Karnataka NewsLatestPolitics

*ಹೇಗಿತ್ತು ನೋಡಿ ಸಿಎಂ ಡಿ.ಕೆ.ಶಿವಕುಮಾರ್ ಮೆಟ್ರೋ ಪ್ರಯಾಣ*

ಪ್ರಗತಿವಾಹಿನಿ ಸುದ್ದಿ: ಸಹ ಪ್ರಯಾಣಿಕರೊಂದಿಗೆ ಕುಶಲೋಪರಿ, ಚಿಕ್ಕ ಮಗುವಿಗೆ ಚಾಕಲೇಟ್ ಕೊಟ್ಟು, ಯುವಕ ಯುವತಿಯರೊಂದಿಗೆ ಸೆಲ್ಫಿ… ಇವಿಷ್ಟೂ ಸಿಎಂ ಡಿ.ಕೆ. ಶಿವಕುಮಾರ್ ಅವರು ಭಾನುವಾರ ಮೆಟ್ರೋ ಪ್ರಯಾಣದ ಸುಂದರ ಚಿತ್ರಣ.

ಮುಖ್ಯಮಂತ್ರಿಯಾದ ನಂತರ ಮೊದಲ ಬಾರಿಗೆ ತವರು ಕ್ಷೇತ್ರದ ಜನರ ಭೇಟಿಗೆ ಹೊರಟ ಸಿಎಂ ಡಿ.ಕೆ.ಶಿವಕುಮಾರ್ ಅವರು ಜೀರೋ ಟ್ರಾಫಿಕ್ ನಿಂದ ಸಾರ್ವಜನಿಕರಿಗೆ ತೊಂದರೆಯಾಗುವುದನ್ನು ತಪ್ಪಿಸಲು ವಿಧಾನಸೌಧದಿಂದ ಬಳಿಯಿಂದ ಕನಕಪುರ ರಸ್ತೆವರೆಗೂ ಮೆಟ್ರೋ ಮೂಲಕ ಪ್ರಯಾಣ ಬೆಳೆಸಿದರು.

ಡಾ. ಬಿ.ಆರ್.ಅಂಬೇಡ್ಕರ್ ಮೆಟ್ರೋ ನಿಲ್ದಾಣದಲ್ಲಿ ಕೆಲಹೊತ್ತು ದಿನ ಪತ್ರಿಕೆಗಳ ಮೇಲೆ ಕಣ್ಣಾಡಿಸಿದ ಸಿಎಂ ನಂತರ ಮೆಟ್ರೋ ಪ್ರಯಾಣಿಕರಿಗೆ ಹಸ್ತಲಾಘವ ಮಾಡಿದರು. ಯುವಕ ಯುವತಿಯರು “ನಮ್ಮ ಸಿಎಂ” ಎಂದು ಹುಮ್ಮಸ್ಸಿನಿಂದ ಮಾತನಾಡಿಸಿ ಹಸ್ತಲಾಘವ ಮಾಡಿದರು. ಅನೇಕರು ಮುಖ್ಯಮಂತ್ರಿಗಳ ಜೊತೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.

Home add -Advt

ಮೆಟ್ರೋ ಪ್ರಯಾಣ ಹೇಗನಿಸುತ್ತದೆ ಎಂದು ಸಿಎಂ ಯುವತಿಯೊಬ್ಬರನ್ನು ಕೇಳಿದಾಗ, “ಮೆಟ್ರೋ ರೈಲು ಪ್ರಯಾಣದಿಂದ ಸಾಕಷ್ಟು ಸಮಯ ಉಳಿಯುತ್ತಿದೆ”ಎಂದು ಉತ್ತರಿಸಿದರು. ಇದೇ ವೇಳೆ ಮಗುವಿಗೆ ಚಾಕೊಲೇಟ್ ನೀಡಿ ಅವರ ಫೋಷಕರ ಜೊತೆ ಸೆಲ್ಫಿ ತೆಗೆದುಕೊಂಡರು. ಮಗುವೊಂದು ನನಗೂ ಫೋಟೋ ಕೊಡಿ ಎಂದಾಗ ಸ್ವತಃ ಮುಖ್ಯಮಂತ್ರಿಗಳೇ ಮೊಬೈಲ್ ಪಡೆದುಕೊಂಡು ಸೆಲ್ಫಿ ಕೊಟ್ಟರು.

ಹಿರಿಯ ನಾಗರಿಕರೊಬ್ಬರು ಡಿ.ಕೆ.ಶಿವಕುಮಾರ್ ಅವರನ್ನು ಕೊಂಡೊಡನೆ “ನಿಮ್ಮನ್ನು ಮೆಟ್ರೋ ರೈಲಿನಲ್ಲಿ ನೋಡಿ ತುಂಬಾ ಸಂತೋಷವಾಯಿತು. ಒಳ್ಳೆಯದಾಗಲಿ” ಎಂದು ಹಾರೈಸಿದರು‌.

ವಿದೇಶಿ ಪ್ರವಾಸಿಗರಿಗೆ ಮೆಟ್ರೋ ಪ್ರಯಾಣ ಅನುಭವ ಹೇಗಿದೆ ಎಂದು ಕೇಳಿ ತಿಳಿದುಕೊಂಡರು. ಯುವತಿಯೋರ್ವರಿಗೆ “ಏನು ಓದುತ್ತಿದ್ದೀರಿ? ಎಲ್ಲಿ? ಎಲ್ಲಿ ವಾಸ ಮಾಡುತ್ತಿದ್ದೀರಿ? ಎಂದು ಮಾಹಿತಿ ಪಡೆದು. ಚೆನ್ನಾಗಿ ಓದಬೇಕು. ಭಾರತವನ್ನು ಕರ್ನಾಟಕದ ಮೂಲಕ ನೋಡಲಾಗುತ್ತಿದೆ. ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ವಿಧಾನಸೌಧದ ಮೆಟ್ಟಿಲು ಹತ್ತಿಸಿದ ನನ್ನ ಜನರಿಗೆ ಧನ್ಯವಾದ ತಿಳಿಸುವುದು ನನ್ನ ಕರ್ತವ್ಯ

ಡಾ.ಬಿ.ಆರ್.ಅಂಬೇಡ್ಕರ್ ನಿಲ್ದಾಣದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಿಎಂ ಡಿ.ಕೆ.ಶಿವಕುಮಾರ್ ಅವರು, “ನನ್ನ ಕ್ಷೇತ್ರದ ಜನ ದೊಡ್ಡ‌ಆಲಳ್ಳಿಯಿಂದ ನನ್ನನ್ನು ಇಲ್ಲಿಯವರೆಗೆ ಕರೆತಂದಿದ್ದಾರೆ.‌ ಕ್ಷೇತ್ರದ ಜನರು ನನ್ನನ್ನು ಭೇಟಿಯಾಗಬೇಕು ಎಂದು ಕೇಳುತ್ತಿದ್ದರು. ಅದಕ್ಕೆ ನನ್ನ ಕ್ಷೇತ್ರ, ನನ್ನ ಜನತೆ ಭೇಟಿಯಾಗುತ್ತಿದ್ದೇನೆ” ಎಂದು ಹೇಳಿದರು.

“ನನ್ನ ಕ್ಷೇತ್ರದ ಜನತೆಯ ಸಮಸ್ಯೆ, ಕುಂದುಕೊರತೆಗಳನ್ನು ಆಲಿಸಲು ಪ್ರತ್ಯೇಕ ಅಧಿಕಾರಿಗಳನ್ನು ನೇಮಕ ಮಾಡುತ್ತೇನೆ. ನನ್ನ ಕ್ಷೇತ್ರದ ಜನತೆ ಎಂದೂ ತೊಂದರೆಕೊಟ್ಟವರಲ್ಲ‌. ಅವರವರ ಕೆಲಸ ನೋಡಿಕೊಂಡು ಹೋಗುತ್ತಿದ್ದಾರೆ. ನನ್ನ ಕ್ಷೇತ್ರದ ಜನಕ್ಕೆ ರಾಜಕೀಯ ತಿಳುವಳಿಕೆ, ಪ್ರಜ್ಞೆಯಿದೆ. ನನ್ನಿಂದ ಅಪೇಕ್ಷೆ ಮಾಡದೇ ಹೋದರೂ ನಾನು ಅವರ ಸೇವೆ ಮಾಡಬೇಕಿರುವುದು ನನ್ನ ಕರ್ತವ್ಯ” ಎಂದರು.

“ನನ್ನ ಜನರಿಗೆ ಕೃತಜ್ಞತೆ ಸಲ್ಲಿಸಬೇಕು. ಅವರ ಭಾವನೆ, ಶ್ರಮಕ್ಕೆ ತಕ್ಕ ಫಲ ಸಿಗಬೇಕು. ಸಾತನೂರು ಕ್ಷೇತ್ರ, ದೊಡ್ಡಾಲಹಳ್ಳಿ ಜಿಲ್ಲಾ ಪಂಚಾಯತಿ, ಕನಕಪುರದ ಜನ ನನ್ನ ಭೇಟಿ ಮಾಡಬೇಕು ಎಂದು ಹೇಳುತ್ತಿದ್ದರು. ಅವರಿಗೆ ಸಮಯ ನೀಡುವುದಕ್ಕೆ ಆಗಿರಲಿಲ್ಲ. ಯಾರೂ ಬೆಂಗಳೂರಿಗೆ ಬರಬೇಡಿ ಅಂತ ಮನವಿ ಮಾಡಿದ್ದೆ. ಆದ ಕಾರಣಕ್ಕೆ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದೇನೆ” ಎಂದರು.

“ನನ್ನ ಕ್ಷೇತ್ರದ ಜನ ವಿಧಾನಸೌಧದ ಮೆಟ್ಟಿಲು ಹತ್ತಿಸಿದ್ದಾರೆ.‌ಕಳೆದ 40 ವರ್ಷಗಳಿಂದ ಬೆಳೆಸಿದ್ದಾರೆ‌ ಮೊದಲು ಅವರಿಗೆ ಕೃತಜ್ಞತೆ ಸಲ್ಲಿಸಬೇಕಾಗಿರೋದು ನನ್ನ‌ ಕರ್ತವ್ಯ. ಅದಕ್ಕೆ ಎಲ್ಲಾ ಕೆಲಸ ಮುಗಿಸಿ ಜನರ ಭೇಟಿಗೆ ಹೋಗುತ್ತಿದ್ದೇನೆ” ಎಂದು ಹೇಳಿದರು.

ಗ್ಯಾಸ್, ಡೀಸೆಲ್‌ ಬೆಲೆ ಏರಿಕೆ ಗಾಬರಿಯಾಗುತ್ತದೆ

ಗೃಹ ಬಳಕೆಯ ಸಿಲಿಂಡರ್ ದರ ಏರಿಕೆ ವಿಚಾರ ಕೇಳಿದಾಗ, “ಅದಕ್ಕೆ ಪ್ರತ್ಯೇಕ ವರದಿ ಕೇಳಿದ್ದೇನೆ. ಇದಕ್ಕಿಂತ ಇಂಡಸ್ಟ್ರಿಯಲ್ ಗ್ಯಾಸ್ ಬೆಲೆ, ಡೀಸೆಲ್ ಬೆಲೆ ಏರಿಕೆ ಗಾಬರಿ ಆಗುವಂತೆ ಏರಿಕೆ ಮಾಡಿದ್ದಾರೆ. ವರದಿ ತೆಗೆದುಕೊಳ್ಳುತ್ತಿದ್ದೇನೆ. ಸೋಮವಾರದಂದು ಇದರ ಬಗ್ಗೆ ಮಾತನಾಡುತ್ತೇನೆ” ಎಂದರು.

Related Articles

Back to top button