Belagavi NewsBelgaum NewsKarnataka NewsLatestPolitics

*ಮತ್ತೆ 29 ರೂ. ಸಿಲಿಂಡರ್ ಬೆಲೆ ಏರಿಕೆ: ಕೇಂದ್ರ ಸರ್ಕಾರದ ದುಬಾರಿ ನೀತಿಯಿಂದ ಜನಸಾಮಾನ್ಯರು ಸಂಕಷ್ಟಕ್ಕೆ: ಲಕ್ಷ್ಮೀ ಹೆಬ್ಬಾಳಕರ್ ವಾಗ್ದಾಳಿ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ:  ಅಡುಗೆ ಅನಿಲ (LPG) ಸಿಲಿಂಡರ್ ಬೆಲೆಯನ್ನು ಮತ್ತೆ 29 ರೂ. ಹೆಚ್ಚಿಸಿರುವ ಕೇಂದ್ರ ಸರ್ಕಾರದ ನಿರ್ಧಾರ ಖಂಡನೀಯ ಎಂದು ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ಕಳೆದ ಮೂರು ತಿಂಗಳಲ್ಲೇ ಇದು ಎರಡನೇ ಬಾರಿ ಬೆಲೆ ಏರಿಕೆಯಾಗಿದ್ದು, ಮಾರ್ಚ್ ತಿಂಗಳಲ್ಲಿ 60 ರೂ. ಹೆಚ್ಚಿಸಲಾಗಿತ್ತು. ಈಗಿನ 29 ರೂ. ಏರಿಕೆಯೊಂದಿಗೆ ಕೇವಲ ಮೂರು ತಿಂಗಳಲ್ಲಿ ಒಟ್ಟು 89 ರೂ. ಹೆಚ್ಚಳವಾಗಿದೆ. ಒಂದು ಕಡೆ ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರುತ್ತಿದ್ದರೆ, ಮತ್ತೊಂದು ಕಡೆ ಅಡುಗೆ ಅನಿಲದ ಬೆಲೆ ಹೆಚ್ಚಿಸುವ ಮೂಲಕ ಕೇಂದ್ರದ ಬಿಜೆಪಿ ಸರ್ಕಾರ ಮಧ್ಯಮ ವರ್ಗ, ಬಡವರು ಮತ್ತು ಗೃಹಿಣಿಯರ ಮೇಲೆ ಮತ್ತಷ್ಟು ಆರ್ಥಿಕ ಹೊರೆ ಹಾಕಿದೆ ಎಂದು ಗುಡುಗುದ್ದಾರೆ.

Home add -Advt

ಅಡುಗೆ ಮನೆ ಎನ್ನುವುದು ಪ್ರತಿಯೊಂದು ಕುಟುಂಬದ ಜೀವನದ ಕೇಂದ್ರಬಿಂದು. ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯ ನೇರ ಪರಿಣಾಮ ಮಹಿಳೆಯರು ನಿರ್ವಹಿಸುವ ಮನೆಯ ಬಜೆಟ್ ಮೇಲೆ ಬೀಳುತ್ತದೆ. ದಿನನಿತ್ಯದ ಖರ್ಚು ನಿಭಾಯಿಸಲು ಸಾಮಾನ್ಯ ಕುಟುಂಬಗಳು ಪರದಾಡುತ್ತಿರುವ ಸಂದರ್ಭದಲ್ಲಿ ಇಂತಹ ನಿರ್ಧಾರಗಳು ಜನವಿರೋಧಿ ಕ್ರಮಗಳಾಗಿವೆ. ಈಗಾಗಲೇ ಪೆಟ್ರೋಲ್, ಡೀಸೆಲ್ ದರ ಏರಿಕೆಯಿಂದ ಜನರು ತತ್ತರಿಸಿದ್ದಾರೆ.  ಕೆಲ ದಿನಗಳ ಹಿಂದೆ ಕೇಂದ್ರ ಸರ್ಕಾರ ವಾಣಿಜ್ಯ ಸಿಲಿಂಡರ್ ದರವನ್ನು ಏರಿಸಿದೆ. ಪರಿಣಾಮ ಹೋಟೆಲ್ ತಿಂಡಿ, ತಿನಿಸುಗಳು, ಟೀ-ಕಾಫಿ ದರ ಏರಿಕೆಯಾಗಿದೆ. ಈಗ ಅಡುಗೆ ಸಿಲಿಂಡರ್ ದರವನ್ನು ಭಾರೀ ಪ್ರಮಾಣದಲ್ಲಿ ಏರಿಸಲಾಗಿದೆ. ಜನಸಾಮಾನ್ಯರ ಬದುಕು ಏನಾಗಬೇಕು? ಎಂದು ಪ್ರಶ್ನಿಸಿದರು. 

ಈ ಹಿಂದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಿಮ್ಮ ಮಾಂಗಲ್ಯ ಕಸಿಯುತ್ತದೆ ಎಂಬ ಕೀಳು ಮಟ್ಟದ ಹೇಳಿಕೆ ನೀಡಿದ್ದ ಪ್ರಧಾನಿ ಮೋದಿಯವರು ಇಂದು ಜನರ ಬದುಕನ್ನೇ ಕಿತ್ತುಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

2014ರಲ್ಲಿ ಅಡುಗೆ ಅನಿಲದ ಬೆಲೆ ಕೈಗೆಟಕದ ಮಟ್ಟದಲ್ಲಿತ್ತು ಎಂದು ಹೇಳಿ ಅಧಿಕಾರಕ್ಕೆ ಬಂದವರು, ಇಂದು ಸಾಮಾನ್ಯ ಜನರ ಬದುಕನ್ನೇ ದುಬಾರಿಯನ್ನಾಗಿ ಮಾಡಿದ್ದಾರೆ. ಬೆಲೆ ಏರಿಕೆಯನ್ನು ನಿಯಂತ್ರಿಸುವ ಬದಲು ನಿರಂತರವಾಗಿ ಜನರ ಮೇಲೆ ಹೊರೆಯಾಗುವ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ಕೇಂದ್ರ ಸರ್ಕಾರ ತಕ್ಷಣವೇ ಈ ಬೆಲೆ ಏರಿಕೆ ನಿರ್ಧಾರವನ್ನು ಹಿಂಪಡೆದು, ಸಾಮಾನ್ಯ ಕುಟುಂಬಗಳಿಗೆ ಪರಿಹಾರ ಒದಗಿಸಬೇಕು. ಬೆಲೆ ಏರಿಕೆಯಿಂದ ತತ್ತರಿಸಿರುವ ಜನರ ಬದುಕನ್ನು ಇನ್ನಷ್ಟು ಸಂಕಷ್ಟಕ್ಕೆ ತಳ್ಳುವ ಬದಲು, ಅವರ ಹಿತಾಸಕ್ತಿಯನ್ನು ಕಾಪಾಡುವ ನೀತಿಗಳನ್ನು ಜಾರಿಗೆ ತರಬೇಕು ಎಂದು ಲಕ್ಷ್ಮೀ ಹೆಬ್ಬಾಳಕರ್ ಆಗ್ರಹಿಸಿದ್ದಾರೆ.

Related Articles

Back to top button