Kannada NewsLatestPragativahini Special

ಸಮಾನತೆಗಾಗಿ ಹೋರಾಡುತ್ತಲೇ ಮಹಾಪರಿನಿರ್ವಾಣ; ಅಂಬೇಡ್ಕರ್ ಅವರ ಬದುಕು, ತತ್ವ, ಆದರ್ಶಗಳು ಸಾರ್ವಕಾಲಿಕ ಮಾರ್ಗದರ್ಶಕ

ಲಕ್ಷ್ಮೀ ಹೆಬ್ಬಾಳಕರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು

“ನನ್ನ ಜೀವಿತದ ಅವಧಿಯಲ್ಲೇ ನನ್ನ ಜನರು ಈ ದೇಶದ ಆಳುವ ವರ್ಗವಾಗುವುದನ್ನು ನಾನು ನೋಡಬಯಸಿದ್ದೆ. ರಾಜಕೀಯ ಅಧಿಕಾರವನ್ನು ಸಮಾನತೆಯ ಅಧಾರದ ಮೇಲೆ ಇತರರ ಜೊತೆ ಹಂಚಿಕೊಳ್ಳುವುದನ್ನು ನಾನು ಬಯಸಿದ್ದೆ. ಆದರೆ ಅಂತಹ ಸಾಧ್ಯತೆ ನನಗೀಗ ಕಾಣುತ್ತಿಲ್ಲ’’ – ಸಮಾನತೆಗಾಗಿ ಜೀವನಪೂರ್ತಿ ಹೋರಾಟ ನಡೆಸಿದ ಮಹಾನ್ ಮಾನವತಾವಾದಿ, ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರು ಕೊನೆಯ ದಿನಗಳಲ್ಲಿ ಅತ್ಯಂತ ಬೇಸರದಿಂದ ನುಡಿದ ಮಾತುಗಳಿವು.

ಜೀವನ ಪೂರ್ತಿ ಯಾವುದಕ್ಕಾಗಿ ಹೋರಾಡಿದ್ದರೋ ಆ ಗುರಿ ತಲುಪಲು ಸಾಧ್ಯವಾಗದಿದ್ದಾಗ ಅತ್ಯಂತ ನೋವಿನ ನುಡಿಗಳನ್ನಾಡುತ್ತ, ತಮ್ಮ ಮನದಾಳದ ದುಃಖವನ್ನು ಈ ರೀತಿಯಾಗಿ ತೋಡಿಕೊಂಡರು. ಯಾರ ಹಕ್ಕುಗಳನ್ನೂ, ಅಧಿಕಾರವನ್ನೂ ಅವರು ಕಸಿದುಕೊಳ್ಳಲು ಬಯಸಿರಲಿಲ್ಲ. ಆದರೆ ಎಲ್ಲರನ್ನೂ ಸಮಾನವಾಗಿ ಕಾಣಬೇಕೆನ್ನುವುದಷ್ಟೆ ಅವರ ಬಯಕೆಯಾಗಿತ್ತು. ಇದಕ್ಕಾಗಿ ಸಾಕಷ್ಟು ಹೋರಾಟ ಮಾಡಿದರು.  

ತಾವು ವಿಶ್ವಾಸವಿಟ್ಟ ಜನರೂ ಕೂಡ ಸ್ವಾರ್ಥಕ್ಕೆ ಬಲಿಯಾದಾಗ ಅವರ ದುಃಖ ಇಮ್ಮಡಿಯಾಯಿತು. ಸಂವಿಧಾನದ ಮೂಲಕವೂ ಸಮಾನತೆಯನ್ನು ಸಾಧಿಸಲು ಪ್ರತ್ನಿಸಿದರು. ಆದರೆ, ಜನರ ಮನಸ್ಥಿತಿಯಲ್ಲಿ ಅಂತಹ ಬದಲಾವಣೆ ಕಾಣದಿದ್ದಾಗ ಒಂದು ರೀತಿಯಲ್ಲಿ ಅವರು ನಿರಾಶರಾಗಿದ್ದರು.

ತಮ್ಮ ಹೋರಾಟವನ್ನು ಮುಂದುವರಿಸಲು ಅನಾರೋಗ್ಯದ ಕಾರಣದಿಂದ ಸಾಧ್ಯವಾಗುತ್ತಿಲ್ಲ ಎನ್ನುವ ನೋವನ್ನೂ ತೋಡಿಕೊಂಡರು. ಅಂತಹ ಪ್ರಯತ್ನವನ್ನು ನಾನೇ ಮಾಡೋಣವೆಂದರೆ ನಾನೂ ಕೂಡ ಈಗ ಅನಾರೋಗ್ಯದ ಕಾರಣದಿಂದಾಗಿ ನಿಶ್ಯಕ್ತನಾಗಿದ್ದೇನೆ ಎನ್ನುತ್ತ ತಮ್ಮ ದುಃಖವನ್ನು ಹೊರಹಾಕಿದ್ದರು. ಕೊನೆಗೆ, ಅದೇ ಸಮುದಾಯದ ಸ್ವಾರ್ಥಿಗಳ ಬಗೆಗೆ ಕೂಡ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು. ನಾನು ಇದುವರೆಗೆ ಏನನ್ನು ಸಾಧಿಸಿ ಪಡೆದಿರುವೆನೋ ಆ ಸಾಧನೆಯ ಫಲವನ್ನು ಶಿಕ್ಷಣ ಪಡೆದ ನನ್ನ ಸಮುದಾಯದ ಕೆಲವೇ ಕೆಲವು ಮಂದಿ ಅನುಭವಿಸಿ ಮಜಾ ಮಾಡುತಿದ್ದಾರೆ ಎಂದೂ ಆಕ್ರೋಶಗೊಂಡಿದ್ದರು.

 “ತಮ್ಮ ಇನ್ನಿತರ ಶೋಷಿತ ಸಹೋದರರ ಬಗ್ಗೆ ಅವರು ಯಾವುದೇ ಅನುಕಂಪ, ಕಾಳಜಿ ತೋರುತ್ತಿಲ್ಲ. ತಮ್ಮ ಈ ವಂಚನೆಯ ಕ್ರಿಯೆಯಿಂದಾಗಿ ಒಂದು ರೀತಿಯಲ್ಲಿ ಅವರು ಅಯೋಗ್ಯರಾಗಿದ್ದಾರೆ. ವೈಯಕ್ತಿಕ ಹಿತಾಸಕ್ತಿಯನ್ನಷ್ಟೆ ಸಾಧಿಸಿಕೊಂಡು ತಮ್ಮಷ್ಟಕ್ಕೆ ಬದುಕುವ ಅವರು ಒಂದರ್ಥದಲ್ಲಿ ನನ್ನ ಎಲ್ಲಾ ನಿರೀಕ್ಷೆಗಳನ್ನು ಹುಸಿಗೊಳಿಸಿದ್ದಾರೆ. ಅವರಲ್ಲಿ ಯಾರೂ ಕೂಡ ಸಮುದಾಯದ ಸೇವೆಯನ್ನು ಮಾಡಲು ಮುಂದೆ ಬರುತ್ತಿಲ್ಲ’’ ಎಂದು, ಮೀಸಲಾತಿಯ ಲಾಭ ಪಡೆದು ನೌಕರಿಗಿಟ್ಟಿಸಿದವರ ಬಗ್ಗೆ ಅಂಬೇಡ್ಕರರು ಮನದಾಳದ ನೋವನ್ನು ಹೊರಹಾಕಿದ್ದರು.

ನನ್ನ ಸಹಪಾಠಿಗಳಲ್ಲಿ ಯಾರಲ್ಲಿ ನಾನು ಈ ಚಳುವಳಿಯನ್ನು ಮುನ್ನಡೆಸುವರೆಂದು ನಂಬಿಕೆ ಮತ್ತು ವಿಶ್ವಾಸವಿರಿಸಿದ್ದೆನೊ ಅವರು ತಮ್ಮ ತಮ್ಮಲ್ಲೇ ನಾಯಕತ್ವ ಮತ್ತು ಅಧಿಕಾರಕ್ಕಾಗಿ ಕಚ್ಚಾಡುತ್ತಿದ್ದಾರೆ ಎಂದಿದ್ದರು.

ಈ ಎಲ್ಲವನ್ನೂ ನೋಡಿ ಸಹಿಸಲಾಗದೆ, ತಮ್ಮ ನಂಬಿಕೆಗೆ ಅಪಚಾರವಾದಾಗ ಅಂತಿಮವಾಗಿ ಬೌದ್ಧ ಧರ್ಮ ಸ್ವೀಕರಿಸುವ ನಿರ್ಧಾರಕ್ಕೆ ಬಂದರು. ಒಂದು ವರ್ಷಗಳ ಕಾಲ ಬೌದ್ಧ ಧರ್ಮವನ್ನು ಅಧ್ಯಯನ ಮಾಡಿದ ನಂತರ ಅಂತಿಮವಾಗಿ 1956ರ ಅಕ್ಟೋಬರ್14ರಂದು 5 ಲಕ್ಷ ಬೆಂಬಲಿಗರೊಂದಿಗೆ ಅಂಬೇಡ್ಕರ್ ಅವರುಬೌದ್ಧಧರ್ಮಕ್ಕೆ ಮತಾಂತರಗೊಳ್ಳುತ್ತಾರೆ. ಆ ಸಂದರ್ಭದಲ್ಲಿ ಅವರ ಅನುಯಾಯಿಗಳು ಇವರನ್ನು ಬೌದ್ಧ ನಾಯಕ ಎಂದೇ ಪರಿಗಣಿಸುತ್ತಾರೆ.

‘ನಾನು ಅಸ್ಪೃಶ್ಯತೆ ಆಚರಿಸುವುದಿಲ್ಲ ಮತ್ತು ಎಲ್ಲ ಮನುಷ್ಯರನ್ನು ಸಮಾನವಾಗಿ ಕಾಣುತ್ತೇನೆ. ಕೊಲ್ಲುವುದಿಲ್ಲ, ಕದಿಯುವುದಿಲ್ಲ, ತಪ್ಪಾದ ಲೈಂಗಿಕ ವರ್ತನೆ ತೋರುವುದಿಲ್ಲ, ಮದ್ಯ ಕುಡಿಯುವುದಿಲ್ಲ ಮತ್ತು ಸುಳ್ಳು ಹೇಳುವುದಿಲ್ಲ ಎಂಬ ಪಂಚಶೀಲ ತತ್ವಗಳನ್ನು ಅನುಸರಿಸುತ್ತೇನೆ. ಜ್ಞಾನ, ಸಹಾನುಭೂತಿ ಮತ್ತು ಕರ್ತವ್ಯದ ಮೂರು ಪ್ರಮುಖ ತತ್ವಗಳ ಆಧಾರದಲ್ಲಿ ನೆಲೆಯಾಗಿರುವ ಬೌದ್ಧ ಧರ್ಮ ಮಾತ್ರ ನಿಜವಾದ ಧರ್ಮ ಎಂದು ನಾನು ನಂಬಿದ್ದೇನೆ. ಹಾಗಾಗಿಯೇ ಹಿಂದೂ ಧರ್ಮವನ್ನು ತೊರೆದು ಬೌದ್ಧ ಧರ್ಮವನ್ನು ಅಪ್ಪಿಕೊಳ್ಳುವ ಮೂಲಕ ಹೊಸ ಹುಟ್ಟು ಪಡೆದುಕೊಂಡಿದ್ದೇನೆ’ – ಇದು ಅಂಬೇಡ್ಕರ್ ಮತ್ತು ಅವರ ಅನುಯಾಯಿಗಳು ಕೈಗೊಂಡ ಪ್ರಮಾಣ.

ಮಹಾಪರಿನಿರ್ವಾಣ ದಿನ  

ಪರಿನಿರ್ವಾಣ ಎಂಬುದು ಬೌದ್ಧಧರ್ಮದ ಮುಖ್ಯ ತತ್ವ ಹಾಗೂ ಗುರಿಗಳಲ್ಲಿ ಒಂದಾಗಿದೆ.  ಇದು ದೇಹವು ಸತ್ತ ನಂತರ ನಿರ್ವಾಣದ ಸಾಧನೆಯನ್ನು ಸೂಚಿಸುತ್ತದೆ. ಬೌದ್ಧಧರ್ಮದ ಪ್ರಕಾರ ಜೀವನದ ಕರ್ಮವನ್ನು ದೇಹದ ಮರಣದ ನಂತರ ಆತ್ಮದ ಮೂಲಕ ಮುಂದಿನ ಜನ್ಮಕ್ಕೆ ಸಾಗಿಸಲಾಗುತ್ತದೆ. ಒಮ್ಮೆ ನಿರ್ವಾಣ ಸಾಧಿಸಿದರೆ ಪುನರ್ಜನ್ಮದ ಚಕ್ರವು ನಿಲ್ಲುತ್ತದೆ. ಏಕೆಂದರೆ ನಿರ್ವಾಣವಾದರೆ ಯಾವುದೇ ಕರ್ಮದ ಬಾಕಿ ಉಳಿಯುವುದಿಲ್ಲ ಎನ್ನುವುದು ನಂಬಿಕೆ.

 ಅಂಬೇಡ್ಕರ್‌ ಅವರು ತಮ್ಮ ́ಬುದ್ಧ ಮತ್ತು ಅವರ ಧಮ್ಮʼ ಗ್ರಂಥವನ್ನು ಪೂರ್ಣಗೊಳಿಸಿದ ಕೆಲವೇ ದಿನಗಳಲ್ಲಿ ದೆಹಲಿಯ ತಮ್ಮ ನಿವಾಸದಲ್ಲಿ ಡಿಸೆಂಬರ್ 6, 1956ರಲ್ಲಿ ಮರಣ ಹೊಂದುತ್ತಾರೆ. ಅಂಬೇಡ್ಕರ್ ಅವರ ಅನುಯಾಯಿಗಳು, ತಮ್ಮ ಗುರುಗಳು ಭಗವಾನ್ ಬುದ್ಧನಂತೆಯೇ ಪ್ರಭಾವಶಾಲಿ. ಶುದ್ಧ ಮನಸ್ಸಿನ ಹಾಗೂ ದೇವರಿಂದ ಆಶೀರ್ವಾದ ಹೊಂದಿದವರು ಎಂದು ನಂಬುತ್ತಾರೆ. ಸಮಾಜದಲ್ಲಿನ ಅವರ ಮಹಾನ್ ಕಾರ್ಯಗಳಿಂದಾಗಿ ಅವರಿಗೆ ಯಾವುದೇ ಕರ್ಮದ ಋಣ ಉಳಿದಿಲ್ಲ ಎಂದು ಭಾವಿಸಿ, ಅಂಬೇಡ್ಕರ್ ಅವರ ಪುಣ್ಯತಿಥಿಯನ್ನು ಮಹಾಪರಿನಿರ್ವಾಣ ದಿನ ಎಂದು ಕರೆದರು.  

ಸಂವಿಧಾನ ಶಿಲ್ಪಿ

ಮಹಾನ್ ಮಾನವತಾವಾದಿ, ಸಂವಿಧಾನ ಶಿಲ್ಪಿ, ಕಾನೂನು ತಜ್ಞ, ಸಮಾಜ ಸುಧಾರಕ, ಅರ್ಥ ಶಾಸ್ತ್ರಜ್ಞ, ಪತ್ರಕರ್ತ, ತತ್ವಜ್ಞಾನಿ, ಸಾಹಿತಿ ಇನ್ನೂ ಏನೇನೋ… ಒಬ್ಬ ವ್ಯಕ್ತಿ ಏನೆಲ್ಲ ಸಾಧನೆ ಮಾಡಬಹುದು ಎನ್ನುವುದಕ್ಕೆ ಉದಾಹರಣೆಯಾಗಿದ್ದವರು ಡಾ.ಬಾಬಾಸಾಹೇಬ ಅಂಬೇಡ್ಕರ್.

ಸಂವಿಧಾನದ ಕರಡನ್ನು ಸಿದ್ಧ ಮಾಡಲು, ಬಹುತೇಕ ಒಬ್ಬಂಟಿಯಾಗಿ ಎರಡು ವರ್ಷ ದುಡಿದ ಅಂಬೇಡ್ಕರ್, ಅನಾರೋಗ್ಯವಿದ್ದಾಗ್ಯೂ, 1948ರ ಮೊದಲಿನಲ್ಲಿ ಈ ಕಾರ್ಯವನ್ನು ಪೂರ್ಣಗೊಳಿಸಿ, ಅದೇ ವರ್ಷದ ಕೊನೆಯಲ್ಲಿ ಸಂಸತ್ತಿನಲ್ಲಿ ಮಂಡಿಸಿ, ಸಂವಿಧಾನದ ಹಸ್ತಪ್ರತಿ ಯನ್ನು ಬೆಳ್ಳಿತಟ್ಟೆಯಲ್ಲಿಟ್ಟು, ಆಗಿನ ಪ್ರಧಾನಿ ಜವಹರಲಾಲ್ ನೆಹರೂ ಅವರ ಸಮ್ಮುಖದಲ್ಲಿ ಇಡೀ ರಾಷ್ಟೃಕ್ಕೆ ಅದನ್ನು ಲೋಕಾರ್ಪಣೆ ಮಾಡಿದರು. ಅಂದಿನಿಂದ ಅಂಬೇಡ್ಕರ್ ಅವರು ಭಾರತದ ಸಂವಿಧಾನ ಶಿಲ್ಪಿಯೆಂದೇ ಹೆಸರಾದರು.

 6 ದಶಕದ ಹಿಂದೆ ಈ ನೆಲದಲ್ಲಿ ಬದುಕಿದ್ದ, ನಮ್ಮೆಲ್ಲರ ಪ್ರೇರಣೆ, ನಮ್ಮೆಲ್ಲರ ಮಾರ್ಗದರ್ಶಕ, ನಮ್ಮೆಲ್ಲರ ಬದುಕಿಗೊಂದು ದಾರಿ ತೋರಿಸಿಕೊಟ್ಟ ಶಕ್ತಿ ಡಾ.ಅಂಬೇಡ್ಕರ್ ಅವರು. ಅಂಬೇಡ್ಕರ್ ಅವರ ಹೆಸರು ಹೇಳಿದರೆ ನಮಗೆಲ್ಲ ಏನೋ ಸ್ಫೂರ್ತಿ ಉಕ್ಕಿ ಹರಿಯುತ್ತದೆ, ಹೊಸ ಪ್ರೇರಣೆ ಉಂಟಾಗುತ್ತದೆ, ಒಂದು ಆದರ್ಶ ನಮ್ಮ ಕಣ್ಣೆದುರು ನಿಲ್ಲುತ್ತದೆ. ಅಂಬೇಡ್ಕರ್ ಅವರ ಬದುಕು, ತತ್ವ, ಆದರ್ಶಗಳು ನಮ್ಮೆಲ್ಲರ ಪಾಲಿಗೆ ಸಾರ್ವಕಾಲಿಕ ಮಾರ್ಗದರ್ಶಕ. ಸಮಾನತೆ ಮತ್ತು ಪ್ರಗತಿಯ ಕನಸು ಕಂಡ ಮೇರು ನಾಯಕ ಅವರು. 

ಅವರ ಆದರ್ಶ ಎಲ್ಲರ ಜೀವನಕ್ಕೆ ದಾರಿದೀಪ. ಬಾಬಾ ಸಾಹೇಬರ ಚಿಂತೆನೆಗಳು ಇಂದಿಗೂ, ಎಂದಿಗೂ ಯುವಜನತೆಗೆ ಸ್ಫೂರ್ತಿ. 1920ರ ದಶಕದಲ್ಲೇ ಎರಡೆರಡು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದ ಮಹಾನ್ ಚೇತನ ಅವರು. 

ಸಮಾಜದಲ್ಲಿ ಅಸಮಾನತೆ, ಅಸ್ಪೃಶ್ಯತೆ ತಾಂಡವವಾಡುತ್ತಿದ್ದ ಅಂದಿನ ದಿನಗಳಲ್ಲಿ ಅಮೇರಿಕಾದ ಕೊಲಂಬಿಯಾ ವಿಶ್ವವಿದ್ಯಾಲಯ ಮತ್ತು ಲಂಡನ್ ಸ್ಕೂಲ್ ಆಫ್ ಎಕಾನಾಮಿಕ್ಸ್ ನಿಂದ ಡಾಕ್ಟರೇಟ್ ಪದವಿ ಪಡೆದರು ಎಂದರೆ ಅವರ ಜೀವನೋತ್ಸಾಹ ಹೇಗಿತ್ತು ಎನ್ನುವುದನ್ನು ನಾವು ಊಹಿಸಲೂ ಸಾಧ್ಯವಾಗುವುದಿಲ್ಲ.

ಡಾಕ್ಟರೇಟ್ ಪದವಿ ಪಡೆದು ಹಿಂದಿರುಗಿದಾಗ ಮೊದಲಿನ ಷರತ್ತಿನಂತೆ ಬರೋಡಾದ ಮಹಾರಾಜರ ಆಸ್ಥಾನದಲ್ಲಿ ಸೈನ್ಯದ ಕಾರ್ಯದರ್ಶಿಗಳಾಗಿ ಕೆಲಸಕ್ಕೆ ಸೇರಿದರು. ಆದರೆ,  ಆಸ್ಥಾನಿಕ ಹಿರಿಯ ಮಂತ್ರಿಗಳು ಮಹಾರಾಜರಿಗೆ ತಿಳಿಯದಂತೆ ಇವರೊಂದಿಗೆ ಅಸ್ಪೃಶ್ಯತೆಯ ಆಚರಣೆ ಮೂಲಕ ಕಿರುಕುಳ ನೀಡುತ್ತಿದ್ದರು. ಸಾಮಾನ್ಯ ಸಿಪಾಯಿ ಕೂಡ ಇವರ ಫೈಲ್ ಗಳನ್ನು ಮುಟ್ಟಿಸಿಕೊಳ್ಳುತ್ತಿರಲಿಲ್ಲ, ಉಳಿಯಲು ಆಸ್ಥಾನದಲ್ಲಿ ನಿವೇಶನ ನೀಡಲಿಲ್ಲ ಮತ್ತು ಉಳಿದಿದ್ದ ಪಾರ್ಸಿ ಹೊಟೇಲ್ ನಿಂದ ಇವರನ್ನು ದಬ್ಬಿ ಹೊರಹಾಕಿದರು. ಅನಿವಾರ್ಯವಾಗಿ ಅಲ್ಲಿ ಕೆಲಸ ಮಾಡಲಾಗದೆ ಮುಂಬೈಗೆ ಬಂದರು. ಸಾಮಾಜಿಕ ಸಮಾನತೆಗಾಗಿ ಹೋರಾಟ ನಡೆಸಿದರು. ಅಸ್ಪೃಶ್ಯತೆ ವಿರುದ್ಧ ಸಮರ ಸಾರಿದರು. 

ಒಬ್ಬ ಅರ್ಥಶಾಸ್ತ್ರಜ್ಞರಾಗಿ, ಸಮಾಜ ಸುಧಾರಕರಾಗಿ, ಕಾನೂನು ತಜ್ಞರಾಗಿ, ನ್ಯಾಯ ಶಾಸ್ತ್ರಜ್ಞರಾಗಿ, ಪತ್ರಕರ್ತರಾಗಿ, ಸಾಹಿತಿಗಳಾಗಿ, ಎಲ್ಲಕ್ಕಿಂತ ಹೆಚ್ಚಾಗಿ ಸಂವಿಧಾನ ಶಿಲ್ಪಿಗಳಾಗಿ ಅಂಬೇಡ್ಕರ್ ಅವರು ಈ ರಾಷ್ಟ್ರಕ್ಕೆ ನೀಡಿದ ಕೊಡುಗೆ ಅವಿಸ್ಮರಣೀಯ, ಅಮೋಘ.

ಸ್ವತಂತ್ರ ಭಾರತದ ಮೊದಲ ಕಾನೂನು ಸಚಿವರಾಗಿ ನಮ್ಮೆಲ್ಲರಿಗೆ ಮೇಲ್ಪಂಕ್ತಿ ಹಾಕಿಕೊಟ್ಟವರು ಅಂಬೇಡ್ಕರ್ ಅವರು. 

ಇಡೀ ವಿಶ್ವದಲ್ಲೇ ಶ್ರೇಷ್ಟ ಸಂವಿಧಾನ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದು ಅಂಬೇಡ್ಕರ್ ಅವರು ಕೊಟ್ಟ ಭಾರತದ ಸಂವಿಧಾನ.

ಇಂತಹ ನಾಡಿನಲ್ಲಿ ಜೀವಿಸುತ್ತಿರುವುದೇ ನಮಗೆಲ್ಲ ದೊಡ್ಡ ಹೆಮ್ಮೆ. ಅವರ ಜೀವನ ಸಾಧನೆ ಸೂರ್ಯ ಚಂದ್ರರಿರುವವರೆಗೂ ಈ ಭೂಮಿಯ ಮೇಲಿರುವವರಿಗೆ ಪ್ರೇರಣೆಯಾಗಬೇಕು, ದಾರಿದೀಪವಾಗಬೇಕು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button