
ಪ್ರಗತಿವಾಹಿನಿ ಸುದ್ದಿ: ಇನ್ನೇನು ವರ, ವಧುವಿನ ಕೊರಳಿಗೆ ತಾಳಿಕಟ್ಟಬೇಕು ಎನ್ನುವಷ್ಟರಲ್ಲಿ ವಧು ಮದುವೆ ಬೇಡ ಎಂದು ಹೇಳಿದ ಘಟನೆ ಹಾಸನದಲ್ಲಿ ನಡೆದಿದೆ.
ಮೂರು ತಿಂಗಳ ಹಿಂದೆಯೇ ನಿಶ್ಚಯವಾಗಿದ್ದ ಅದ್ದೂರಿ ಮದುವೆಗೆ ಇಂದು ಹಾಸನದ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ಮುಹೂರ್ತ ಫಿಕ್ಸ್ ಆಗಿತ್ತು. ಮುಂಜಾನೆಯಿಂದಲೇ ಮದುವೆಯ ಕಾರ್ಯಕ್ರಮಗಳು ನಡೆದಿದವು. ಧಾರೆಯ ಸಂದರ್ಭದಲ್ಲಿ ವಧುವಿಗೆ ಯಾವುದೋ ಒಂದು ಫೋನ್ ಕರೆ ಬಂದಿದೆ ಅಷ್ಟೇ. ರೂಮಿಗೆ ಹೋಗಿ ಮಂಟಪಕ್ಕೆ ವಾಪಸ್ ಆಗಿದ್ದ ವಧು ಹಸೆಮಣೆಮೇಲೆ ಕುಳಿತಿದ್ದಳು. ಇನ್ನೇನು ತಾಳಿಕಟ್ಟುವ ಶುಭ ಮುಹೂರ್ತ. ವರ ತಾಳಿ ಕೈಯಲ್ಲಿ ಹಿಡಿದು ವಧುವಿನ ಕೊರಳಿಗೆ ಕಟ್ಟಲು ಮುಂದಾಗುತ್ತಿದ್ದಂತೆ ವಧು ತಡೆದಿದ್ದಾಳೆ. ಮದುವೆ ಬೇಡ ನಿಲ್ಲಿಸುವಂತೆ ಹೇಳಿದ್ದಾಳೆ.
ವಧುವಿನ ಹಾಗೂ ವರನ ಪೋಷಕರು ಕಂಗಾಲಾಗಿದ್ದಾರೆ. ವಧುವಿನ ತಂದೆ ತಾಯಿ ಆಕೆಗೆ ಮನವೊಲಿಸಲು ಸಾಕಷ್ಟು ಯತ್ನಿಸಿದ್ದಾರೆ. ಆದರೆ ವಧು ಮದುವೆಗೆ ಒಪ್ಪಿಲ್ಲ. ತಾನು ಈ ಮದುವೆಯಾಗಲ್ಲ ಬೇರೊಬ್ಬನನ್ನು ಪ್ರೀತಿಸುತ್ತಿರುವುದಾಗಿ ಹೇಳಿದ್ದಾಳೆ ಎನ್ನಲಾಗಿದೆ. ವರ ಅಕ್ಷರಶ: ಕುಸಿದು ಹೋಗಿದ್ದು, ಕಣ್ಣೀರಿಟ್ಟಿದ್ದಾನೆ.
ಬುವನಹಳ್ಳಿಯ ಯುವತಿ ಹಾಗೂ ಆಲೂರು ತಾಲೂಕಿನ ಯುವ ಶಿಕ್ಷಕನ ಮದುವೆ ಮೂರು ತಿಂಗಳ ಹಿಂದೆಯೇ ನಿಶ್ಚಯವಾಗಿತ್ತು. ಆದರೆ ಯುವತಿ ಬೇರೊಬ್ಬನನ್ನು ಪ್ರೀತಿಸುತ್ತಿದ್ದಳಂತೆ ಈ ವಿಚಾರವನ್ನು ಮದುವೆ ಮಂಟಪದಲ್ಲಿ ತಾಳಿಕಟ್ಟಲು ಮುಂದಾಗುವವರೆಗೂ ಸುಮ್ಮನಿದ್ದ ವಧು ಕೊನೇ ಕ್ಷಣದಲ್ಲಿ ಮದುವೆ ನಿರಾಕರಿಸಿದ್ದಾಳೆ. ಮದುವೆ ಮುರಿದುಬಿದ್ದಿದೆ.