ಅಕ್ರಮ ಮರಳು ಸಾಗಾಣಿಕೆ ಕಂಡುಬಂದಲ್ಲಿ ಡಿಸಿ, ಎಸ್ಪಿ ವಿರುದ್ಧವೇ ಕ್ರಮ- ಕೆಡಿಪಿ ಸಭೆಯಲ್ಲಿ ಎಚ್ಚರಿಕೆ
ಪ್ರಗತಿವಾಹಿನಿ ಸುದ್ದಿ, ರಾಯಚೂರು – ಮಿತಿ ಮೀರಿ ಹಾಗೂ ರಾಜಧನ ವಂಚಿಸಿ ಅಕ್ರಮವಾಗಿ ಮರಳು ಸಾಗಾಣಿಕೆ ಕಂಡುಬಂದಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲು ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ರಾಜ್ಯದ ಉಪ ಮುಖ್ಯಮಂತ್ರಿಗಳು, ಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮಣ ಸವದಿ ಅವರು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.
ಅವರು ಜ.25ರ ಸೋಮವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇನ್ನು ಮುಂದೆ ಯಾವುದೇ ಕಾರಣಕ್ಕೂ ಜಿಲ್ಲೆಯಲ್ಲಿ ಅನಧೀಕೃತ ಮರಳು ಸಾಗಾಣಿಕೆ ಆಗಬಾರದು, ಎಂಥ ಬಲಾಢ್ಯರೇ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡಿದ್ದಲ್ಲಿ ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು, ಒಂದು ವೇಳೆ ತಮ್ಮ ಹೆಸರಿನಲ್ಲಿಯೇ ಅನಧೀಕೃತ ಮರಳು ಸಾಗಾಣಿಕೆ ಆದರೂ ಸಂಬಂಧಿಸಿದ ವಾಹನವನ್ನು ಸೀಜ್ ಮಾಡಿ ಕಾನೂನು ರೀತಿಯ ಕ್ರಮಕೈಗೊಳ್ಳಬೇಕು ಎಂದು ಅವರು ತಾಕೀತು ಮಾಡಿದರು.
ಗೃಹ ಅಥವಾ ಇತರೇ ನಿರ್ಮಾಣ ಚಟುವಟಿಕೆಗಳಿಗೆ ಮರಳಿನ ಅಗತ್ಯವಿದ್ದಲ್ಲಿ ನಿಯಮಾನುಸಾರ ರಾಜಧನ ಪಾವತಿಸಿ ಮರಳು ಪಡೆಯಬೇಕು, ಇದರಲ್ಲಿ ಯಾವುದೇ ಅಧಿಕಾರಿಯ ಲೋಪವಾದಲ್ಲಿ ಸಂಬಂಧಿಸಿದವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಉಪ ಮುಖ್ಯಮಂತ್ರಿಗಳು ತಿಳಿಸಿದರು.
16 ಟನ್‌ಗೆ ಅನುಮತಿ ಪಡೆದು 40 ರಿಂದ 45 ಟನ್ ಮರಳು ಸಾಗಾಣಿಕೆ ಮಾಡುವ ವಾಹನಗಳನ್ನು ಕೂಡಲೇ ಪತ್ತೆ ಮಾಡಿ ಅವುಗಳನ್ನು ಸೀಜ್ ಮಾಡಿ ದಂಡ ವಿಧಿಸಬೇಕು, ಅದನ್ನು ಒಂದೇ ಒಂದು ದಿನ ಮಾಡಿದ್ದಲ್ಲಿ ಓವರ್ ಲೋಡ್ ಮರಳು ಸಾಗಾಣಿಕೆಗೆ ಕಡಿವಾಣ ಬೀಳಲಿದೆ, ಮರಳುಗಾರಿಕೆಗೆ ಪರವಾನಗಿ ನೀಡಿ, ಓವರ್ ಲೋಡ್ ಮೂಲಕ ಮರಳು ಸಾಗಿಸುವ ಪ್ರಕರಣಗಳು ಕಂಡುಬಂದರೂ ಕಾನೂನು ರೀತಿಯ ಕ್ರಮವಹಿಸದ ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ವಿಶ್ವನಾಥ್ ಅವರನ್ನು ಕೂಡಲೇ ಅಮಾನತ್ತುಗೊಳಿಸುವಂತೆ ಜಿಲ್ಲಾಧಿಕಾರಿಯವರಿಗೆ ಸೂಚಿಸಿದರು.
ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿಗಳು ಅಕ್ರಮ ಹಾಗೂ ಓವರ್ ಲೋಡ್ ಮರಳು ಸಾಗಾಣಿಕೆಯನ್ನು ನಿಯಂತ್ರಿಸುವಲ್ಲಿ ವಿಫಲರಾಗಿರುವುದಕ್ಕೆ ತೀವ್ರ ಅಸಮಧಾನ ವ್ಯಕ್ತ ಪಡಿಸಿದ ಉಪ ಮುಖ್ಯಮಂತ್ರಿಗಳು, ಕಚೇರಿಯಿಂದ ಹೊರ ಬಂದು ಫೀಲ್ಡ್ಗೆ ಇಳಿಯುವಂತೆ ಆರ್‌ಟಿಒ ವಿಶಾಲ್‌ಗೆ ತಾಕೀತು ಮಾಡಿದರು.
ಪೊಲೀಸ್ ಅಧಿಕಾರಿಗಳು ಅಕ್ರಮ ಮರಳು ಸಾಗಾಣಿಕೆ ತಡೆಗಟ್ಟುವಲ್ಲಿ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಬೇಕು, ಇಲ್ಲದಿದ್ದಲ್ಲಿ, ಎಸ್ಪಿ ಅವರ ಸಹಕಾರವಿದೆ ಎಂದೇ ತಿಳಿಯಬೇಕಾಗುತ್ತದೆ, ಈ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಮ್ಮ ಕೆಳಗಿನ ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಅಕ್ರಮ ಮರಳು ಸಾಗಾಣಿಕೆಯನ್ನು ತಡೆಗಟ್ಟಲು ಅಗತ್ಯ ಕ್ರಮವಹಿಸುವಂತೆ ತಿಳಿಸಿದರು.
ಮಟ್ಕಾ ದಂಧೆ: ಜಿಲ್ಲೆಯಲ್ಲಿ ಮಟ್ಕಾ ದಂಧೆಗೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು, ಯಾವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಟ್ಕಾ ದಂಧೆ ನಡೆಯುವ ಕುರಿತು ವರದಿಯಾಗುವುದೋ ಸಂಬಂಧಿಸಿದ ಠಾಣೆಯ ಇನ್ಸ್ಪೆಕ್ಟರ್‌ನನ್ನು ಕೂಡಲೇ ಅಮಾನತ್ತು ಮಾಡಲಾಗುವುದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಈ ನಿಟ್ಟಿನಲ್ಲಿ ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದರು.
ಇನ್‌ಇಕೆಎಸ್‌ಆರ್‌ಟಿಸಿಯ ರಾಯಚೂರು ಘಟಕದ ಚಾಲಕರು ಹಾಗೂ ನಿರ್ವಾಹಕರು ಕೂಡಲೇ ಕರ್ತವ್ಯಕ್ಕೆ ಹಾಜರಾಗಬೇಕು, ಕರ್ತವ್ಯಕ್ಕೆ ಗೈರು ಹಾಜರಾದವರಿಗೆ ಕೂಡಲೇ ನೋಟೀಸ್ ನೀಡಿ 5 ದಿನದೊಳಗೆ ಕರ್ತವ್ಯಕ್ಕೆ ಹಾಜರಾಗುವಂತೆ ತಿಳಿಸಿ, ಕರ್ತವ್ಯಕ್ಕೆ ಹಾಜರಾಗದಿದ್ದಲ್ಲೀ ಅಮಾನತು ಮಾಡಿ, ಜಿಲ್ಲೆಯಲ್ಲಿ ಈ ಹಿಂದೆ ಚಾಲನೆಯಲ್ಲಿದ್ದ ಹಳೆಯ ರೂಟ್‌ಗಳನ್ನು ಕೂಡಲೇ ಆರಂಭಿಸಬೇಕು, ಹೊಸ ರೂಟ್‌ಗಳ ಸರ್ವೆ ಕಾರ್ಯ ಪ್ರಾರಂಭಿಸುವಂತೆ ವಿಭಾಗೀಯ ನಿಯಂತ್ರಣಾಧಿಕಾರಿಗೆ ಸೂಚಿಸಿದರು.
ಜಿಲ್ಲೆಯ ತುಂಗಭದ್ರ ಎಡದಂಡೆ ಕಾಲುವೆ ಕೊನೆಭಾಗದ ರೈತರಿಗೆ ನೀರಿನ ಕೊರತೆ ನೀಗಿಸಲು ಹೆಚ್ಚುವರಿ ನೀರು ಪಡೆಯಲು ಪ್ರಯತ್ನಿಸಲಾಗುತ್ತದೆ, ನವಲಿ ಜಲಾಶಯ ನಿರ್ಮಾಣಕ್ಕೆ ವಿಸ್ತತ ಯೋಜನೆ ಸಿದ್ದಪಡಿಸಲು ಸಿದ್ದತೆಗಳು ಆರಂಭವಾಗಿವೆ, ಈ ಕುರಿತು ಪ್ರಯತ್ನಗಳು ನಡೆಯುತ್ತಿವೆ ಎಂದರು.
ಯರಮರಸ್ ವಿಭಾಗ ಅಭಿಯಂತರ ಪ್ರಕಾಶ ಮಾಹಿತಿ ನೀಡಿ ಕೊನೆಭಾಗದ ನೀರು ಒದಗಿಸಲು ನೀರಿನ ಕೊರೆತೆಯಿದೆ. 7 ಟಿಎಂಸಿಯಷ್ಟು ನೀರಿನ ಕೊರತೆಯ ಕಾರಣ ನೀರು ಹರಿಕೆ ಪ್ರಮಾಣ ಕಡಿಮೆಯಾಗಿದೆ ಎಂದರು. ಸಮರ್ಪಕ ಮಾಹಿತಿ ನೀಡದ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡು ಉಸ್ತುವಾರಿ ಸಚಿವರು ಸಮರ್ಪಕ ಮಾಹಿತಿಯೊಂದಿಗೆ ಸಭೆಗೆ ಹಾಜರಾಗುವಂತೆ ಸೂಚಿಸಿದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ. ಮಲ್ಲಿಕಾರ್ಜುನ್ ಮಾತನಾಡಿ, ಜಿಲ್ಲೆಯಲ್ಲಿ ರಸಗೊಬ್ಬರ ಕೊರತೆಯಾಗದಂತೆ ಎಚ್ಚರ ವಹಿಸಲಾಗಿದೆ, 51,200 ಮೆಟ್ರಿಕ್ ಟನ್ ಗೊಬ್ಬರ ಬಫರ್ ಸಂಗ್ರಹವಿದೆ, ಇನ್ನೂ 4 ದಿನಗಳಲ್ಲಿ 4 ರೇಕ್ ಗೊಬ್ಬರ ಪೂರೈಕೆಯಾಗಲಿದೆ ಎಂದರು.
ಭತ್ತ ಸೇರಿದಂತೆ ಇತರೆ ಬೆಳೆಗಳಿಗೆ ರಸಗೊಬ್ಬರ ಬಳಕೆ ಹೆಚ್ಚಾಗುತ್ತಿದ್ದು, ಮುಂದಿನ ದಿನಗಳಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ಭಾಗದ ಜಮೀನುಗಳಿಗೆ ಇದರಿಂದ ತೊಂದರೆಯಾಗಲಿದೆ, ಪ್ರತಿ ಎಕರೆ ಭತ್ತ ಬೆಳೆಯಲು ಕೃಷಿ ಇಲಾಖೆ ಸೂಚಿಸಿರುವುದಕ್ಕಿಂತ ಹೆಚ್ಚಿನ ಪ್ರಮಾಣ ಬಳಕೆ ಆತಂಕಕಾರಿಯಾಗಿದೆ, ಕೃಷಿ ಇಲಾಖೆಯ ಅಧಿಕಾರಿಗಳು ಈ ಕುರಿತು ವ್ಯಾಪಕವಾಗಿ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದರು.
ಪ್ರವಾಹದಿಂದ ಸ್ಥಳಾಂತರವಾಗಬೇಕಿದ್ದ ಹೊಸ ಗುರ್ಜಾಪುರ ಗ್ರಾಮದಲ್ಲಿ ನಿರ್ಮಾಣವಾಗಿರುವ ಮನೆಗಳಿಗೆ ತೆರಳಲು ಅಲ್ಲಿನ ನಿವಾಸಿಗಳು ಸಿದ್ದರಿದ್ದು, ಅಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡುವಂತೆಯೂ ಅವರು ತಿಳಿಸಿದರು.
ಜಿಲ್ಲೆಯ ಅಭಿವೃದ್ದಿ ದಿಸೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಸರ್ಕಾರದ ಅನುದಾನವನ್ನು ಸದ್ಭಳಖೆ ಮಾಡಿಕೊಂಡು ಪ್ರಾಮಾಣಿಕ ಹಾಗೂ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕು, ಜಿಲ್ಲೆಯಲ್ಲಿ ಕುಡಿಯುವ ನೀರು, ರಸ್ತೆ ಸೇರಿದಂತೆ ಇನ್ನಿತರೆ ಮೂಲಭೂತ ಸೌಕರ್ಯ ಕಲ್ಪಿಸಲು ವಿವಿಧ ಇಲಾಖೆಯ ಅಧಿಕಾರಿಗಳಿಗೆ ವಹಿಸುವ ಜವಬ್ದಾರಿಯನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು, ಅಭಿವೃದ್ದಿ ವಿಷಯದಲ್ಲಿ ಯಾವುದೇ ಕಾರಣಕ್ಕೂ ರಾಜಿಯಾಗುವ ಪ್ರಮೇಯವೇ ಇಲ್ಲ, ಅಧಿಕಾರಿಗಳು ಕೀಳರಿಮೆ ಬಿಟ್ಟು ಕಾರ್ಯನಿರ್ವಹಿಸಬೇಕು, ಅಭಿವೃದ್ದಿಗೆ ಸ್ಪಂದಿಸಬೇಕು ಎಂದರು.
ಮುಂದಿನ ತ್ರೈಮಾಸಿಕ ಕೆಡಿಸಿ ಸಭೆಯೊಳಗೆ ಬಾಕಿ ಉಳಿದ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು, ಪ್ರತಿ 15 ದಿನಗಳಿಗೊಮ್ಮೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇಲಾಖೆಯಲ್ಲಿ ಕೈಗೊಂಡಿರುವ ಕಾರ್ಯ ಚಟುವಟಿಕೆಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರಬೇಕು, ಅವರ ಸಲಹೆ ಸೂಚನೆಗಳನ್ನು ಪಡೆಯಬೇಕು, ಸಭೆಗೆ ಬರುವಾಗ ಸಂಪೂರ್ಣ ಮಾಹಿತಿಯೊಂದಿಗೆ ಹಾಜರಾಗಬೇಕು, ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಹಕಾರ ಅತಿ ಅವಶ್ಯಕವಾಗಿದೆ ಎಂದರು.
ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು, ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕು, ಪ್ರೋತ್ಸಾಹ ನೀಡಿದ್ದಲ್ಲೀ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಪುನಃ ಎಚ್ಚರಿಸಿದರು.
ಇದೇ ಸಂದರ್ಭದಲ್ಲಿ ಲೋಕೋಪಯೋಗಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಸಾರ್ವಜನಿಕ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಕೊಳಚೆ ನಿರ್ಮೂಲನಾ ಮಂಡಳಿ, ಜೆಸ್ಕಾಂ, ಪಶುಪಾಲನೆ, ಸಹಕಾರ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿಯನ್ನು ಪರಿಶೀಲಿಸಲಾಯಿತು.
ವೇದಿಕೆಯಲ್ಲಿದ್ದ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಆದಿಮನಿ ವೀರಲಕ್ಷ್ಮಿ, ಕೊಪ್ಪಳ ಸಂಸದ ಸಂಗಣ್ಣ ಕರಡಿ, ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖ್ ತ್ವನೀರ್ ಆಸೀಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ಅಮೃತ್ ನಿಕ್ಕಂ ಮಾತನಾಡಿದರು.
ರಾಯಚೂರು ನಗರ ಶಾಸಕ ಡಾ. ಶಿವರಾಜ ಪಾಟೀಲ್, ದೇವದುರ್ಗದ ಶಾಸಕ ಕೆ. ಶಿವನಗೌಡ ನಾಯಕ್, ಲಿಂಗಸೂಗೂರು ಶಾಸಕ ಡಿ.ಎಸ್. ಹೂಲಗೇರಿ, ಸಿಂಧನೂರು ಶಾಸಕ ವೆಂಕಟರಾವ್ ನಾಡಗೌಡ, ಮಾನವಿ ಶಾಸಕ ರಾಜಾ ವೆಂಕಟಪ್ಪ ನಾಯಕ್, ರಾಯಚೂರು ಗ್ರಾಮೀಣ ಶಾಸಕ ಬಸವನಗೌಡ ದದ್ದಲ್, ವಿಧಾನ ಪರಿಷತ್ ಶಾಸಕ ಬಸವರಾಜ ಪಾಟೀಲ್ ಇಟಗಿ ಸೇರಿದಂತೆ ಇತರೆ ಜನಪ್ರತಿನಿಧಿಗಳು ಸಭೆಯಲ್ಲಿ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಚರ್ಚಿಸಿದರು.
ಸಂಬಂಧಿಸಿದ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ