಿಗಳು ಕಂಪನಿಗಳ ಹಣಕಾಸು ವ್ಯವಹಾರ, ಹೂಡಿಕೆದಾರರ ವಿವರ, ದಾಖಲೆಗಳು ಹಾಗೂ ಇತರೆ ದಾಖಲೆಗಳನ್ನು ತಡರಾತ್ರಿವರೆಗೂ ಪರಿಶೀಲಿಸಿದರು. ಕಾರ್ಯಾಚರಣೆಯ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದರು.

ಉಪವಿಭಾಗಾಧಿಕಾರಿ ಶ್ರವಣಕುಮಾರ್ ನಾಯಕ್ ಮಾಹಿತಿ ನೀಡಿದ್ದು, ಗೋವರ್ಧನ್ ಎಲ್‌ಎಲ್‌ಪಿ ಸಂಸ್ಥೆಯಲ್ಲಿ ಸುಮಾರು 1,100 ಹೂಡಿಕೆದಾರರಿಂದ 38 ಕೋಟಿ ರೂಪಾಯಿ ಹಣ ಸಂಗ್ರಹಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿದೆ.ಕೈಸಾಲ ರೂಪದಲ್ಲಿ ಹಣ ಪಡೆದು ಹೂಡಿಕೆ ಮಾಡಿಸಿಕೊಂಡಿರುವ ಮಾಹಿತಿ ಲಭ್ಯವಾಗಿದೆ ಎಂದು ತಿಳಿಸಿದರು.

ಇನ್ನೊಂದೆಡೆ ಸಿಟಿ ಇಂಡೆಕ್ಸ್ ಸಂಸ್ಥೆಯಲ್ಲಿ ಸುಮಾರು 1,500 ಹೂಡಿಕೆದಾರರು 30 ಕೋಟಿ ರೂಪಾಯಿ ಹೂಡಿಕೆ ಮಾಡಿರುವುದು ಪತ್ತೆಯಾಗಿದೆ. ಡಿಬೆಂಚರ್ ರೂಪದಲ್ಲಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿರುವುದು ದಾಖಲೆಗಳಿಂದ ಗೊತ್ತಾಗಿದೆ. ಕಂಪನಿ ಸೆಬಿಯಲ್ಲಿ ನೋಂದಣಿಯಾಗಿರುವ ಮಾಹಿತಿ ಲಭ್ಯವಾಗಿದ್ದು, ಅದರ ಕಾನೂನುಬದ್ಧತೆ ಹಾಗೂ ಹಣಕಾಸು ವ್ಯವಹಾರಗಳ ಕುರಿತು ಅಧಿಕಾರಿಗಳು ಸವಿಸ್ತಾರ ತನಿಖೆ ನಡೆಸುತ್ತಿದ್ದಾರೆ.

ಗ್ರೋಧನ್ ಎಲ್‌ಎಲ್‌ಪಿ ಕುರಿತು ಪ್ರಾಥಮಿಕ ತನಿಖಾ ವರದಿಯನ್ನು ಇಂದು ಜಿಲ್ಲಾಧಿಕಾರಿಗೆ ಸಲ್ಲಿಸಲಾಗುವುದು. ಸಿಟಿ ಇಂಡೆಕ್ಸ್ ಸಂಸ್ಥೆಯ ಮೇಲಿನ ಪರಿಶೀಲನೆ ಕೂಡ ಶನಿವಾರ ಮುಂದುವರಿಯಲಿದ್ದು, ಸಂಪೂರ್ಣ ವರದಿ ಸಲ್ಲಿಸಿದ ಬಳಿಕ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಶ್ರವಣಕುಮಾರ್ ನಾಯಕ್ ತಿಳಿಸಿದ್ದಾರೆ.

ಸಾರ್ವಜನಿಕರ ಹಣ ದುರುಪಯೋಗ ಮಾಡಿಕೊಂಡಿರುವ ಆರೋಪದ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದ್ದು, ಟಿಳಕವಾಡಿ ಹಾಗೂ ಶಹಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣಗಳು ದಾಖಲಾಗಿವೆ.

Related Articles

Back to top button