ಸಂಸದ ತೇಜಸ್ವಿ ಸೂರ್ಯ ಮತ್ತವರ ತಂಡದ ಸಾಧನೆ
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಬೆಂಗಳೂರಿನಲ್ಲಿ ನಡೆಯುತ್ತಿರುವ ಮಧ್ಯರಾತ್ರಿ ಕೊರೋನಾ ಬೆಡ್ ಬ್ಲಾಕಿಂಗ್ ದಂಧೆಯ ಕುರಿತು ಸಿಸಿಬಿ ತನಿಖೆಗೆ ಆದೇಶಿಸಲಾಗಿದೆ.
ಪೊಲೀಸ್ ಆಯುಕ್ತ ಕಮಲ್ ಪಂಥ್ ಈ ವಿಷಯ ತಿಳಿಸಿದ್ದಾರೆ. ಇಂದು ಬೆಳಗ್ಗೆ ಬೆಂಗಳೂರು ಸಂಸದ ತೇಜಸ್ವಿ ಸೂರ್ಯ ಮತ್ತು ಅವರ ತಂಡ ಬೆಡ್ ಬ್ಲಾಕಿಂಗ್ ದಂಧೆಯನ್ನು ಪತ್ತೆ ಹಚ್ಚಿದ್ದರು. ಉನ್ನತ ಅಧಿಕಾರಿಗಳು ಹಾಗೂ ಖಾಸಗಿ ವ್ಯಕ್ತಿಗಳು ಸೇರಿ ಈ ದಂಧೆ ನಡೆಸುತ್ತಿರುವುದು ಪತ್ತೆಯಾಗಿದೆ.
ಕಳೆದ ಹಲವು ದಿನಗಳಿಂದ ಬೆಡ್ ಬ್ಲಾಕಿಂಗ್ ದಂಧೆ ನಡೆಯುತ್ತಿರುವ ಕುರಿತು ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ತನಿಖೆಗಿಳಿದ ತೇಜಸ್ವಿ ಸೂರ್ಯ ಮತ್ತು ಅವರ ತಂಡ, ಒಬ್ಬ ವ್ಯಕ್ತಿಯನ್ನು ಪತ್ತೆ ಮಾಡಿ 25 ಸಾವಿರ ರೂ.ಗಳನ್ನು ಪೋನ್ ಪೇ ಮಾಡಿ ಬೆಡ್ ಬ್ಲಾಕ್ ಮಾಡಿಸಿದರು. ತಕ್ಷಣ ಆತನನ್ನು ಬಂಧಿಸುವಂತೆ ಪೊಲೀಸರಿಗೆ ಆದೇಶ ನೀಡಿ ಇಡೀ ದಂಧೆಯನ್ನು ಬಯಲು ಮಾಡಿದರು.
ಸುಮಾರು 15 ಆಸ್ಪತ್ರೆಗಳಲ್ಲಿ ಈ ದಂಧೆ ನಡೆಯುತ್ತಿತ್ತು. 400ಕ್ಕೂ ಹೆಚ್ಚು ಬೆಡ್ ಗಳು ಬ್ಲಾಕ್ ಆಗಿರುವ ಶಂಕೆ ಇದೆ. ಒಬ್ಬೊಬ್ಬರ ಹೆಸರಿನಲ್ಲಿ 5ರಿಂದ 12 ಹಾಸಿಗೆವರೆಗೆ ಬುಕ್ ಆಗುತ್ತಿದ್ದವು. ಈ ಎಲ್ಲ ಆಸ್ಪತ್ರೆಗಳಲ್ಲಿ ಮಧ್ಯರಾತ್ರಿ 12 ಗಂಟೆಗೆ ರೋಗಿಯ ಡಿಸ್ಚಾರ್ಜ್ ಆಗುತ್ತಿತ್ತು. 12 ಗಂಟೆ 1 ನಿಮಿಷಕ್ಕೆ ಆ ಬೆಡ್ ಬ್ಲಾಕ್ ಆಗುತ್ತಿತ್ತು. ಸಾದಿ ಬೆಡ್ 40 ಸಾವಿರ ರೂ., ಐಸಿಯು ಬೆಡ್ 80 ಸಾವಿರ ರೂ.ಗಳಿಗೆ ಬುಕ್ ಆಗುತ್ತಿದ್ದವು.
ಇಂತಹ ಅತೀ ದೊಡ್ಡ ಮತ್ತು ಅಮಾನವೀಯ ಕರಾಳ ದಂಧೆಯನ್ನು ತೇಜಸ್ವಿ ಸೂರ್ಯ ಮತ್ತು ತಂಡ ಪತ್ತೆ ಮಾಡಿದೆ. ಶಾಸಕರಾದ ರವಿಸುಬ್ರಹ್ಮಣ್ಯ, ಸತೀಶ್ ರೆಡ್ಡಿ ಮತ್ತಿತರರು ಕಾರ್ಯಾಚರಣೆಯಲ್ಲಿದ್ದರು.
ಇಡೀ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವಹಿಸಲಾಗಿದೆ. ಇದರ ಹಿಂದೆ ಯಾರ್ಯಾರಿದ್ದಾರೆ? ಎಷ್ಟು ದಿನದಿಂದ ನಡೆಯುತ್ತಿದೆ? ಎಷ್ಟು ಅವ್ಯವಹಾರವಾಗಿದೆ? ಈ ದಂಧೆಯಿಂದಾಗಿ ಎಷ್ಟು ಜನ ಅಮಾಯಕರು ಬೆಡ್ ಸಿಗದೆ ಪ್ರಾಣ ಬಿಟ್ಟಿದ್ದಾರೆ? ಎಲ್ಲವೂ ಬಯಲಾಗಬೇಕಿದೆ. ಬಿಬಿಎಂಪಿಯ ಹಲವಾರು ಅಧಿಕಾರಿಗಳು, ಸಿಬ್ಬಂದಿ ಈ ದಂಧೆಯಲ್ಲಿ ಪಾಲ್ಗೊಂಡಿರುವ ಶಂಕೆ ಇದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ