*ಬೆಳಗಾವಿ ಅಧಿವೇಶನದಲ್ಲಿಯೂ ಪ್ರತಿಧ್ವನಿಸಿದ ಕಾಂಗ್ರೆಸ್ ಆಕ್ರೋಶ: ಅಂಬೇಡ್ಕರ್ ಭಾವಚಿತ್ರ ಪ್ರದರ್ಶಿಸಿ ಅಮಿತ್ ಶಾ ವಿರುದ್ಧ ಸದನದಲ್ಲಿ ಪ್ರತಿಭಟನೆ*
ಪ್ರಗತಿವಾಹಿನಿ ಸುದ್ದಿ: ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ಖಂಡಿಸಿ ಕಾಂಗ್ರೆಸ್ ನಾಯಕರು ಸಂಸತ್ ಭವನದ ಬಳಿ ಪ್ರತಿಭಟನೆ ನಡೆಸುತ್ತಿದ್ದರೆ ಇತ್ತ ಬೆಳಗಾವಿ ಅಧಿವೇಶನದಲ್ಲಿಯೂ ಕೈ ಮುಖಂಡರು ಅಮಿತ್ ಶಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುವರ್ಣಸೌಧದಲ್ಲಿ ಬೆಳಿಗ್ಗೆ ವಿಧಾನಸಭಾ ಕಲಾಪ ಅರಂಭವಾದ ಕೆಲ ಸಮಯದಲ್ಲೇ ಕಾಂಗ್ರೆಸ್ ಸದಸ್ಯರು ಅಮಿತ್ ಶಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸದನದಲ್ಲಿ ಅಂಬೆಡ್ಕರ್ ಭಾವಚಿತ್ರ ಹಿಡಿದು ಅಮಿತ್ ಶಾ ವಿರುದ್ಧ ಧಿಕ್ಕಾರ ಕೂಗಿದರು. ಅಮಿತ್ ಶಾ ಕ್ಷಮೆ ಯಾಚಿಸುವಂತೆ ಆಗ್ರಹಿಸಿದರು. ಕಲಾಪಕ್ಕೆ ಅಡ್ಡಿ ಯುಂಟಾಗುತ್ತಿದ್ದಂತೆ ವಿಧಾನಸಭಾ ಕಲಾಪ ಕೆಲ ಕಾಲ ಉಂದೂಡಿದ ಪ್ರಸಂಗ ನಡೆಯಿತು.
ಬಳಿಕ ವಿಧಾನ ಪರಿಷತ್ ನಲ್ಲಿಯೂ ಕಾಂಗ್ರೆಸ್ ಸದಸ್ಯರು ಅಂಬೇಡ್ಕರ್ ಭಾವಚಿತ್ರ ಪ್ರದರ್ಶಿಸಿ, ಅಮಿತ್ ಶಾ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಬಿಜೆಪಿ ಸದಸ್ಯರೂ ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿದರು. ಕಲಾಪದ ವೇಳೆ ಗದ್ದಲ-ಕೋಲಾಹಲವುಂಟಾಗಿದ್ದು, ಪರಿಷತ್ ಕಲಾಪವನ್ನು ಸಭಾಪತಿ ಹೊರಟ್ಟಿ ಕೆಲ ಕಾಲ ಮುಂದೂಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ