*ರಹಸ್ಯದೊಳಗೆ ಮತ್ತೊಂದು ರಹಸ್ಯ*: *ಪೊಲೀಸ್ ಕಚೇರಿ ಸಿಬ್ಬಂದಿ, ಎಫ್ಎಸ್ಎಲ್ ಅಧಿಕಾರಿಗಳೂ ಪೊಲೀಸ್ ಬಲೆಗೆ?* *ಈ ಸುದ್ದಿ ಬೆಚ್ಚಿಬೀಳಿಸುತ್ತೆ ನಿಮ್ಮನ್ನು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಸಾವಿನ ಹಿಂದಿನ ರಹಸ್ಯ ಭೇದಿಸಿ ಪತ್ನಿ ಹಾಗೂ ಪ್ರಿಯಕರನಿಂದ ಆಸ್ಪತ್ರೆಯಲ್ಲೇ ವ್ಯಕ್ತಿಯ ಕೊಲೆ ಎನ್ನುವುದನ್ನು ಭೇಧಿಸಿದ ಪೊಲೀಸರು ನಿಟ್ಟುಸಿರು ಬಿಡುವ ಹೊತ್ತಿಗೇ ಮತ್ತೊಂದು ಕತರ್ನಾಕ್ ರಹಸ್ಯ ಅದೇ ಕೊಲೆ ಪ್ರಕರಣದಲ್ಲಿ ಬಯಲಾಗಿದೆ.
ಈ ಪ್ರಕರಣವನ್ನು ಮುಚ್ಚಿ ಹಾಕಲು ಎಫ್ಎಸ್ಎಲ್ ವರದಿಯನ್ನೇ ತಿರುಚುವ ಯತ್ನ ನಡೆಸಿದ್ದ ಪೊಲೀಸ್ ಕಮಿಷನರ್ ಕಟೇರಿ ಸಿಬ್ಬಂದಿ ಹಾಗೂ ಎಫ್ಎಸ್ಎಲ್ ಕಚೇರಿ ಅಧಿಕಾರಿ, ಸಿಬ್ಬಂದಿಯ ದುಷ್ಕೃತ್ಯ ಕೂಡ ಹೊರಗೆ ಬಂದಿದ್ದು, ಹಲವು ಅಧಿಕಾರಿ, ಸಿಬ್ಬಂದಿಯನ್ನು ಪೊಲೀಸರು ವಶಕ್ಕೆ ಪಡೆದಿರುವ ಮಾಹಿತಿ ಲಭ್ಯವಾಗಿದೆ.
ಘಟಪ್ರಭಾ, ಯಮಕನಮರಡಿ ಪೊಲೀಸ್ ಠಾಣೆ ವ್ಯಾಪ್ತಿಯನ್ನೊಳಗೊಂಡು ಸುತ್ತಾಡುತ್ತಿದ್ದ ರಹಸ್ಯ ಕೊಲೆ ಪ್ರಕರಣ ಇದೀಗ ಬೆಳಗಾವಿ ನಗರ ವ್ಯಾಪ್ತಿಗೂ ವಿಸ್ತರಣೆಯಾಗಿದೆ. ಹಲವಾರು ನಿಗೂಢ ಪ್ರಕರಣಗಳನ್ನು ಭೇಧಿಸಿ ಚಾಣಾಕ್ಷತೆ ಮೆರೆದಿರುವ ಯಮಕನಮರಡಿ ಠಾಣೆಯ ಇನಸ್ಪೆಕ್ಟರ್ ಜಾವೀದ್ ಮುಶಾಪುರೆ ಹೊರಗೆಳೆದಿರುವ ಈ ಕೊಲೆ ಪ್ರಕರಣ ಈಗ ಮತ್ತೊಂದು ಮಜಲು ಪಡೆದುಕೊಂಡಿದೆ. ಇಡೀ ಸುದ್ದಿ ಓದಿದೆ ನೀವು ಬೆಚ್ಚಿ ಬೀಳುತ್ತೀರಿ.
ಚಹಾ ಅಂಗಡಿ ನಡೆಸಲು ನೇಮಿಸಿಕೊಳ್ಳಲಾಗಿದ್ದ ಹುಡುಗನೊಂದಿಗೆ ಅನೈತಿಕ ಸಂಬಂಧಕ್ಕಿಳಿದ ಪತ್ನಿ, ಅಪಘಾತದಿಂದಾಗಿ ಆಸ್ಪತ್ರೆ ಸೇರಿದ್ದ ಗಂಡನನ್ನು ಸಲೈನ್ ನಲ್ಲಿ ವಿಷ ಸೇರಿಸಿ ಸಾಯಿಸುತ್ತಾಳೆ. ಅಪಘಾತವೇ ಸಾವಿಗೆ ಕಾರಣ ಎಂದು ನಂಬಿದ್ದ ಪೊಲೀಸರು ಈ ರಹಸ್ಯವನ್ನು ಬಯಲು ಮಾಡಿದ್ದೇ ರೋಚಕ. ಇದರ ಮುಂದಿನ ಭಾಗವಾಗಿ, ಲ್ಯಾಬ್ ರಿಪೋರ್ಟ್ ಬದಲಾಯಿಸುವ ಮೂಲಕ ಇಡೀ ಪ್ರಕರಣ ತಿರುಚಲು ಪೊಲೀಸ್ ಕಮಿಷನರ್ ಕಚೇರಿ ಪ್ರಥಮ ದರ್ಜೆ ಗುಮಾಸ್ತ ಮತ್ತು ಎಫ್ಎಸ್ಎಲ್ ಕಚೇರಿ ಅಧಿಕಾರಿ, ಸಿಬ್ಬಂದಿಯನ್ನೇ ಬಳಸಿಕೊಂಡಿರುವ ಮತ್ತೊಂದು ಸಂಗತಿಯನ್ನು ಜಾವೀದ್ ಮುಶಾಪುರೆ ಹೊರಗೆಡವಿದ್ದಾರೆ.
ಈಗಾಗಲೆ ಗಮನ ಸಾವಿಗೆ ಕಾರಣಳಾಗಿದ್ದ ಪತ್ನಿ ಸುಮಾ ಮತ್ತು ಪ್ರಿಯತನ ಪುಂಡಲೀಕ್ ಅವರನ್ನು ಬಂಧಿಸಿ, ಹಿಂಡಲಗಾ ಜೈಲಿಗೆ ತಳ್ಳಿದ್ದು, ಈಗ ಬಂದಿರುವ ಮಾಹಿತಿ ಪ್ರಕಾರ ಪೊಲೀಸ್ ಕಮಿ|ನರ್ ಕಚೇರಿ ಪ್ರಥಮ ದರ್ಜೆ ಗುಮಾಸ್ತ ಮತ್ತು ಎಫ್ಎಸ್ಎಲ್ ಕಚೇರಿಯ ಕೆಲವು ಅಧಿಕಾರಿ -ಸಿಬ್ಬಂದಿ ಸಹ ಪೊಲೀಸ್ ವಶದಲ್ಲಿದ್ದಾರೆ.
ಬಿಡಿಸುತ್ತ ಹೊದಂತೆ ರಹಸ್ಯದೊಳಗೊಂದು ರಹಸ್ಯ ಕಾಣಿಸುತ್ತಿರುವ ಈ ಪ್ರಕರಣ ಘಟಪ್ರಭಾ ಠಾಣೆ ವ್ಯಾಪ್ತಿಯದ್ದಾದರೂ, ಇನಸ್ಪೆಕ್ಟರ್ ಜಾವೀದ್ ಯಾವ ಮುಲಾಜಿಲ್ಲದೆ ಚಾಣಾಕ್ಷತೆಯಿಂದ ಜಾಲಾಡಿಸುತ್ತಿರುವುದನ್ನು ನೋಡಿದ ಹಿರಿಯ ಅಧಿಕಾರಿಗಳು ಅವರಿಂದಲೇ ತನಿಖೆ ಮುಂದುವರಿಸುತ್ತಿದ್ದಾರೆ.
ಒಟ್ಟಾರೆ ಇಡೀ ಪ್ರಕರಣ ಹಲವು ಆಯಾಮಗಳನ್ನು ಪಡೆದುಕೊಳ್ಳುತ್ತಿದ್ದು, ಮುಚ್ಚಿಯೇ ಹೊಗುತ್ತಿದ್ದ ಪ್ರಕರಣವನ್ನು ಪತ್ತೆದಾರಿ ಸಿನೇಮಾ ರೀತಿಯಲ್ಲಿ ಬಯಲು ಮಾಡುತ್ತಿರುವ ಪೊಲೀಸರ ಬುದ್ದಿಗೆ ಹ್ಯಾಟ್ಸಪ್ ಹೇಳಲೇಬೇಕು.



