Kannada NewsKarnataka NewsLatest

*ನಕಲಿ ದಾಖಲೆ ಸೃಷ್ಟಿಸಿ ಬಿಡಿಎ ಜಮೀನು ಕಬಳಿಕೆ ಯತ್ನ: ಐವರ ವಿರುದ್ಧ FIR ದಾಖಲು*

ಪ್ರಗತಿವಾಹಿನಿ ಸುದ್ದಿ: 160 ಕೋಟಿ ರೂ. ಮೌಲ್ಯದ ಬಿಡಿಎ (ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ) ಜಮೀನನ್ನು ನಕಲಿ ದಾಖಲೆಗಳ ಮೂಲಕ ಅಕ್ರಮವಾಗಿ ಕಬಳಿಕೆ ಮಾಡಲು ಯತ್ನಿಸಿದ ಪ್ರಕರಣವು ಬೆಳಕಿಗೆ ಬಂದಿದೆ. ಬೆಂಗಳೂರು ದಕ್ಷಿಣದ ಕೊತ್ತನೂರಿನಲ್ಲಿರುವ ಬಿಡಿಎ ಆಸ್ತಿ ಕಬಳಿಕೆ ಆರೋಪ ಸಂಬಂಧ ಲಕ್ಷ್ಮೀನಾರಾಯಣ, ಮಾರುತಿ ಕುಮಾರ್ ಸೇರಿದಂತೆ ಐವರ ವಿರುದ್ಧ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.

ಡಿವೈಎಸ್‌ಪಿ ಹನುಮಂತರಾಯ ಅವರು ನೀಡಿದ ದೂರಿನ ಆಧಾರದ ಮೇಲೆ ಈ ಪ್ರಕರಣವನ್ನು ದಾಖಲಿಸಲಾಗಿದ್ದು, ಸರ್ಕಾರಿ ಜಾಗವನ್ನು ನಕಲಿ ದಾಖಲೆಗಳ ಮೂಲಕ ಗುಳುಂ ಮಾಡಲು ಯತ್ನಿಸಿದ ಭೂಗಳ್ಳರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಈ 160 ಕೋಟಿ ರೂ. ಮೌಲ್ಯದ ಜಾಗವು ಸರ್ವೆ ನಂಬರ್ 177/1 ಮತ್ತು 176/1 ರಲ್ಲಿ ಬರುವ 10 ಗುಂಟೆ ಆಸ್ತಿಯಾಗಿದೆ. ಬಿಡಿಎ ಈ ಆಸ್ತಿಯನ್ನು 1994ರ ಅಕ್ಟೋಬರ್‌ನಲ್ಲಿ ಅಂತಿಮ ಅಧಿಸೂಚನೆ ಹೊರಡಿಸಿ ಸ್ವಾಧೀನಪಡಿಸಿಕೊಂಡಿತ್ತು. 1995ರ ಡಿಸೆಂಬರ್‌ನಲ್ಲಿ ಇದಕ್ಕೆ ಸಂಬಂಧಿಸಿದ ತೀರ್ಪು ಅನುಮೋದನೆಗೊಂಡಿತ್ತು ಮತ್ತು 1999ರಲ್ಲಿ ಇದನ್ನು ಅಭಿಯಂತರ ವಿಭಾಗಕ್ಕೆ ಹಸ್ತಾಂತರಿಸಲಾಗಿತ್ತು.

Home add -Advt

ಈ ಜಮೀನು ಬಿಡಿಎಗೆ ಸೇರಿದ್ದೆಂದು ಕರ್ನಾಟಕ ಹೈಕೋರ್ಟ್ ಸಹ ಆದೇಶ ನೀಡಿತ್ತು. ಅಷ್ಟೇ ಅಲ್ಲದೆ, 1996ರಲ್ಲಿ ವಾರಸುದಾರರಾದ ಮಾರಿಯಮ್ಮ ಅವರಿಗೆ ಬಿಡಿಎ ಕಡೆಯಿಂದ ಪರಿಹಾರವನ್ನೂ ನೀಡಲಾಗಿತ್ತು. ಆದರೂ, ಆರೋಪಿಗಳು ನಕಲಿ ಜಿಪಿಎ ದಾಖಲೆಗಳನ್ನು ಸೃಷ್ಟಿಸಿ ಈ ಕೋಟ್ಯಂತರ ರೂ. ಮೌಲ್ಯದ ಆಸ್ತಿಯನ್ನು ಕಬಳಿಸಲು ಯತ್ನಿಸಿದ್ದಾರೆ. ಇತ್ತೀಚೆಗೆ ಹರ್ಷವರ್ಧನ್ ಎಂಬುವರು ಬಿಡಿಎ ಆಯುಕ್ತರಿಗೆ ಈ ಬಗ್ಗೆ ದೂರು ನೀಡಿದ್ದರು. ಡಿವೈಎಸ್‌ಪಿ ಹನುಮಂತರಾಯ ಅವರು ಈ ದೂರಿನ ತನಿಖೆ ನಡೆಸಿ, ನಕಲಿ ದಾಖಲೆಗಳ ಸೃಷ್ಟಿ ನಡೆದಿರುವುದನ್ನು ಖಚಿತಪಡಿಸಿಕೊಂಡ ನಂತರ ಎಫ್‌ಐಆರ್ ದಾಖಲಿಸಲಾಗಿದೆ.

ಪ್ರತ್ಯೇಕ ಸರ್ವೆ ನಂಬರ್‌ಗಳ ಕಾರಣದಿಂದ ಎರಡು ಪ್ರತ್ಯೇಕ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಸದ್ಯ ಐವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Related Articles

Back to top button