Belagavi NewsBelgaum NewsCrimeKannada NewsKarnataka News

*ವಾಟ್ಸಾಪ್‌ಗೆ ಎಪಿಕೆ ಫೈಲ್ ಕಳುಹಿಸಿ ಖಾತೆಯಲ್ಲಿದ್ದ ಹಣ ದೋಚಿದ ಸೈಬರ್ ವಂಚಕರು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಆರ್‌ಟಿಒ ಚಲನ್ ಪಾವತಿಯ ಹೆಸರಿನಲ್ಲಿ ವಾಟ್ಸಾಪ್‌ಗೆ ಎಪಿಕೆ  ಫೈಲ್ ಕಳುಹಿಸಿ, ಮೊಬೈಲ್ ಹ್ಯಾಕ್ ಮಾಡುವ ಮೂಲಕ ಬ್ಯಾಂಕ್ ಖಾತೆಯಲ್ಲಿದ್ದ ಬರೋಬ್ಬರಿ 2,44,791 ರೂ. ಹಣವನ್ನು ಅಪರಿಚಿತರು ದೋಚಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬೊರಗಾವಿ ಗ್ರಾಮದ ನಿವಾಸಿ ಗಜಾನನ ಉಮರಾಣಿ ಎಂಬುವರು ಹಣ ಕಳೆದುಕೊಂಡ ದುರ್ದೈವಿ. ಗಜಾನನ ಅವರ ಮೊಬೈಲ್ ವಾಟ್ಸಾಪ್‌ಗೆ ಆರ್‌ಟಿಒ ಚಲನ್ ಪಾವತಿಗೆ ಸಂಬಂಧಿಸಿದಂತೆ ಸಂದೇಶವೊಂದು ಬಂದಿತ್ತು. ನಿಮ್ಮ ವಾಹನದ ಚಲನ್ ವಿವರಗಳನ್ನು ಪರಿಶೀಲಿಸಿ ಎಂದು ನಂಬಿಸಿ ಸೈಬರ್ ಖದೀಮರು ಒಂದು ಎಪಿಕೆ ಫೈಲ್ ಅನ್ನು ಕಳುಹಿಸಿದ್ದರು. ನಿಜವಾದ ಆರ್‌ಟಿಒ ಸಂದೇಶ ಇರಬಹುದೆಂದು ನಂಬಿದ ಗಜಾನನ, ಆ ಫೈಲ್ ಅನ್ನು ಡೌನ್‌ಲೋಡ್ ಮಾಡಿ ಮೊಬೈಲ್‌ನಲ್ಲಿ ಇನ್‌ಸ್ಟಾಲ್ ಮಾಡಿದ್ದಾರೆ.

ಅಪ್ಲಿಕೇಶನ್ ಇನ್‌ಸ್ಟಾಲ್ ಆಗುತ್ತಿದ್ದಂತೆ ಸೈಬರ್ ಕಳ್ಳರು ಗಜಾನನ ಅವರ ಮೊಬೈಲ್‌ ಹ್ಯಾಕಗ ಮಾಡಿದ್ದಾರೆ. ಮೊಬೈಲ್‌ನಲ್ಲಿದ್ದ ಬ್ಯಾಂಕ್ ಖಾತೆಯ ಗೌಪ್ಯ ಮಾಹಿತಿ ಹಾಗೂ ಒಟಿಪಿಗಳನ್ನು ದುರುಪಯೋಗಪಡಿಸಿಕೊಂಡು, ಕೇವಲ ಕೆಲವೇ ಕ್ಷಣಗಳಲ್ಲಿ ಖಾತೆಯಲ್ಲಿದ್ದ 2,44,791 ರೂ. ಹಣವನ್ನು ಅಪರಿಚಿತ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾರೆ. ಮೊಬೈಲ್‌ಗೆ ಹಣ ಕಡಿತವಾದ ಸಂದೇಶಗಳು ಬಂದ ಬಳಿಕವೇ ತಾವು ಸೈಬರ್ ವಂಚನೆಗೆ ಒಳಗಾಗಿರುವುದು ಗಜಾನನ ಅವರಿಗೆ ಅರಿವಾಗಿದೆ.

ವಂಚನೆ ಕುರಿತು ಅವರು ಜಿಲ್ಲಾ ಸೈಬರ್ ಅಪರಾಧ ಪೊಲೀಸ್ ಠಾಣೆಗೆ ಅಧಿಕೃತ ದೂರು ನೀಡಿದ್ದಾರೆ. ಸಂತ್ರಸ್ತರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಬೆಳಗಾವಿ ಜಿಲ್ಲಾ ಸೈಬ‌ರ್ ಅಪರಾಧ ಠಾಣೆಯ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. 

Home add -Advt

ವಂಚಕರು ಹಣ ವರ್ಗಾವಣೆ ಮಾಡಿಕೊಂಡಿರುವ ಬ್ಯಾಂಕ್ ಖಾತೆಗಳ ವಿವರಗಳನ್ನು ಕಲೆಹಾಕಲಾಗುತ್ತಿದ್ದು ಮೊಬೈಲ್ ಹ್ಯಾಕ್ ಮಾಡಲು ಬಳಸಲಾದ ಎಪಿಕೆ ಫೈಲ್ ಮೂಲದ ಕುರಿತು ತಾಂತ್ರಿಕ ಪರಿಶೀಲನೆ ನಡೆಸುತ್ತಿದ್ದಾರೆ.

Related Articles

Back to top button