ಸಾಮಾನ್ಯವಾಗಿ ಎಲ್ಲಾ ಮಹಾತ್ಮರ, ಪುಣ್ಯಪುರುಷರ ಜಯಂತಿ ಆಚರಿಸುವ ವಾಡಿಕೆ ಇದೆ. ಆದರೆ ಭಗವದ್ಗೀತೆಯನ್ನು ಹೊರತುಪಡಿಸಿ ಯಾವುದೇ ಪವಿತ್ರ ಗ್ರಂಥಗಳ ಜಯಂತಿ ಆಚರಿಲಾಗುವುದಿಲ್ಲ. ಭಾರತ ದೇಶದಲ್ಲಿ ವಿಶೇಷವಾಗಿ ಗೀತಾ ಜಯಂತಿಯನ್ನು ಅನೇಕ ಸ್ಥಳಗಳಲ್ಲಿ ಮತ್ತು ಇಸ್ಕಾನ್ ಮಂದಿರಗಳಲ್ಲಿ ಅಚರಿಸುತ್ತಾರೆ. ಈ ಬಾರಿ ಡಿಸೆಂಬರ್ 3 ರಂದು ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಎಲ್ಲಾ ಸೇವಾಕೇಂದ್ರಗಳಲ್ಲಿ ಪರಮಾತ್ಮನ ಸತ್ಯ ಸಂದೇಶವನ್ನು ಜನಸಾಮಾನ್ಯರಿಗೆ ತಿಳಿಸಲು ಗೀತಾ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಗುವುದು.
ಇಂದಿನ ಕಲುಷಿತ ಮನೋಭಾವದ ಮಾನವನಿಗೆ ಭಗವದ್ಗೀತೆ ಎಂಬ ನಿಷ್ಕಲ್ಮಶ ಅಮೃತ-ಸಿಂಚನ ಮಾಡಿರುವ ಕಿರುಪ್ರಯತ್ನವನ್ನು ಈ ಭಗವದ್ಗೀತಾ ಜ್ಞಾನ ದಿವ್ಯಕಲಾ-ಲೋಕದಲಿ ಮಾಡಲಾಗಿದೆ. ಇಲ್ಲಿ ವಿಶಾಲವಾದ 108 ಮಂಟಪಗಳಿವೆ; ಪ್ರತಿಯೊಂದು ಮಂಟಪವು ಅದ್ಭುತ ಮತ್ತು ವಿಸ್ಮಯವಾಗಿದ್ದು, ಏಷ್ಯಾದಲ್ಲಿಯೇ ಅತಿ ದೊಡ್ಡ ಮ್ಯೂಸಿಯಂ ಎಂಬ ಹೆಸರಿಗೆ ಪಾತ್ರವಾಗಿದೆ. ಹುಬ್ಬಳ್ಳಿ ಮಹಾನಗರದ ಹತ್ತಿರ ಭೈರಿದೇವರಕೊಪ್ಪದಿಂದ ಗಾಮನಗಟ್ಟಿಗೆ ಹೋಗುವ ಮಾರ್ಗದಲ್ಲಿರುವ ಈ ಮ್ಯೂಸಿಯಂ ಸುಮಾರು 5 ಎಕರೆ ಪ್ರದೇಶದಲ್ಲಿ ಪಸರಿಸಿದೆ. ಈಶ್ವರೀಯ ವಿಶ್ವ ವಿದ್ಯಾಲಯ, ಹುಬ್ಬಳ್ಳಿ ವಲಯ ಕೇಂದ್ರದ ನಿರ್ದೇಶಕರಾದ ಡಾ. ಬಸವರಾಜ ರಾಜಋಷಿಯವರ 13 ವರ್ಷಗಳ ಕಠಿಣ ಪರಿಶ್ರಮದ ಫಲವೇ ಈ ಭಗವದ್ಗೀತಾ ಜ್ಞಾನಲೋಕ. ಅವರು ಕಂಡಿದ್ದ ಕನಸು ಸಾಕಾರಗೊಂಡಿದೆ.
1,50,000 ಚದುರ ಅಡಿಯಲ್ಲಿ ನಿರ್ಮಿತವಾದ ಈ ಭವನದಲ್ಲಿ ಭಗವದ್ಗೀತೆ ಮತ್ತು ಯೋಗದ ಆಸಕ್ತಿವುಳ್ಳವರಿಗೆ ತಂಗಲು 97 ಸುಸಜ್ಜಿತ ಕೋಣೆಗಳಿವೆ. ವಿಶಾಲವಾದ ಪಾಕಶಾಲೆ ಮತ್ತು ಊಟ ಮಾಡಲು ಎರಡು ವಿಶಾಲವಾದ ಹಾಲ್‌ಗಳಿವೆ. 1200 ಜನರು ಕುಳಿತುಕೊಂಡು ಯೋಗ-ತಪಸ್ಸು ಮಾಡುವ ಮತ್ತು ಸಭೆ-ಸಮಾರಂಭವನ್ನು ನೋಡುವ ವಿಶಾಲವಾದ ಸಭಾಭವನ ಹಾಗೂ ಎರಡು ಧ್ಯಾನಮಂದಿರಗಳಿವೆ. ಹಸಿರು ಪರಿಸರವನ್ನು ಕಾಪಾಡಲು ಸೌರ ಶಕ್ತಿಯನ್ನು ಬಳಿಸಲಾಗಿದೆ. 18 ಕಿಲೋ ವ್ಯಾಟ್ ಶಕ್ತಿಯ ಸೋಲಾರ್ ಪ್ಯಾನೆಲ್‌ಗಳ ಮೂಲಕ ವಿದ್ಯುತ್ ನಿರ್ಮಾಣವಾಗುತ್ತಿದೆ. 8000 ಲೀಟರ್ ನೀರನ್ನು ಕಾಯಿಸುವ ಸೋಲರ್ ವಾಟರ್ ಹೀಟರ್‌ಗಳಿವೆ. 21 ತೆಂಗಿನ ಮರಗಳು, ಮಾವಿನ ಗಿಡಗಳು, ಅನೇಕ ಹೂವಿನ ಸಸ್ಯಗಳು ಇಲ್ಲಿವೆ. ಸದ್ಯದಲ್ಲಿಯೇ 2000 ಜನರು ಕುಳಿತುಕೊಳ್ಳುವ ಸಭಾಭವನ ನಿರ್ಮಾಣವಾಗಲಿದೆ.
ಮೂರು ಅಂತಸ್ತಿನ ಭವ್ಯ, ನಯನ ಮನೋಹರ ಹಾಗೂ ವಿಶಾಲವಾದ ಈ ಭವನದಲ್ಲಿ ಜ್ಞಾನ ಲೋಕ, ಧ್ಯಾನ ಲೋಕ, ದೇವ ಲೋಕವೆಂಬ ಮೂರು ವಿಭಾಗಗಳಿದ್ದು, ಸುಂದರವಾದ ಕಟ್ಟಡವು ಮೂರು ದಿಕ್ಕುಗಳಿಗೆ ಮುಖ ಮಾಡಿದೆ. ಜಾತಿ, ಮತ, ಭಾಷೆ, ವರ್ಣ, ವಯೊಭೇದವಿಲ್ಲದೇ ಸರ್ವರಿಗೂ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಉಚಿತವಾಗಿ ವೀಕ್ಷಿಸುವ ಅವಕಾಶ ಕಲ್ಪಿಸಲಾಗಿದೆ. ಅಬಾಲ-ವೃದ್ಧರಿಗೂ ಮತ್ತು ಯುವಪೀಳಿಗೆಗೂ ಅರ್ಥವಾಗುವಂತೆ ಅತಿ ಸರಳವಾದ ರೀತಿಯಲ್ಲಿ ಭಗವದ್ಗೀತೆಯ ಜ್ಞಾನದ ರಹಸ್ಯವನ್ನು ಇಲ್ಲಿ ತಿಳಿಸಲಾಗಿದೆ.
ಆತ್ಮವು ಅನಾದಿ ಅವಿನಾಶಿಯಾಗಿದ್ದು, ಮನಸ್ಸು-ಬುದ್ಧಿ-ಸಂಸ್ಕಾರ ಗಳಿಂದ ಕೂಡಿದೆ. ನಿಯಂತ್ರಣ ಶಕ್ತಿ ಮತ್ತು ಆಡಳಿತ ಶಕ್ತಿಯ ಮೂಲಕ ಜೀವಾತ್ಮನು ರಾಜನಾಗಿದ್ದಾನೆ. ದೇಹದ ಪಂಚ ಕರ್ಮೇಂದ್ರಿಯಗಳ ಮೇಲೆ ರಾಜ್ಯಭಾರ ಮಾಡುತ್ತಾನೆ. ವಿಜ್ಞಾನ ಮತ್ತು ಆತ್ಮಜ್ಞಾನದ ಪರಿಚಯ; ಆತ್ಮದ ಸ್ವಧರ್ಮ ಮತ್ತು ಪರಧರ್ಮಗಳು; ಆತ್ಮಹತ್ಯೆ ಮಹಾಪಾಪ; ಸೂಕ್ಷ್ಮ ಶರೀರದಲ್ಲಿ ರಾಘವೇಂದ್ರ, ಎಡೆಯೂರು ಸಿದ್ಧಲಿಂಗ, ಸಾಯಿಬಾಬಾ, ವೇಲಾಂಕಿಣಿ ಮಾತೆ, ಶಿಶುನಾಳ ಇತರೆ ಸಂತ ರಿಂದ ಜನಸೇವೆ; ಮನುಷ್ಯಾತ್ಮರ ಆಪ್ರಾಕೃತ ಶರೀರ; ಪ್ರಾರಬ್ಧ ಕರ್ಮ, ಕರ್ಮದಂತೆ ಫಲ, ಅಂತ್ಯಮತಿ-ಸೋ-ಗತಿ; ಆತ್ಮನಿಗೆ ಅವಸ್ಥಾ ದೇಹ ಪ್ರಾಪ್ತಿ; ಮಾತ-ಪಿತ ಋಣ; ಅನ್ನದ ಋಣ, ಧನ ಋಣ; ಹಿಂಸೆಯಿಂದ ಪ್ರಾಣಿ ಸಮಾನ ಜೀವನ; ಡಾರ್ವಿನ್‌ನ ತಪ್ಪು ಸಿದ್ಧಾಂತ; ಆಯಾಪ್ರಾಣಿ ಆತ್ಮಗಳು ಆ ಪ್ರಾಣಿಗಳಾಗಿ ಹುಟ್ಟುತ್ತವೆ; ಆತ್ಮನಿಗೆ ಪುನರ್ಜನ್ಮ ಇತರೆ ಆಧ್ಯಾತ್ಮಿಕ ವಿಚಾರಗಳ ಸತ್ಯ-ಸತ್ಯ ಪರಿಚಯವನ್ನು ಪ್ರಸ್ತುತಪಡಿಸಲಾಗಿದೆ.
ವಾಸಾಂಸಿ ಜೀರ್ಣಾನಿ ಯಥಾ ವಿಹಾಯ ನವಾನಿ ಗೃಹ್ಣಾತಿ ನರೋಪರಾಣಿ
ತಥಾ ಶರೀರಾಣಿ ವಿಹಾಯ ಜೀರ್ಣಾನ್ಯನ್ಯಾನಿ ಸಂಯಾತಿ ನವಾನಿ ದೇಹೀ (ಅ-2 ಶ್ಲೋ-22)
ಆತ್ಮಜ್ಞಾನಿಗೆ ರಾಷ್ಟ್ರ ಭೇದ, ಜಾತಿ ಭೇದ, ವರ್ಣ ಭೇದವಿಲ್ಲ. ಕರ್ಮಕ್ಕೆ ಅನುಗುಣವಾಗಿ ಪಾಪಾತ್ಮ, ಪುಣ್ಯಾತ್ಮ, ದೇವಾತ್ಮ, ಪ್ರೇತಾತ್ಮ, ಮಹಾತ್ಮ ಎಂದು ಹೇಳುತ್ತಾರೆ. ಚತುರ್ವಿಧ ಸೃಷ್ಟಿ ನಿಯಮ, ದೇಹ ಎಂಬ ಯಂತ್ರವನ್ನು ಆತ್ಮನೆಂಬ ಶಕ್ತಿಯು ನಡೆಸುತ್ತದೆ. ನೀವು ಯಾರು? ಜೈವಿಕ ಯಂತ್ರವೋ ಅಥವಾ ಆ ಯಂತ್ರವನ್ನು ನಡೆಸುವ ಚಾಲಕನೋ? ಈ ಎಲ್ಲಾ ವಿಚಾರಗಳೊಂದಿಗೆ ಆತ್ಮದ ಸ್ಥಿತಿ, ಗತಿ, ಜಡಶಕ್ತಿ, ಜೀವಶಕ್ತಿ, ಜೀವಕೋಶ ಮತ್ತು ಜೀವಾತ್ಮದ ಬಗ್ಗೆ ಅನೇಕ ಮಂಟಪಗಳಲ್ಲಿ ವಿಸ್ತಾರವಾಗಿ ಸುಂದರವಾದ ಚಿತ್ರಗಳು ಮತ್ತು ಮೂರ್ತಿಗಳ ಮೂಲಕ ಸತ್ಯ-ಸತ್ಯ ಗೀತಾಜ್ಞಾನವನ್ನು ತಿಳಿಸಲಾಗಿದೆ.
ಯೋಗಿ ಜೀವನ, ಧ್ಯಾನ ಮತ್ತು ಜ್ಞಾನದಿಂದ ಭಾವೈಕ್ಯತೆ, ರಾಜಯೋಗದಲ್ಲಿ ಏಕಾಗ್ರತೆ, ರಾಜಯೋಗದಿಂದ ಪುನಶ್ವೇತನ, ರಾಜಯೋಗಕ್ಕಾಗಿ ಈಶ್ವರೀಯ ಸಂಬಂಧ, ಅದಕ್ಕಾಗಿ ಬುದ್ಧಿಯ ಪರಿವರ್ತನೆ, ಮಾನವನ ಗುರಿ ಏನು? ಕ್ಷೇತ್ರ ಕ್ಷೇತ್ರಜ್ಞ ಯೋಗ, ಆತ್ಮನ ಅಕಾಲ ಸಿಂಹಾಸನ ಯೋಗ, ಧರ್ಮಗಳು ಮತ್ತು ಜಾತಿಗಳನ್ನು ಸೃಷ್ಟಿಸಿದವರು ಯಾರು? ಮಾನವರನ್ನು ದೇವತೆಗಳನ್ನಾಗಿ ರೂಪಿಸುವ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ, 60 ವರ್ಷಗಳ ಜೀವನ-ಚಕ್ರ, ಸಮಯದ ಗಣಿತ, ಜೀವನ ಬಂಧನ, ಸಮಯವಿಲ್ಲ-ಸಮಯವಿಲ್ಲ, ಭಗವದ್ಗೀತೆಯ ಆಧ್ಯಾತ್ಮಿಕ ಶಿಕ್ಷಣ, ಅಶಾಂತ ಜಗತ್ತು, ಸಮಯದ ಚಕ್ರ, ದಿನ ಚಕ್ರ, ವಾರ ಚಕ್ರ, ಮಾಸ ಚಕ್ರ, ಸಂವತ್ಸರ ಚಕ್ರ ಮತ್ತು 4 ಯುಗಗಳ ಕಾಲಚಕ್ರದ ಜ್ಞಾನವನ್ನು ಇಲ್ಲಿ ಕಾಣಬಹುದು.
ಇದು ಧರ್ಮಗ್ಲಾನಿಯ ಸಮಯವಾಗಿದೆ.
ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ
ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್ (ಅ-4 ಶ್ಲೋ-7);
ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಮ್
ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ (ಅ-4 ಶ್ಲೋ-8);
ವಿಶ್ವದ ಸರ್ವ ಸಮಸ್ಯೆಗಳಿಗೆ ಕಾರಣ ಅಹಂಕಾರ, ಮೋಹ, ಲೋಭ, ಕ್ರೋಧ, ಕಾಮ ವಿಕಾರಗಳಾಗಿವೆ. ಅಹಂಕಾರದ ಕಾರಣದಿಂದ ಧನಮದ, ರೂಪಮದ, ಧಾನ್ಯಮದ, ವಿದ್ಯೆಮದ, ಜಾತಿಮದ, ಕುಟುಂಬದಮದ ಉಂಟಾಗುತ್ತದೆ. ಮೋಹದ ಕಾರಣ ಶಿಶುವಿನ ಮೇಲೆ ಮೋಹ, ಪ್ರೇಯಸಿಯ ಮೇಲೆ ಮೋಹ, ಸ್ನೇಹಿತರ ಮೇಲೆ ಮೋಹ, ಶರೀರದ ಮೇಲೆ ಮೋಹ, ಸತ್ತ ಮರಿಯನ್ನು ಅಪ್ಪಿಕೊಂಡ ಕೋತಿ, ಬಡತನ, ವ್ಯಸನ, ದು:ಖ, ಆತ್ಮಹತ್ಯೆ ಹೃದಯಾಘಾತದ ದೃಶ್ಯಗಳನ್ನು ತೋರಿಸಲಾಗಿದೆ. ಲೋಭsದ ಪರಿಣಾಮ ಅಗತ್ಯಕ್ಕಿಂತ ಹೆಚ್ಚಿನ ವಾಹನಗಳು, ಉಡುಪುಗಳು, ಮನೆಗಳು, ಹಣ, ಬಂಗಾರದ ಬಿಸ್ಕಿಟ್‌ಗಳ ಸಂಗ್ರಹ ಮಾಡುತ್ತಾರೆ. ಕ್ರೋಧದಿಂದ ಅಣುಯದ್ಧ, ಜಾತಿಕಲಹ, ಗೃಹಯದ್ಧ, ಧರ್ಮಕಲಹವುಂಟಾಗುತ್ತದೆ. ಕಾಮವಿಕಾರದ ಪರಿಣಾಮ ಜನಸಂಖ್ಯಾ ಸ್ಫೋಟ, ವಸತಿ ಅಭಾವ, ನೀರಿನ ಅಭಾವ, ಉದ್ಯೋಗದ ಅಭಾವ, ಆಹಾರದ ಅಭಾವ, ವಾಹನಗಳ ಅಭಾವ ಉಂಟಾಗುತ್ತದೆ. ಈ ರೀತಿ ವಿಶೇಷವಾದ ಜ್ಞಾನವನ್ನು ಅನೇಕ ಮಂಟಪಗಳನ್ನು ತಿಳಿಸಲಾಗಿದೆ.
ಸುಂದರ ಸ್ವರ್ಗದ ದೃಶ್ಯಗಳನ್ನೊಳಗೊಂಡ ದೇವಲೋಕದ 24 ಮಂಟಪಗಳು ಇಲ್ಲಿ ಇವೆ. ಇದನ್ನು ನೋಡಲು ಕೃತಕ ದೋಣಿಯಲ್ಲಿ ಕುಳಿತು ನಿಧಾನವಾಗಿ ಮುಂದೆ ಸಾಗಬೇಕು. ಸ್ವರ್ಗಲೋಕದಲ್ಲಿ ಸುಂದರವಾದ ಚಿನ್ನದ ಮಹಲುಗಳು, ರಾಧ-ಕೃಷ್ಣ ಮತ್ತು ಸಂಗಡಿಗರು, ಆಟೋಪಚಾರದ ದೃಶ್ಯಗಳು, ಪುಷ್ಪಕ ವಿಮಾನಗಳು, ಸುಂದರ ನದಿ ತೀರ, ನವಿಲು, ಸುಂದರ ಪಕ್ಷಿಗಳು, ಹುಲಿ ಮತ್ತು ಹಸುಗಳು ಒಂದೇ ದಡದಲ್ಲಿ ನೀರು ಕುಡಿಯುವ ದೃಶ್ಯ, ಹೂದೋಟಗಳು, ಲಕ್ಷ್ಮಿ-ನಾರಾಯಣರ ಆಸ್ಥಾನದ ದೃಶ್ಯಗಳು ಸತ್ಯಯುಗವನ್ನೇ ಧರೆಗೆ ತಂದಿವೆ.
ಈ ಅದ್ಭುತವಾದ ಭಗವದ್ಗೀತ ಜ್ಞಾನಲೋಕಕ್ಕೆ ಇತ್ತೀಚೆಗೆ ‘ಇಂಟರ್ ನ್ಯಾಷನಲ್ ಎಕ್ಸಿಲೆನ್ಸ್ ಬುಕ್ ಆಫ್ ರೆಕಾರ್ಡ್’ ಪಾರಿತೋಷಕವು ಸಹ ದೊರೆತಿದೆ.
ಸ್ವತ: ಪರಮಾತ್ಮನೇ ಈ ಧರೆಗೆ ಬಂದು ಗೀತಾಜ್ಞಾನವನ್ನು ಪುನ: ತಿಳಿಸುತ್ತಿದ್ದಾನೆ. ಭಗವದ್ಗೀತಾ ಜಯಂತಿಯ ಈ ಸಮಯದಲ್ಲಿ ಸತ್ಯ ಗೀತಾಜ್ಞಾನವನ್ನು ತಿಳಿದುಕೊಳ್ಳಲು ಭೇಟಿ ನೀಡಿ ತಮ್ಮ ಜೀವನವನ್ನು ಧನ್ಯ ಮಾಡಿಕೊಳ್ಳಿ. ಎಷ್ಟು ವರ್ಣನೆ ಮಾಡಿದರೂ ಸಾಲದು, ತಾವೇ ಕಣ್ಣಾರೆ ನೋಡಿ ಆನಂದಿಸಿರಿ. ಕಲ್ಲು-ಸಕ್ಕರೆಯ ಸವಿಯ ಬಗ್ಗೆ ಗಂಟೆಗಳ ಕಾಲ ವರ್ಣನೆ ಕೇಳುವುದಕ್ಕಿಂತ ಬಾಯಿಯಲ್ಲಿ ಹಾಕಿ ಸಿಹಿ ರುಚಿ ಅನುಭವಿಸುವುದು ಬಹಳ ಒಳ್ಳೆಯದು.
-ಬ್ರ.ಕು.ವಿಶ್ವಾಸ ಸೋಹೋನಿ.
ಬ್ರಹ್ಮಾಕುಮಾರೀಸ್, ಮೀಡಿಯಾ ವಿಂಗ್,_
9483937106.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ