*ಸ್ಮಾರ್ಟ್ ಸಿಟಿ ಕಳಪೆ ಕಾಮಗಾರಿ ವಿರುದ್ಧ ಸಿಡಿದೆದ್ದ ಬೆಳಗಾವಿ ಜನ*
ಇನ್ನೂ ‘ಸ್ಮಾರ್ಟ್’ ಆಗದ ಅಧಿಕಾರಿಗಳು ಹಾಗೂ ಬಿಜೆಪಿ ಶಾಸಕ ಅಭಯ್ ಪಾಟೀಲ ವಿರುದ್ಧ ಗುಡುಗಿದ ಸಾರ್ವಜನಿಕರು; ಶೀಘ್ರವೇ ತಪ್ಪಿತಸ್ಥರ ವಿರುದ್ಧ ಕ್ರಮ ಎಂದ ಸಚಿವ ಸತೀಶ್ ಜಾರಕಿಹೊಳಿ
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ರಾಜ್ಯದ ಪ್ರಮುಖ ನಗರಗಳಲ್ಲಿ ಒಂದಾದ ಕುಂದಾನಗರಿ ಬೆಳಗಾವಿಯಲ್ಲಿ ಸ್ಮಾರ್ಟ್ ಸಿಟಿ ಕಳಪೆ ಕಾಮಗಾರಿ ಹಾಗೂ ಅವ್ಯವಹಾರ ಮಾಡಿರುವುದನ್ನು ಖಂಡಿಸಿ ಬೆಳಗಾವಿ ನಾಗರಿಕರ ಹಿತರಕ್ಷಣಾ ಒಕ್ಕೂಟ ವತಿಯಿಂದ ಛತ್ರಪತಿ ಶಿವಾಜಿ ಗಾರ್ಡನ್ ಹತ್ತಿರ ಪ್ರತಿಭಟನೆ ನಡೆಸಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿದರು.
ಇದಕ್ಕೂ ಮೊದಲು ಮಹಿಳೆಯರು ಬುಟ್ಟಿಯಲ್ಲಿ ಮಣ್ಣು ಹಾಗೂ ಜೆಲ್ಲಿ ಕಲ್ಲುಗಳನ್ನು ತುಂಬಿಕೊಂಡು ಬಿಜೆಪಿ ಶಾಸಕ ಅಭಯ ಪಾಟೀಲ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಪ್ರತಿಭಟನೆಯಲ್ಲಿ ಸಮಾಜ ಸೇವಕ ಸುಜೀತ್ ಮುಳಗುಂದ ಮಾತನಾಡಿ, ಶಹಾಪುರ ಬ್ಯಾಂಕ್ ಆಫ್ ಇಂಡಿಯಾದಿಂದ ಹಳೆ ಪಿ.ಬಿ.ರಸ್ತೆಯವರೆಗೆ ರಸ್ತೆ ಅಗಲೀಕರಣದಲ್ಲಿ ಅಮಾಯಕ ಜನರ ಮನೆಗಳನ್ನು ನೆಲಸಮ ಮಾಡಿದ್ದಾರೆ. ಈ ರಸ್ತೆ ಸಂಪೂರ್ಣ ಅವೈಜ್ಞಾನಿಕವಾಗಿದ್ದು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಉನ್ನತಮಟ್ಟದ ತನಿಖೆ ನಡೆಸಿ ಕ್ರಮಕೈಗೊಳ್ಳಬೇಕು ಮುಖ್ಯವಾಗಿ ಶಹಾಪುರ ಬ್ಯಾಂಕ್ ಆಫ್ ಇಂಡಿಯಾದಿಂದ ಹಳೆ ಪಿ.ಬಿ.ರಸ್ತೆ ಅಗಲೀಕರಣವನ್ನು ಬೆಳಗಾವಿ ಸ್ಮಾರ್ಟ್ ಸಿಟಿ ಅಧಿಕಾರಿಗಳು ಸ್ಥಳೀಯ ಶಾಸಕ ಅಭಯ ಪಾಟೀಲ ಮಾತುಕೇಳಿ ತಮಗೆ ಅನುಕೂಲವಾಗುವ ರೀತಿಯಲ್ಲಿ ರಸ್ತೆ ಮಾಡಿಸಿದ್ದಾರೆ. ಶಹಾಪುರ ಬ್ಯಾಂಕ್ ಆಫ್ ಇಂಡಿಯಾದಿಂದ ಹೇಳಿ ಪಿ.ಬಿ.ರಸ್ತೆಯವರೆಗೆ ರಸ್ತೆ ಅಗಲೀಕರಣ ಸರಿಯಾಗಿಲ್ಲ. ಮನೆ ಕಳೆದುಕೊಂಡು ಜನರು ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು. ನ್ಯಾಯಾಲಯ ಸ್ಮಾರ್ಟ್ ಸಿಟಿಯಿಂದ ಸಂತ್ರಸ್ತರಿಗೆ ಪರಿಹಾರ ಕೊಡುವಂತೆ ಸೂಚನೆ ನೀಡಿದೆ. ಅಲ್ಲದೆ, ನ್ಯಾಯಾಲಯದ ತೀರ್ಪು ಬಂದಮೇಲೂ ಅಕ್ರಮವಾಗಿ ಬುಡಾ ಆಯುಕ್ತರು ರಸ್ತೆ ಅಗಲೀಕರಣ ಮಾಡಲು ಅನುಕೂಲ ಮಾಡಿಕೊಟ್ಟಿದ್ದಾರೆ, ಈ ಕಾಮಗಾರಿಯಲ್ಲಿ ಸಾರ್ವಜನಿಕರ ತೆರಿಗೆ ಹಣವನ್ನು ಪೋಲು ಮಾಡಿದ ಅಧಿಕಾರಿಗಳಿಂದಲೇ ಈ ನಷ್ಟದ ಪರಿಹಾರವನ್ನು ಕೂಡಿಸಬೇಕು ಎಂದು ಒತ್ತಾಯಿಸಿದರು.
ಸ್ಮಾರ್ಟ್ ಸಿಟಿಯ ಕಾಮಗಾರಿಗಳೂ ಸಂಪೂರ್ಣ ಅವೈಜ್ಞಾನಿಕವಾಗಿವೆ. ಶಹಾಪುರ ಬ್ಯಾಂಕ್ ಆಫ್ ಇಂಡಿಯಾದಿಂದ ಹಳ ಪಿ.ಬಿ.ರಸ್ತೆಯವರೆಗೆ ಮಾಡಿರುವ ಈ ರಸ್ತೆ ಸಾರ್ವಜನಿಕರ ಪ್ರಯಾಣಕ್ಕೆ ಅನುಕೂಲವಾಗಿಲ್ಲ. ಕೂಡಲೇ ಈ ರಸ್ತೆಯನ್ನು ವೈಜ್ಞಾನಿಕವಾಗಿ ಸರಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು. ಪಿಎಂಸಿ ಟ್ರ್ಯಾಕ್ ಟೆಬಲ್ ಇಂಡಿಯಾ ಸಾಮಾಜಿಕ ಪ್ರಭಾರದ ಮೌಲ್ಯಮಾಪನ ವರದಿ ನೀಡುವುದು ಜವಾಬ್ದಾರಿ ಇರುತ್ತದೆ. ಅದನ್ನು ಏಕೆ ಮಾಡಲಿಲ್ಲ. ಸ್ಮಾರ್ಟ್ ಸಿಟಿ ಅಧಿಕಾರಿಗಳು, ಪಿಎಂಸಿ ಟಾಕ್ ಟೆಬಲ್ ಇಂಡಿಯಾ, ಕೆಯುಐಡಿಎಫ್ ಸಿ ಅಧಿಕಾರಿಗಳು ವಿರುದ್ಧ ತನಿಖೆ ನಡೆಸಿ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಮುಖ್ಯವಾಗಿ ಸ್ಮಾರ್ಟ್ ಸಿಟಿ ಯೋಜನೆಯಿಂದ ಬಿಡುಗಡೆಯಾದ ಅನುದಾನ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿಡಬೇಕು, ಆದರೆ ರತ್ನಾಕರ್ ಬ್ಯಾಂಕ್ ಲಿಮಿಟೆಡ್ ನಲ್ಲಿ ಇಡಲಾಗಿದೆ. ಕಾರಣ ಎನಿದೆ ಎಂಬುವುದು ನಿಗೂಡವಾಗಿದೆ. ಅಲ್ಲದೇ ಅದರ ಬಡ್ಡಿ ಎಲ್ಲಿ ಹೋಯಿತು ಎಂಬುದರ ಕುರಿತು ಸಮಗ್ರ ತನಿಖೆ ನಡೆಸಬೇಕು. ಒಟ್ಟಾರೆಯಾಗಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಸ್ಮಾರ್ಟ್ ಸಿಟಿಯ ಕಾಮಗಾರಿಗಳು ಗುಣಮಟ್ಟ ಇಲ್ಲ. ರಸ್ತೆ ಕಾಮಗಾರಿಗಳು ಅವೈಜ್ಞಾನಿಕ ಹಾಗೂ ಕಳಪೆ ಮಟ್ಟದಿಂದ ಕೂಡಿದ್ದು, ಶೀಘ್ರವೇ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಆಮ್ ಆದ್ಮಿ ಪಕ್ಷದ ಮುಖಂಡ ರಾಜೀವ ಟೋಪಣ್ಣವರ ಮಾತನಾಡಿ, ಕಾಂಗ್ರೆಸ್ ರಸ್ತೆ ಸೇರಿದಂತೆ ಕೆಲವು ಕಡೆಗೆ ಮಳೆ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ. ಸ್ಮಾರ್ಟ್ ಸಿಟಿ ಕ್ರಿಯಾ ಯೋಜನೆ ಸಿದ್ಧಪಡಿಸುವ ಮೊದಲಿಗೆ ರಾಜ ಕಾಲುವೆ ಮತ್ತು ಪ್ರಾಥಮಿಕ ಕಾಲುವೆಗಳ ಅಭಿವೃದ್ಧಿಗಾಗಿ ಯೋಜನೆ ರೂಪಿಸಲಾಗಿತ್ತು. ಆದರೆ ಈಗ ಕಾಲುವೆಗಳ ಅಭಿವೃದ್ಧಿ ಮಾಡಿಲ್ಲ. ಹೀಗಾಗಿ ಮಳೆಯಾಗಿ ರಸ್ತೆ ಮೇಲೆ ನೀರು ಹರಿದು ಹೋಗುತ್ತಿದೆ ಎಂದು ಆರೋಪಿಸಿದರು.
ಬಿರುಕು ಬಿಟ್ಟ ರಸ್ತೆಗಳು:
ಮೂಲ ಗುತ್ತಿಗೆದಾರರು ಇಲ್ಲದೇ ಬಹುತೇಕ ಕಾಮಗಾರಿಗಳನ್ನು ಉಪ ಗುತ್ತಿಗೆದಾರರೇ ಮಾಡುತ್ತಿದ್ದಾರೆ. ಇದರಿಂದ ಕೆಲವು ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ಸಾಧ್ಯವಾಗುತ್ತಿಲ್ಲ. ಕೆಲವು ರಸ್ತೆಗಳು ಕಳಪೆ ಮಟ್ಟದ್ದಾಗಿವೆ. ಸಿಮೆಂಟ್ ರಸ್ತೆ ಎಂದರೆ ಸುಮಾರು 20 ವರ್ಷ ಬಾಳಿಕೆ ಬರಬೇಕು. ಆದರೆ ಒಂದೆರಡು ರಸ್ತೆಗಳು ಈಗಲೇ ಬಿರುಕು ಬಿಡುತ್ತಿವೆ. ಕಾಂಗ್ರೆಸ್ ರಸ್ತೆ, ಕೆಪಿಟಿಸಿಎಲ್ ರಸ್ತೆ, ಕೊಲ್ಲಾಪುರ ರಸ್ತೆಗಳಲ್ಲಿ ಮಳೆಗಾಲದ ವೇಳೆ ತಗ್ಗು ಬೀಳುತ್ತಿವೆ ಎಂದು ಜನ ದೂರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಪ್ರತಿಭಟನೆಯಲ್ಲಿ ಕೆಪಿಸಿಸಿ ಕಾರ್ಯದರ್ಶಿ ಸುನೀಲ್ ಹಣಮನ್ನವರ್, ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಗ್ರಾಮೀಣ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯ ಪ್ರದೀಪ್ ಎಂ.ಜೆ., ಅಜೀಂ ಪಟೇಗಾರ್, ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ರಮಾಕಾಂತ ಕುಂಡೂಸ್ಕರ್, ಪ್ರತಿಭಾ ಪಾಟೀಲ್, ಆಯಿಶಾ ಸನದಿ, ಎನ್.ಆರ್.ಲಾತೂರ್, ಪರಶುರಾಮ ಡಗೆ, ರಾಜನ್ ಹುಲಬತೆ, ರಾಘವೇಂದ್ರ ಲೋಕರಿ, ರಮೇಶ ಸೋಂಟಕ್ಕಿ, ಸರಳಾ ಸಾತ್ಪುತೆ, ಶುಭಂ ಸೆಳಕೆ, ದೀಪಕ ಜಮಖಂಡಿ, ಸರೀತಾ ಪಾಟೀಲ, ರೇಣು ಕಿಲ್ಲೇಕರ, ಕಿರಣ ಗಾವಡೆ, ಸಂಜಯ ಶಿಂಧೆ, ಸಂತೋಷ ಕಾಂಬಳೆ, ಫೈಯಾಜ್ ಸೌಧಾಗರ, ಮಜಹರ ಮುಲ್ಲಾ, ರಾಕೇಶ ತಳವಾರ, ವಿಠ್ಠಲ್ ಯಳ್ಳೂರಕರ, ಸಲೀಂ ಕಾಶಿಂನವರ, ಬಸವರಾಜ ಶಿಗಾವಿ, ರವಿ ಸಾಳುಂಕೆ, ಕುರ್ಷಿದ ಮುಲ್ಲಾ, ಕಸ್ತೂರಿ ಕೋಲ್ಕಾರ, ಕುಶಪ್ಪ ತಳವಾರ, ಶ್ರೀನಿವಾಸ ತಾಳೂಕರ ಸೇರಿದಂತೆ ಸಾವಿರಾರು ಸಾರ್ವಜನಿಕರು ಭಾಗವಹಿಸಿದ್ದರು.
ತಪ್ಪಿತಸ್ಥರ ವಿರುದ್ಧ ಕ್ರಮ: ಬೆಳಗಾವಿ ನಾಗರಿಕರ ಹಿತರಕ್ಷಣಾ ಒಕ್ಕೂಟ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಿದ್ದು, ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ವಿವಿಧ ಕಾಮಗಾರಿಗಳಲ್ಲಿ ಅವ್ಯವಹಾರ ನಡೆದ ಬಗ್ಗೆ ಹಾಗೂ ಬುಡಾದಲ್ಲಿ ನಡೆದ ಅವ್ಯವಹಾರದ ಬಗ್ಗೆ ನಮ್ಮ ಗಮನಕ್ಕೆ ತಂದಿದ್ದಾರೆ. ಈ ಕುರಿತು ಶೀಘ್ರವೇ ತನಿಖೆ ನಡೆಸಲಾಗುವುದು. ಅಲ್ಲದೇ ಬಿಜೆಪಿ ಶಾಸಕ ಅಭಯ ಪಾಟೀಲ್ ವಿರುದ್ಧ ಸಾರ್ವಜನಿಕರು ದೂರು ನೀಡಿದ್ದಾರೆ, ಈ ಕುರಿತು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ, ತನಿಖೆ ಆದ ಬಳಿಕ ಶೀಘ್ರವೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಸತೀಶ್ ಜಾರಕಿಹೊಳಿ ಭರವಸೆ ನೀಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ