ಪ್ರಗತಿವಾಹಿನಿ ಸುದ್ದಿ, ಚೆನ್ನೈ – ಟಾಲಿವುಡ್‌ನ ಖ್ಯಾತ ನಟ ಅಲ್ಲು ಅರ್ಜುನ್ ಪುಷ್ಪ ದಿ ರೈಸ್ ಸಿನೇಮಾ ಬಳಿಕ ದೇಶಾದ್ಯಂತ ಖ್ಯಾತಿ ಪಡೆದಿದ್ದಾರೆ. ಉತ್ತರ ಭಾರತದ ಹಿಂದಿ ಸಿನೇಮಾ ಪ್ರೇಕ್ಷಕರಿಗೂ ಈಗ ಅಲ್ಲು ಅರ್ಜುನ್ ನೆಚ್ಚಿನ ನಟ ಎನಿಸಿಕೊಂಡಿದ್ದಾರೆ. ಹಿಂದಿ ಸಿನೇಮಾ ರಂಗದಲ್ಲಿ ಅವರಿಗೆ ಬೇಡಿಕೆ ಏಕಾಏಕಿ ಹೆಚ್ಚಾಗಿದೆ.
ಇದಕ್ಕೂ ಮೊದಲು ಅಲ್ಲು ಅರ್ಜುನ್ ನಟನೆಯ ಸಿನೇಮಾಗಳು ಹಿಂದಿಗೆ ಡಬ್ ಆಗಿ ಬಿಡುಗಡೆ ಆಗುತ್ತಿದ್ದವು. ಆದರೆ ಅವು ಹೆಚ್ಚು ಜನಪ್ರಿಯತೆ ಪಡೆದಿರಲಿಲ್ಲ. ಆದರೆ ಪುಷ್ಪ ದಿ ರೈಸ್ ಸಿನೇಮಾದ ಹಿಂದಿ ಹಿಂದಿ ಎಡಿಷನ್ ದೊಡ್ಡ ಹಿಟ್ ಆಗಿದ್ದು, ಆ ಮೂಲಕ ಅಲ್ಲು ಅರ್ಜುನ್ ನಟನೆಯ ಈ ಮೊದಲಿನ ಸಿನೇಮಾಗಳಿಗೂ ಉತ್ತರ ಭಾರತದ ರಾಜ್ಯಗಳಲ್ಲಿ ಬೇಡಿಕೆ ಹೆಚ್ಚಿದೆ. ಇದನ್ನು ಎನ್‌ಕ್ಯಾಶ್ ಮಾಡಿಕೊಳ್ಳಲು ನಿರ್ಮಾಪಕರು ಮುಂದಾಗಿದ್ದು, ಅಲ್ಲು ಅರ್ಜುನ್ ನಟನೆಯ ಈ ಹಿಂದಿನ ಹಿಟ್ ಸಿನಿಮಾ ಅಲಾ ವೈಕುಂಟಪುರಂಲೋ ಸಿನಿಮಾವನ್ನು ಹಿಂದಿಗೆ ಡಬ್ ಮಾಡಿ ಚಿತ್ರಮಂದಿರಗಳಲ್ಲಿ ಬಿಡುಗಡೆಗೆ ಸಿದ್ಧಮಾಡಿದ್ದಾರೆ. ಆದರೆ ಆ ಸಿನೇಮಾ ಬಿಡುಗಡೆ ಆಗದಂತೆ ಸ್ವತಃ ಅಲ್ಲು ಅರ್ಜುನ್‌ರ ತಂದೆ ಅಲ್ಲು ಅರವಿಂದ್ ತಡೆಯೊಡ್ಡುತ್ತಿದ್ದಾರೆ.
ಕಾರಣ ವಿಚಿತ್ರ
ಅಲಾ ವೈಕುಂಟಪುರಂಲೋ ಸಿನೇಮಾದ ಹಿಂದಿ ಡಬ್ ಅನ್ನು ಜನವರಿ ೨೬ ರಂದು ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಲು ಡಬ್ಬಿಂಗ್ ಹಕ್ಕು ಖರೀದಿ ಮಾಡಿರುವವರು ಸಿದ್ಧತೆ ನಡೆಸಿದ್ದಾರೆ. ಆದರೆ ಇದಕ್ಕೆ ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ವಿರೋಧ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಕಾರಣ ಮಾತ್ರ ವಿಚಿತ್ರವಾಗಿದೆ.
ಅಲಾ ವೈಕುಂಟಪುರಂಲೋ ಸಿನಿಮಾದ ಹಿಂದಿ ರೀಮೇಕ್‌ಗೆ ಅಲ್ಲು ಅರವಿಂದ್ ಬಂಡವಾಳ ಹೂಡಿದ್ದಾರೆ. ಹಿಂದಿ ರೀಮೇಕ್‌ನ ಚಿತ್ರೀಕರಣ ಈಗಾಗಲೇ ಕೊನೆಯ ಹಂತದಲ್ಲಿದೆ. ತೆಲುಗು ಸಿನಿಮಾದಲ್ಲಿ ಅಲ್ಲು ಅರ್ಜುನ್ ನಿರ್ವಹಿಸಿದ್ದ ಪಾತ್ರವನ್ನು ಹಿಂದಿಯಲ್ಲಿ ಕಾರ್ತಿಕ್ ಆರ್ಯನ್ ನಿರ್ವಹಿಸುತ್ತಿದ್ದಾರೆ. ಪೂಜಾ ಹೆಗ್ಡೆ ಪಾತ್ರವನ್ನು ಕೃತಿ ಸೆನನ್ ನಿರ್ವಹಿಸುತ್ತಿದ್ದಾರೆ. ಶೆಹಜಾದಾ ಎಂದು ಈ ಚಿತ್ರಕ್ಕೆ ಹೆಸರಿಡಲಾಗಿದೆ. ಈ ಸಿನೇಮಾ ಇನ್ನು ಕೆಲವೇ ದಿನಗಳಲ್ಲಿ ತೆರೆ ಕಾಣುವ ಸಾಧ್ಯತೆ ಇದೆ. ಅಲಾ ವೈಕುಂಠಪುರಲೋ ಹಿಂದಿ ರಿಮೇಕ್ ಮತ್ತು ಹಿಂದಿ ಡಬ್ಬಿಂಗ್ ಎರಡೂ ಒಟ್ಟೊಟ್ಟಿಗೇ ಬಿಡುಗಡೆಯಾದರೆ ರಿಮೇಕ್ ಸಿನೇಮಾ ನೆಲಕಚ್ಚಿ ಅಲ್ಲು ಅರ್ಜುನ್‌ರ ತಂದೆ ಅಲ್ಲು ಅರವಿಂದ್ ನಷ್ಟ ಅನುಭವಿಸುವ ಸಾಧ್ಯತೆಯೇ ಹೆಚ್ಚಿದೆ.
ಅಲಾ ವೈಕುಂಟಪುರಂಲೋ ಮೂಲ ತೆಲಗು ಸಿನೇಮಾವನ್ನು ಸಹ ಅಲ್ಲು ಅರವಿಂದ್ ಅವರೇ ನಿರ್ಮಾಣ ಮಾಡಿದ್ದರು. ಆಗ ಅಲ್ಲು ಅರ್ಜುನ್‌ಗೆ ಹಿಂದಿಯಲ್ಲಿ ಇಷ್ಟು ಬೇಡಿಕೆ ಇರಲಿಲ್ಲ. ಈ ಕಾರಣಕ್ಕೆ ಹಿಂದಿ ಡಬ್ಬಿಂಗ್ ಹಕ್ಕನ್ನು ಬಹಳ ಕಡಿಮೆ ಬೆಲೆಗೆ ಮಾರಾಟ ಮಾಡಲಾಗಿತ್ತು. ಡಬ್ಬಿಂಗ್ ಹಕ್ಕು ಪಡೆದವರು, ಟಿವಿ ಹಾಗೂ ಯೂಟ್ಯೂಬ್‌ನಲ್ಲಿ ಸಿನಿಮಾ ಮಾರಾಟ ಮಾಡಿದ್ದರು. ಆದರೆ ಈಗ ಪುಷ್ಪ ದಿ ರೈಸ್ ಸೂಪರ್ ಹಿಟ್ ಆದಬಳಿಕ ಅದೇ ಸಿನಿಮಾವನ್ನು ಹಿಂದಿಯಲ್ಲಿ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡುತ್ತಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ