Belagavi NewsBelgaum NewsKarnataka News

*ಅಂತಾರಾಷ್ಟ್ರೀಯ ಯೋಗ ದಿನಾಚರಣೆ: ಅಗತ್ಯ ಸಿದ್ಧತೆಗೆ ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ ಸೂಚನೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: “11 ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ”ಯನ್ನು ಸುವರ್ಣ ವಿಧಾನ ಸೌಧದ ಆವರಣದಲ್ಲಿ ಜೂನ್.21 ರಂದು ಆಚರಿಸಲಾಗುವುದು.  ಸಂಬಂಧಿಸಿದ ಎಲ್ಲ ಇಲಾಖೆಗಳು ಯೋಗ ದಿನಾಚರಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ ಅವರು ತಿಳಿಸಿದರು .

ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ (ಜೂ.10) ನಡೆದ “11 ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ” ಪೂರ್ವ ಸಿದ್ಧತೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

“ಒಂದು ಭೂಮಿ ಒಂದು ಆರೋಗ್ಯಕ್ಕಾಗಿ ಯೋಗ” ಎಂಬ ಘೋಷ ವಾಕ್ಯದೊಂದಿಗೆ ವಿಶ್ವದಾದ್ಯಂತ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಜಿಲ್ಲೆ ಯಲ್ಲಿಯೂ ಸಹ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಲು ಸಕಲ‌ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು.

ಕಾರ್ಯಕ್ರಮ‌ದ ಕುರಿತು ಮುದ್ರಿಸಲಾಗುವ ಆಮಂತ್ರಣ‌ ಪತ್ರಿಕೆಗಳನ್ನು ಮುದ್ರಿಸಿ ಗಣ್ಯರುಗಳಿಗೆ ತಲುಪಿಸಬೇಕು.‌ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗದಂತೆ ನಿಗಾವಹಿಸಬೇಕು. 

Home add -Advt

ಯೋಗ ದಿನಾಚರಣೆ ಕುರಿತು ಜಿಲ್ಲೆಯಲ್ಲಿ ವ್ಯಾಪಕ ಪ್ರಚಾರ ಕೈಗೊಳ್ಳಬೇಕು. ಕಾರ್ಯಕ್ರಮದ ಸ್ಥಳದಲ್ಲಿ ಆರೋಗ್ಯ ಇಲಾಖೆಯಿಂದ ತುರ್ತು ಚಿಕಿತ್ಸಾ ಘಟಕ‌ದ ವ್ಯವಸ್ಥೆ ಮಾಡಿಟ್ಟುಕೊಳ್ಳಬೇಕು. 

 ಉಪಹಾರ ವ್ಯವಸ್ಥೆ, ಕುಡಿಯುವ ನೀರು, ವಾಹನ ನಿಲುಗಡೆಗೆ ವ್ಯವಸ್ಥೆ, ವಿದ್ಯುತ್ ಇನ್ನಿತರ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಅಗತ್ಯ ಕ್ರಮವಹಿಸಲು ಸಂಬಂದಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು.

ಇತರ ಇಲಾಖೆಯ ಅಧಿಕಾರಿಗಳೊಂದಿಗೆ ಸಮನ್ವಯತೆ ಸಾಧಿಸಿಕೊಂಡು ಕಾರ್ಯಕ್ರಮವನ್ನು ಯಶಸ್ವಿಯಾಗಿಸಲು 

ಆಯುಷ್ ಇಲಾಖೆಯ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು.

ಯೋಗ ದಿನಾಚರಣೆ; ಜಾಗೃತಿ ಜಾಥ

ಯೋಗ ದಿನಾಚರಣೆ ಒಂದು ದಿನದ ಮುಂಚಿತವಾಗಿ (ಜೂ.20) ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿ ಬೆಳಿಗ್ಗೆ 8.30 ಗಂಟೆಗೆ ಯೋಗ ದಿನಾಚರಣೆ ಕುರಿತು ಜಾಗೃತಿ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಜಾಥಾದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಳ್ಳಲು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ ತಿಳಿಸಿದರು.

ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಬಸವರಾಜ ಹೆಗ್ಗನಾಯಕ ಮಾತನಾಡಿ ಯೋಗಾಭ್ಯಾಸವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯವಿದೆ. ಈ ಬಾರಿ ಯೋಗ ದಿನಾಚರಣೆ ಹಿನ್ನೆಲೆ ಯೋಗ ಜಾಗೃತಿ ನಡಿಗೆ ಹಾಗೂ ಯೋಗಾಭ್ಯಾಸ ಕಾರ್ಯಕ್ರಮದಲ್ಲಿ ನಗರದ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು ಅಧಿಕ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಹ್ವಾನಿಸಲು ಅಧಿಕಾರಿಗಳಿಗೆ ತಿಳಿಸಿದರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಬಿ ಬಸರಗಿ, ಜಿಲ್ಲಾ ಆಯುಷ್ ಅಧಿಕಾರಿ ಡಾ. ಶ್ರೀಕಾಂತ ಸುಣಧೋಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ವಿವಿಧ ಇಲಾಖೆಯ ಅಧಿಕಾರಿಗಳು, ವಿವಿಧ ಶಾಲಾ-ಕಾಲೇಜು ಸಂಘ-ಸಂಸ್ಥೆಗಳು ಪ್ರತಿನಿಧಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Related Articles

Back to top button