
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೊರೋನಾ ಮತ್ತು ಲಾಕ್ ಡೌನ್ ವಿಷಮ ಪರಿಸ್ಥಿತಿಯಲ್ಲಿ ಕೋವಿಡ್ – 19 ಕುರಿತಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿರುವ ಆಶಾ ಕಾರ್ಯಕರ್ತೆಯರ ಸೇವೆ ಅನನ್ಯವಾಗಿದೆ ಎಂದು ಆರ್ ಎಸ್ ಎಸ್ ಕರ್ನಾಟಕ ಉತ್ತರ ಪ್ರಾಂತ ಕಾರ್ಯವಾಹ ರಾಘವೇಂದ್ರ ಕಾಗವಾಡ ಹೇಳಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಸೇವಾ ಭಾರತಿ ನೇತೃತ್ವದಲ್ಲಿ ನಗರದ ಮಹಾವೀರ ಭವನದಲ್ಲಿ ಮಂಗಳವಾರ ಆಯೋಜಿಸಲಾದ ಆಶಾ ಕಾರ್ಯಕರ್ತೆಯರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಸಮಸ್ತ ರಾಷ್ಟ್ರ ಲಾಕ್ ಡೌನದಿಂದ ಸ್ತಬ್ಧಗೊಂಡಿದೆ. ಎಲ್ಲ ಸಾರ್ವಜನಿಕರು ಒಂದಲ್ಲಾ ಒಂದು ಸಮಸ್ಯೆ ಎದುರಿಸುತ್ತಿದ್ದಾರೆ. ಆದರೆ ವೈದ್ಯಕೀಯ ಸೇವೆ ಭಾಗವಾಗಿ ಆಶಾ ಕಾರ್ಯಕರ್ತೆಯರು ತಮ್ಮ ಎಲ್ಲ ವೈಯಕ್ತಿಕ ಕಷ್ಟಗಳನ್ನು ಬದಿಗೊತ್ತಿ ಸಮಾಜದ ಆರೋಗ್ಯಕ್ಕಾಗಿ ಶ್ರಮಿಸುತ್ತಿದ್ದಾರೆ ಎಂದರು.
ಕೊರೋನಾ ವಾರಿಯರ್ಸ್ ಆಗಿರುವ ಆಶಾ ಕಾರ್ಯಕರ್ತೆಯರ ಮೇಲೆ ಕೂಡಾ ಹಲ್ಲೆ ನಡೆದಿರುವುದು ಖಂಡನೀಯ. ಕೆಲ ಆಶಾ ಕಾರ್ಯಕರ್ತೆಯರ ಕುಟುಂಬದ ಸದಸ್ಯರು ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ಪಡೆಯುತ್ತಿದ್ದರು, ತಮ್ಮ ಸೇವೆಯಿಂದ ಬಿಡುಗಡೆ ಹೊಂದದೆ ಕೊರೋನಾ ವಿರುದ್ಧದ ಯುದ್ಧದ ಮೊದಲ ಸಾಲಿನ ಸೈನಿಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಲ್ಲೆ , ಬೆದರಿಕೆ ಹಾಗೂ ಅವಮಾನ ಹೀಗೆ ನೂರಾರು ಅಸಹಕಾರಗಳನ್ನು ಎದುರಿಸುತ್ತಾ ತಮ್ಮ ಕರ್ತವ್ಯದಿಂದ ವಿಚಲೀತರಾಗದೆ ಸಮಾಜದ ಸ್ವಾಸ್ಥಕ್ಕಾಗಿ ತಮ್ಮ ಪ್ರಾಣದ ಹಂಗು ತೊರೆದು ಹಗಲಿರುಳು ದುಡಿಯುತ್ತಿರುವ ಆಶಾ ಕಾರ್ಯಕರ್ತರೆಯರಿಗೆ ಸಮಾಜ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು ಎಂದರು.
ಈ ಸಂದರ್ಭದಲ್ಲಿ ಭಾಗವಹಿಸಿದ ಬೆಳಗಾವಿ ಉತ್ತರ ಮತ್ತು ದಕ್ಷಿಣ ಕ್ಷೇತ್ರದ ಆಶಾ ಕಾರ್ಯಕರ್ತೆಯರಿಗೆ ಛತ್ರಿ, ಉತ್ತಮ ಗುಣಮಟ್ಟದ ಮಾಸ್ಕ್ ಮತ್ತು ಸ್ಯಾನಿಟೈಜರ್ ಒಳಗೊಂಡ ಕಿಟ್ ಅನ್ನು ನೀಡಿ ಸನ್ಮಾನಿಸಲಾಯಿತು.
ವಿಭಾಗ ಕಾರ್ಯವಾಹ ಕೃಷ್ಣಾನಂದ ಕಾಮತ್, ಸಂಘದ ಪ್ರಮುಖರಾದ ಅಶೋಕ್ ಶಿಂತ್ರೆ, ರವೀಶ ಕೊಡಗಾನೂರ, ಶಾಸಕರಾದ ಅನಿಲ ಬೆನಕೆ, ಅಭಯ ಪಾಟೀಲ, ರಾಜು ಚಿಕ್ಕನಗೌಡರ, ಮಂಗೇಶ ಪವಾರ ಭಾಗವಹಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ