Politics

*ಆಲಮಟ್ಟಿ ಅಣೆಕಟ್ಟು ಎತ್ತರ 524 ಮೀ.ಗೆ ಹೆಚ್ಚಿಸಲು ಅಧಿಸೂಚನೆ ಹೊರಡಿಸುವಂತೆ ಕೇಂದ್ರದ ಮೇಲೆ ಒತ್ತಡ: ಡಿಸಿಎಂ ಡಿ.ಕೆ. ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ: “ಆಲಮಟ್ಟಿ ಅಣೆಕಟ್ಟಿನ ಎತ್ತರವನ್ನು 524 ಮೀಟರ್ ಗೆ ಹೆಚ್ಚಿಸಲು ಅಧಿಸೂಚನೆ ಹೊರಡಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದೇವೆ. ಜತೆಗೆ ಇದಕ್ಕೆ ಅಗತ್ಯ ಭೂಸ್ವಾಧೀನ ಪ್ರಕ್ರಿಯೆ ಮುಂದುವರಿಸಲು ತೀರ್ಮಾನಿಸಿದ್ದೇವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ವಿಜಯಪುರ ಜಿಲ್ಲೆಯ ಕೊಲ್ಹಾರದಲ್ಲಿ ನಾನಾ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ಡಿಸಿಎಂ ಡಿ ಕೆ ಶಿವಕುಮಾರ್ ಅವರು ಶುಕ್ರವಾರ ನೆರವೇರಿಸಿ ಮಾತನಾಡಿದರು.

“ಬಸವಣ್ಣನವರು ಹುಟ್ಟಿದ ನಾಡಿಗೆ ಬಂದು, ಇಲ್ಲಿನ ಶರಣರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿರುವುದು ನನ್ನ ಭಾಗ್ಯ. ಬುದ್ಧ, ಪ್ರೀತಿ ಹಾಗೂ ಶಾಂತಿ ಎಂದು ಹೇಳುತ್ತಾನೆ. ದುರ್ಯೋಧನ, ಹಠ ಹಾಗೂ ಛಲ ಎಂದು ಹೇಳುತ್ತಾನೆ. ಏಕಲವ್ಯ ಮತ್ತು ಅರ್ಜುನ, ಗುರಿ ಎಂದು ಹೇಳುತ್ತಾರೆ. ಧರ್ಮರಾಯ, ಸುಧರ್ಮ ಎನ್ನುತ್ತಾನೆ. ಕೃಷ್ಣ ತಂತ್ರ ಎಂದರೆ, ಭೀಷ್ಮ ಪ್ರತಿಜ್ಞೆ ಎನ್ನುತ್ತಾನೆ, ಸಂತರು ನಮ್ಮದು ಭಕ್ತಿ ಎನ್ನುತ್ತಾರೆ. ಅಲೆಕ್ಸಾಂಡರ್ ಯುದ್ಧ ಎನ್ನುತ್ತಾನೆ. ಬಸವಣ್ಣ ಸಮಾನತೆ, ಸರ್ವರಿಗೂ ಸಮಬಾಳು, ಸಮಪಾಲು ಎಂದು ಹೇಳುತ್ತಾರೆ” ಎಂದರು.

“ಶ್ರೀಮಂತರು ಆಸ್ತಿ ಬಗ್ಗೆ ಆಲೋಚಿಸುತ್ತಾರೆ. ಹಸಿದವರು ಉದ್ಯೋಗ, ಊಟದ ಬಗ್ಗೆ ಚಿಂತಿಸುತ್ತಾರೆ. ಶಾಂತಿ, ಪ್ರೀತಿ, ಭಕ್ತಿ, ಸಮಾನತೆ, ಅನ್ನ ನೀಡುವುದು ಕಾಂಗ್ರೆಸ್ ಪಕ್ಷದ ನಂಬಿಕೆ. ನೀವು ಶಿವಾನಂದ ಪಾಟೀಲ್ ಅವರನ್ನು ಸತತವಾಗಿ ಆಯ್ಕೆ ಮಾಡುತ್ತಿದ್ದೀರಿ. ಅವರು ಸೇರಿದಂತೆ ಈ ರಾಜ್ಯದಲ್ಲಿ 136 ಶಾಸಕರನ್ನು ಆಯ್ಕೆ ಮಾಡಿ ಬಲಿಷ್ಠ ಸರ್ಕಾರವನ್ನು ಅಧಿಕಾರಕ್ಕೆ ತಂದಿದ್ದೀರಿ. ಅದಕ್ಕಾಗಿ ನಿಮ್ಮೆಲ್ಲರ ಪಾದಗಳಿಗೆ ಸಾಷ್ಟಾಂಗ ನಮಸ್ಕಾರ ಅರ್ಪಿಸುತ್ತೇನೆ” ಎಂದರು.

Home add -Advt

“ನಾವು ಬಡವರ ಬದುಕಿನ ಬಗ್ಗೆ ಆಲೋಚಿಸುತ್ತೇವೆ. ಬಡವರ ನೋವು ಹಂಚಿಕೊಳ್ಳಲು ಬಯಸುತ್ತೇವೆ. ಬಸವಣ್ಣನವರ ಆಶಯದಂತೆ ಸರ್ವರಿಗೂ ಸಮಬಾಳು, ಸಮಪಾಲು ಎಂದು ಸರ್ಕಾರ ನಡೆಸುತ್ತಿದ್ದೇವೆ. ನಮ್ಮ ಸರ್ಕಾರ ಬಸವಣ್ಣ ಅವರನ್ನು ನಮ್ಮ ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದೆ. ನಿಮ್ಮ ಬದುಕನ್ನು ಉದ್ಧಾರ ಮಾಡಬೇಕು ಎಂಬ ಹಂಬಲ ನಮ್ಮ ಶಿವಾನಂದ ಪಾಟೀಲ್ ಅವರಿಗಿದೆ. ಅವರು ನನ್ನನ್ನು ಭೇಟಿ ಮಾಡಿದಾಗೆಲ್ಲ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡುತ್ತಾರೆ” ಎಂದು ತಿಳಿಸಿದರು.

“ದೇವರು ನಮಗೆ ವರ ಅಥವಾ ಶಾಪ ನೀಡುವುದಿಲ್ಲ. ಕೇವಲ ಅವಕಾಶ ಮಾತ್ರ ನೀಡುತ್ತಾನೆ. ನಮಗೆ ಸಿಕ್ಕ ಅವಕಾಶದಲ್ಲಿ ನಾವು ಏನು ಮಾಡುತ್ತೇವೆ ಎಂಬುದು ಮುಖ್ಯ. ಮನುಷ್ಯನ ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ, ಜನನ ಉಚಿತ, ಮರಣ ಖಚಿತ. ಈ ಹುಟ್ಟು ಸಾವಿನ ಮಧ್ಯೆ ನಾವು ಏನು ಸಾಧಿಸುತ್ತೇವೆ ಎಂಬುದು ಮುಖ್ಯ” ಎಂದರು.

“ಬಂಜಾರ ಸಮುದಾಯ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ನಿಮ್ಮ ನೋವು ನಮಗೆ ಅರ್ಥವಾಗುತ್ತದೆ. ನೀವು ಯಾವುದೇ ಅಪಪ್ರಚಾರಕ್ಕೆ ಈಡಾಗಬೇಡಿ. ರಾಜ್ಯದಲ್ಲಿ ಬಲಿಷ್ಠ ಸರ್ಕಾರ ಅಧಿಕಾರದಲ್ಲಿದೆ. ಎಲ್ಲಾ ಸಮಾಜಕ್ಕೂ ನ್ಯಾಯವನ್ನು ಒದಗಿಸುವ ಕೆಲಸವನ್ನು ನಾವು ಮಾಡುತ್ತೇವೆ. ಎಲ್ಲರಿಗೂ ಸಮಾನತೆ ಶಕ್ತಿ ತುಂಬುವ ಕೆಲಸ ಮಾಡುತ್ತೇವೆ. ಹೀಗಾಗಿ ಯಾರೂ ಚಿಂತಿಸುವ ಅಗತ್ಯವಿಲ್ಲ” ಎಂದು ಭರವಸೆ ತುಂಬಿದರು.

“ಆಲಮಟ್ಟಿ ಅಣೆಕಟ್ಟಿನ ಎತ್ತರವನ್ನು 524 ಮೀಟರ್ ಗೆ ಎತ್ತರಿಸಲು ನಮ್ಮ ಸರ್ಕಾರ ಸಂಕಲ್ಪ ಮಾಡಿದೆ. ಈ ವಿಚಾರವಾಗಿ ಶಾಸಕರ ಜತೆ ಚರ್ಚೆ ಮಾಡಿದ್ದು, ಭೂಸ್ವಾಧೀನ ಪ್ರಕ್ರಿಯೆ ಮುಂದುವರಿಸಲು ತೀರ್ಮಾನಿಸಿದ್ದೇವೆ. ಇತ್ತೀಚೆಗೆ ನಾನು ಹಾಗೂ ಸಿಎಂ ಕೇಂದ್ರದ ಮಂತ್ರಿಗಳನ್ನು ಭೇಟಿ ಮಾಡಿ ಈ ಬಗ್ಗೆ ಅಧಿಸೂಚನೆ ಹೊರಡಿಸಲು ಒತ್ತಡ ಹಾಕಿದ್ದೇವೆ. ಇದಕ್ಕಾಗಿ ಕೇಂದ್ರ ಸಚಿವರು ಸಭೆಯನ್ನು ಕರೆದಿದ್ದರು. ಆದರೆ ಕಾರಣಾಂತರಗಳಿಂದ ಅದನ್ನು ಮುಂದಕ್ಕೆ ಹಾಕಲಾಗಿದೆ” ಎಂದು ಮಾಹಿತಿ ನೀಡಿದರು.

“ಮಂಡ್ಯ ನಂತರ ಈ ಭಾಗದ ಜಿಲ್ಲೆಗಳು ಸಕ್ಕರೆ ನಾಡಾಗಿ ಮಾರ್ಪಟ್ಟಿವೆ. ಈ ಭಾಗದ ರೈತರ ಬದುಕು ಹಸನಾಗಿಸಲು ನಾವು ಬದ್ಧರಾಗಿದ್ದೇವೆ. ಈ ಭಾಗದಲ್ಲಿ ಕಾರ್ಖಾನೆಗಳು ಆರಂಭವಾಗಿ, ಉದ್ಯೋಗಗಳು ಸೃಷ್ಟಿಯಾಗುತ್ತಿವೆ” ಎಂದರು.

“ಬಿಜೆಪಿ ಸರ್ಕಾರದ ಅವಧಿಯಲ್ಲಿ ನೀವೆಲ್ಲರೂ ಬೆಲೆ ಏರಿಕೆ ಸೇರಿದಂತೆ ಅನೇಕ ಸಮಸ್ಯೆಗಳಿಂದ ತತ್ತರಿಸಿದ್ದೀರಿ. ನಿಮಗೆ ಸಹಾಯ ಮಾಡಲು ಗ್ಯಾರಂಟಿ ಯೋಜನೆ ತರಲಾಗಿದೆ. ಬಡ ಕುಟುಂಬದ ಮಹಿಳೆಗೆ 2 ಸಾವಿರ, 200 ಯೂನಿಟ್ ವರೆಗೂ ಉಚಿತ ವಿದ್ಯುತ್, ಉಚಿತ ಬಸ್ ಪ್ರಯಾಣ, 10 ಕೆ.ಜಿ ಅಕ್ಕಿ, ನಿರುದ್ಯೋಗ ಭತ್ಯೆ ನೀಡಿದ್ದೇವೆ. ಆ ಮೂಲಕ ಬಸವಣ್ಣನವರ ಮಾರ್ಗದರ್ಶನದಂತೆ ನುಡಿದಂತೆ ನಡೆದಿದ್ದೇವೆ. ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ” ಎಂದು ಹೇಳಿದರು.

“ವಿರೋಧ ಪಕ್ಷದವರು ಅಭಿವೃದ್ಧಿ ಆಗಿಲ್ಲ ಎಂದು ಟೀಕೆ ಮಾಡುತ್ತಿದ್ದಾರೆ. ನಾವು ಈ ಭಾಗದ ಅಭಿವೃದ್ಧಿಗೆ ಅನೇಕ ಕಾರ್ಯಕ್ರಮ ರೂಪಿಸಿದ್ದೇವೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಪ್ರತಿ ವರ್ಷ 5 ಸಾವಿರ ಕೋಟಿ, ಬೀದರ್ ಜಿಲ್ಲೆಯ ಅಭಿವೃದ್ಧಿಗೆ ₹ 2025 ಕೋಟಿ ಮೊತ್ತದ ವಿವಿಧ ಯೋಜನೆಗೆ ಚಾಲನೆ ನೀಡಿದ್ದೇವೆ. ಈ ಭಾಗದಲ್ಲಿ ಈ ವರ್ಷ ಎರಡನೇ ಬೆಳೆಗೆ ನೀರನ್ನು ಕೊಟ್ಟಿದ್ದೇವೆ.ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸುವುದು ಈ ಸರ್ಕಾರದ ಸಂಕಲ್ಪ. ಇದನ್ನು ರಾಷ್ಟ್ರೀಯ ಯೋಜನೆ ಮಾಡಬೇಕು ಎಂದು ನಮ್ಮ ಸರ್ಕಾರ ಒತ್ತಡ ಹಾಕುತ್ತಿದೆ” ಎಂದು ತಿಳಿಸಿದರು.

Related Articles

Back to top button