Belagavi NewsBelgaum NewsKarnataka NewsLatest

*ಅಧಿಕಾರಿಗಳ ದಾಳಿ ಬೆನ್ನಲ್ಲೇ ಅಜ್ಞಾತ ಸ್ಥಳದಿಂದ ವಿಡಿಯೋ ಬಿಡುಗಡೆ ಮಾಡಿದ ಆದಿತ್ಯರಾಜ್ ಕ್ಯಾಪಿಟಲ್ ಸಂಸ್ಥೆಯ ಮಾಲೀಕ*

ನಿಮ್ಮ ಹಣ ನಮ್ಮ ಬಳಿ ಸುರಕ್ಷಿತವಾಗಿದೆ; ಸಂಸ್ಥೆ ಕಾನೂನು ಬದ್ಧವಾಗಿದೆ ಎಂದು ಸಮರ್ಥನೆ

Home add -Advt


ಪ್ರಗತಿವಾಹಿನಿ ಸುದ್ದಿ:
ಬಹುಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯ ಆದಿತ್ಯರಾಜ್ ಕ್ಯಾಪಿಟಲ್ ಸಂಸ್ಥೆಯ ಮೇಲೆ ಅಧಿಕಾರಿಗಳು ದಾಳಿ ನಡೆಸುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಸಂಸ್ಥೆಯ ಮಾಲೀಕ ಬಲರಾಮ್ ಮಾನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಬಿಡುಗಡೆ ಮಾಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಮಾತನಾಡಿರುವ ಬಲರಾಮ್ ಮಾನೆ, ನಾವು ಯಾವುದೇ ನಿಯಮಗಳನ್ನು ಗಾಳಿಗೆ ತೂರಿ ಸಂಸ್ಥೆ ನಡೆಸುತ್ತಿಲ್ಲ, ಎಲ್ಲವೂ ಕಾನೂನು ಪ್ರಕಾರವೇ ನಡೆಯುತ್ತಿದೆ. ಠೇವಣಿದಾರರು ಯಾರೂ ಧೈರ್ಯ ಕಳೆದುಕೊಳ್ಳಬಾರದು. ನಿಮ್ಮ ಬೆವರಿನ ಹಣ ನಮ್ಮ ಬಳಿ ಸುರಕ್ಷಿತವಾಗಿದೆ. ನಾವು ಪ್ರತಿಯೊಬ್ಬರಿಗೂ ಟಿಡಿಎಸ್ (TDS) ಕಡಿತಗೊಳಿಸಿದ ನಂತರವೇ ಶೇರಿಂಗ್ ಅಮೌಂಟ್ ನೀಡಿದ್ದೇವೆ ಎಂದು ಹೂಡಿಕೆದಾರರಿಗೆ ಭರವಸೆ ನೀಡಿದ್ದಾನೆ. ಅಲ್ಲದೇ ತನ್ನ ಸಂಸ್ಥೆ ಕಾನೂನುಬದ್ಧವಾಗಿಯೇ ಕಾರ್ಯನಿರ್ವಹಿಸುತ್ತಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

ನಾಳೆ ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿದಾಗ ನಾವು ಖಂಡಿತವಾಗಿ ವಿಜಯ ಸಾಧಿಸುತ್ತೇವೆ. ನಾನು ನಿಮಗಾಗಿಯೇ ಹೋರಾಡುತ್ತಿದ್ದೇನೆ. ಈ ಕಾನೂನು ಸಂಘರ್ಷದಲ್ಲಿ ಗೆದ್ದು ಆದಿತ್ಯರಾಜ್ ಕಂಪನಿ ಮತ್ತೆ ಪುಟಿದೇಳಲಿದೆ. ನಾನು ಶೀಘ್ರದಲ್ಲೇ ಹಿಂತಿರುಗಿ ಬರುತ್ತೇನೆ, ನಾವೆಲ್ಲರೂ ಮತ್ತೆ ಸಿಗೋಣ ಎಂದು ತಿಳಿಸಿದ್ದಾರೆ.

ತಲೆಮರೆಸಿಕೊಂಡಿರುವ ಆರೋಪಿ ಬಲರಾಮ್ ಮಾನೆ ಪತ್ತೆಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಈ ಕುರಿತು ನಿನ್ನೆಯಷ್ಟೇ ಪ್ರತಿಕ್ರಿಯಿಸಿದ್ದ ಬೆಳಗಾವಿ ನಗರ ಪೊಲೀಸ್ ಆಯುಕ್ತ ಭೂಷಣ್ ಜಿ. ಬೊರಸೆ ಅವರು, “ಆರೋಪಿಯ ಬಂಧನಕ್ಕಾಗಿ ಈಗಾಗಲೇ ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದ್ದು, ಶೀಘ್ರದಲ್ಲಿಯೇ ಬಲರಾಮ್ ಮಾನೆಯನ್ನು ಬಂಧಿಸಲಾಗುವುದು ಎಂದು ಹೇಳಿದ್ದರು.

Related Articles

Back to top button