Latest

ಮುಂದಿನ ವರ್ಷದಿಂದ ಜಾಗತಿಕ ಮಟ್ಟದಲ್ಲಿ ಭಜನಾ ತರಬೇತಿ

ಪ್ರಗತಿವಾಹಿನಿ ಸುದ್ದಿ,  ಉಜಿರೆ -: ಧರ್ಮಸ್ಥಳದ ವತಿಯಿಂದ ಮುಂದಿನ ವರ್ಷದಿಂದ ಆನ್ ಲೈನ್ ಮೂಲಕ ಜಾಗತಿಕ ಮಟ್ಟದಲ್ಲಿ ಭಜನಾ ತರಬೇತಿ ನೀಡಲಾಗುವುದು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರು ಪ್ರಕಟಿಸಿದರು.
 ಧರ್ಮಸ್ಥಳದಲ್ಲಿ ಶನಿವಾರ ಕರ್ನಾಟಕ ಭಜನಾ ಪರಿಷತ್ ನೇತೃತ್ವದಲ್ಲಿ ಆಯೋಜಿಸಿದ ಪ್ರಾರ್ಥನಾ ಸಮಾವೇಶದಲ್ಲಿ ಅವರು ಮಾತನಾಡಿದರು.

ಭಜನಾ ತರಬೇತಿ ಕಮ್ಮಟ ದಿಂದಾಗಿ ಜನರಲ್ಲಿ ಭಜನೆ ಬಗ್ಗೆ ಗೌರವ, ಭಕ್ತಿ, ಶಿಸ್ತು, ಸಂಯಮ, ನಾಯಕತ್ವ ಗುಣ ಹಾಗೂ ಮಾನವೀಯ ಮೌಲ್ಯಗಳೊಂದಿಗೆ ಧಾರ್ಮಿಕ ಪ್ರಜ್ಞೆ ಮೂಡಿಬಂದಿದೆ ಎಂದು ಹೇಳಿದರು.
ಧರ್ಮಸ್ಥಳದಲ್ಲಿ ದೇವರ ಅಪ್ಪಣೆ ಪಡೆದು ಜಾತ್ರೆ ಹಾಗೂ ಎಲ್ಲಾ ಕಾರ್ಯಕ್ರಮಗಳನ್ನು ಸರಳವಾಗಿ  ಆಚರಿಸಲಾಗುತ್ತದೆ. ಈ ವರ್ಷ ಭಜನಾ ತರಬೇತಿ ಕಮ್ಮಟದ ಬದಲು ಸಾಂಕೇತಿಕವಾಗಿ ಒಂದು ದಿನದ ಪ್ರಾರ್ಥನಾ ಸಮಾವೇಶ ನಡೆಸಲಾಗುತ್ತದೆ ಎಂದು ಹೇಳಿದರು.
ಪ್ರಾರ್ಥನಾ ಸಮಾವೇಶ ಉದ್ಘಾಟಿಸಿದ ಮಾಣಿಪಾಲದ ಮೋಹನದಾಸ ಸ್ವಾಮೀಜಿ ಮಾತನಾಡಿ ಭಜನೆಯಿಂದ ಮಾನಸಿಕ ಪರಿವರ್ತನೆಯಾಗಿ ತಾಮಸ ಗುಣಗಳು ದೂರವಾಗಿ ಸಾತ್ವಿಕ ಗುಣಗಳು ಮೂಡಿಬರುತ್ತವೆ. ಉತ್ತಮ ಸಂಸ್ಕಾರದೊಂದಿಗೆ ಧರ್ಮದ ಅನುಷ್ಠಾನವಾಗುತ್ತದೆ ಎಂದರು.

ಧರ್ಮಸ್ಥಳ ಜಾಗತಿಕ ವಿಶ್ವವಿದ್ಯಾಲಯ:

ಗಣೇಶ್ ಅಮೀನ್ ಸಂಕಮಾರ್ ಶುಭಾಶಂಸನೆ ಮಾಡಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ವಿಶ್ವ ವಿಜ್ಞಾನಿಯಾಗಿದ್ದು, ಧರ್ಮಸ್ಥಳವು ಲೋಕ ಕಲ್ಯಾಣವನ್ನು ಉಂಟುಮಾಡುವ ಜಾಗತಿಕ ವಿಶ್ವವಿದ್ಯಾಲಯವಾಗಿದೆ ಎಂದು ಬಣ್ಣಿಸಿದರು. ಧರ್ಮಸ್ಥಳದಲ್ಲಿ ಸತ್ಯ, ಧರ್ಮ, ನ್ಯಾಯ ಮತ್ತು ನೀತಿ ನೆಲೆ ನಿಂತಿದ್ದು ನಿತ್ಯವೂ ಅನುಷ್ಠಾನದಲ್ಲಿದೆ. ಇಲ್ಲಿ ನಿತ್ಯವೂ ನಡೆಯುವ ಚತುರ್ವಿಧ ದಾನ ಪರಂಪರೆ, ಗ್ರಾಮಾಭಿವೃದ್ಧಿ ಯೋಜನೆಯ ಸೇವಾಕಾರ್ಯಗಳು, ಮಹಿಳಾ ಸಬಲೀಕರಣ, ಲೋಕ ಕಲ್ಯಾಣ ಕಾರ್ಯಕ್ರಮಗಳು ವಿಶ್ವಮಾನ್ಯವಾಗಿದೆ ಎಂದು ಶ್ಲಾಘಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button