Latest

ಬೇಡ್ತಿ -ಅಘನಾಶಿನಿ – ವರದಾ ನದಿಜೋಡಣೆ ಯೋಜನೆ ಕುರಿತು ಸಮಾಲೋಚನಾ ಕಾರ್ಯಾಗಾರ

ಪ್ರಗತಿವಾಹಿನಿ ಸುದ್ದಿ; ಶಿರಸಿ: ರಾಜ್ಯ ಬಜೆಟ್ಟಿನಲ್ಲಿ ಪ್ರಸ್ತಾಪಿಸಿರುವ “ಬೇಡ್ತಿ, ಅಘನಾಶಿನಿ-ವರದಾ ನದಿ ಜೋಡಣೆ ಯೋಜನೆ”ಗಳ ಕುರಿತು ಮಾರ್ಚ್ 24ರಂದು ಉತ್ತರ ಕನ್ನಡ ಜಿಲ್ಲೆಯ ಶಿರಸಿ ಟಿ.ಆರ್.ಸಿ.ಬ್ಯಾಂಕ್ ಸಭಾಭವನದಲ್ಲಿ ಸಮಾಲೋಚನಾ ಕಾರ್ಯಗಾರ ನಡೆಯಲಿದ್ದು, ಸಾರ್ವಜನಿಕರು ಆಗಮಿಸಿ ತಮ್ಮ ಅಭಿಪ್ರಾಯ ವಿನಿಮಯ ಮಾಡಿಕೊಳ್ಳಲು ಕೋರಲಾಗಿದೆ.

ಶ್ರೀ ಶ್ರೀಮತ್ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳವರ ಆಶಯದಂತೆ ಇದೇ ಬುಧವಾರ ಮುಂಜಾನೆ 10ರಿಂದ ಸಂಜೆ 5 ಗಂಟೆಯವರೆಗೆ ಶಿರಸಿಯ ಹೊಸ ಮಾರುಕಟ್ಟೆ ಬಡಾವಣೆಯಲ್ಲಿರುವ ತೋಟಗಾರರ ಗ್ರಾಮೀಣ ಪತ್ತಿನ ಸಹಕಾರಿ ಸಂಘದ (ಟಿ.ಆರ್.ಸಿ.ಬ್ಯಾಂಕ್) ಸಭಾಭವನದಲ್ಲಿ ವಿಶೇಷ ಸಮಾಲೋಚನಾ ಕಾರ್ಯಾಗಾರ ಆಯೋಜಿಸಲಾಗಿದೆ.

ಬಯಲುಸೀಮೆಯ ಪ್ರದೇಶಗಳಿಗೆ ಕುಡಿಯುವ ನೀರನ್ನು ಪೂರೈಸುವ ಹೆಸರಿನಲ್ಲಿ ಜಾರಿಯಾಗಹೊರಟಿರುವ ಯೋಜನೆಯಿದು. ಜಿಲ್ಲೆಯ ಜೀವನಾಡಿಯಾಗಿರುವ ಬೇಡ್ತಿ, ಶಾಲ್ಮಲಾ ಮತ್ತು ಅಘನಾಶಿನಿ ನದಿಗಳಿಗೆ ಅಲ್ಲಲ್ಲಿ ಅಣೆಕಟ್ಟುಗಳನ್ನು ನಿರ್ಮಿಸಿ, ಅಲ್ಲಿಂದ ನೀರನ್ನು ಪಂಪ್-ಮಾಡಿ ಧರ್ಮಾ ಮತ್ತು ವರದಾ ನದಿಗಳಿಗೆ ಸಾಗಿಸಿ, ಅಲ್ಲಿಂದ ಕಾಲುವೆಗಳಲ್ಲಿ ಬಯಲು ಪ್ರಾಂತ್ಯಕ್ಕೆ ನೀರು ಸಾಗಿಸುವ ಬೃಹತ್ ಯೋಜನೆ ಇದು ಎಂದು ನಂಬಲರ್ಹ ಮೂಲಗಳಿಂದ ದೊರಕಿರುವ ಮಾಹಿತಿ. ಕರ್ನಾಟಕ ಸರಕಾರದ ಈ ವರ್ಷದ ಬಜೆಟ್ಟಿನಲ್ಲಿ ಈ ಯೋಜನೆಯ ವಿಸ್ತೃತವರದಿ ತಯಾರಿಸುವ ಕಾರ್ಯವನ್ನು ಕೇಂದ್ರ ಜಲಶಕ್ತಿ ಇಲಾಖೆಯ NWDA ವಿಭಾಗಕ್ಕೆ ನೀಡಲು ತೀರ್ಮಾನಿಸಿದೆ.

ಈ ಯೋಜನೆಯು ಜಿಲ್ಲೆಯ ರೈತರು, ವನವಾಸಿಗಳು, ಕರಾವಳಿಯ ಮೀನುಗಾರರು- ಹೀಗೆ ಎಲ್ಲರ ಜನಜೀವನದ ಮೇಲೆ ಬೀರಬಹುದಾದ ದುಷ್ಪರಿಣಾಮಗಳನ್ನು ಅರಿಯಬೇಕಿದೆ. ಜೊತೆಗೆ, ಅರಣ್ಯ ಮತ್ತು ಪರಿಸರದ ಮೇಲೆ ಇದರ ದೀರ್ಘಕಾಲೀನ ಪರಿಣಾಮಗಳನ್ನೂ ಅರಿಯಬೇಕಿದೆ. ಆದ್ದರಿಂದ, ಈ ಕುರಿತು ಜನಪ್ರತಿನಿಧಿಗಳು, ಸಾಮಾಜಿಕ ಮುಖಂಡರುಗಳು ಹಾಗೂ ತಜ್ನರ ಅಭಿಪ್ರಾಯ ಕ್ರೋಢೀಕರಿಸುವ ಉದ್ದೇಶದಿಂದ, ಈ ಒಂದು ದಿನದ ಕಾರ್ಯಾಗಾರ ಆಯೋಜಿಸಲಾಗುತ್ತಿದೆ. ಇದರ ಆಧಾರದಲ್ಲಿ ಸರ್ಕಾರಕ್ಕೆ ಸಮಗ್ರವಾದ ಸಾರ್ವಜನಿಕ ಮನವಿಯನ್ನು ಸಲ್ಲಿಸುವ ಉದ್ದೇಶವಿದೆ.

ಈ ನದಿಗಳ ಸುಗಮ ಹರಿವಿನ ಜೊತೆಗೆ ನಮ್ಮೆಲ್ಲರ ಜೀವನದ ಹರಿವು ಬೆಸೆದುಕೊಂಡಿರುವದರಿಂದ, ತಾವು ಈ ಕಾರ್ಯಾಗಾರದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತಮ್ಮ ತಮ್ಮ ಅಭಿಪ್ರಾಯ ಹಾಗೂ ಅನುಭವಗಳನ್ನು ಹಂಚಿಕೊಳ್ಳಬೇಕು ಎಂದು ಬೇಡ್ತಿ ಮತ್ತು ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಮನವಿ ಮಾಡಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button