Latest

VTU: ಮೂವರಿಗೆ ಡಾಕ್ಟರೇಟ್ ಗೌರವ, 10 ವಿದ್ಯಾರ್ಥಿಗಳಿಗೆ ಚಿನ್ನದ ಪದಕ; 16 ಪದಕ ಪಡೆದ ಚಿನ್ನದ ಹುಡುಗಿ ಯಾರು?

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 21ನೇ ಘಟಿಕೋತ್ಸವವನ್ನು ವಿಟಿಯು ಜ್ಞಾನ ಸಂಗಮ ಆವರಣದ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಸಭಾಂಗಣದಲ್ಲಿ ಆಯೋಜಿಸಲಾಗಿದ್ದು, ಮೂವರಿಗೆ ಡಾಕ್ಟರ್ ಆಫ್ ಸೈನ್ಸ್ ಗೌರವ ಪ್ರದಾನ ಮಾಡಲಾಗುವುದು ಮತ್ತು ವಿವಿಧ ಜಿಲ್ಲೆಯ ಒಟ್ಟು 334 ವಿದ್ಯಾರ್ಥಿಗಳು ರ್ಯಾಂಕ್ ಪಡೆದಿದ್ದು, ಅದರಲ್ಲಿ ಹತ್ತು ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರದಾನ ಮಾಡಲಾಗುವುದು ಎಂದು ಕುಲಪತಿ ಪ್ರೊ.ಕರಿಸಿದ್ದಪ್ಪ ತಿಳಿಸಿದರು.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 21ನೇ ಘಟಿಕೋತ್ಸವದ ಕುರಿತು ವಿ.ಟಿ.ಯು ಸಭಾಂಗಣದಲ್ಲಿ ಶನಿವಾರ (ಮಾ.5) ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ 21 ನೇ ಘಟಿಕೋತ್ಸವದಲ್ಲಿ ಗೌರವಾನ್ವಿತ ರಾಜ್ಯಪಾಲರು, ವಿಶ್ವವಿದ್ಯಾಲಯಗಳ ಕುಲಾಧಿಪತಿಗಳಾದ ಥಾವರಚಂದ್ ಗೆಹ್ಲೋಟ್ ಅವರು ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಲೋಕಸಭೆ ಸಭಾಪತಿಗಳಾದ ಓಂ ಬಿರ್ಲಾ ಅವರು ಘಟಿಕೋತ್ಸವದ ಭಾಷಣ ಮಾಡಲಿದ್ದಾರೆ. ಉನ್ನತ ಶಿಕ್ಷಣ ಇಲಾಖೆ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವರು ಮತ್ತು ಸಮಕುಲಾಧಿಪತಿಗಳಾದ ಡಾ.ಸಿ.ಎನ್.ಅಶ್ವತ್ ನಾರಾಯಣ್ ಅವರು ಉಪಸ್ಥಿತರಿರುವರು ಎಂದು ತಿಳಿಸಿದರು.

ಮೂವರಿಗೆ ಡಾಕ್ಟರ್ ಆಪ್ ಸೈನ್ಸ್ ಗೌರವ :
ಈ ಸಂದರ್ಭದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಅತ್ಯುನ್ನತ ಸೇವೆ ಸಲ್ಲಿಸಿದ ಮೂವರು ಮಹನೀಯರಿಗೆ “ಡಾಕ್ಟರ್ ಆಪ್ ಸೈನ್ಸ್” ಗೌರವ ಪದವಿ, ಪ್ರಧಾನ ಮಾಡಲಾಗುವುದು.

ಪದ್ಮ ಭೂಷಣ ಪುರಸ್ಕೃತರು, ಬೆಂಗಳೂರಿನ ಅಕ್ಸಿಲೊರ್ ವೆಂಚರ್ಸನ ಅಧ್ಯಕ್ಷರು, ಇನ್ಫೋಸಿಸ್ ನ ಸಹ-ಸಂಸ್ಥಾಪಕರಾದ ಸೇನಾಪತಿ ಕ್ರಿಶ್ ಗೋಪಾಲಕೃಷ್ಣನ್, ಪದ್ಮ ಭೂಷಣ ಪುರಸ್ಕೃತರಾದ, ಹೈದರಾಬಾದಿನ ಭಾರತ ಬಯೋಟೆಕ್ ಅಂ. ಲಿ. ನ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಕೃಷ್ಣ ಎಲ್ಲಾ ಹಾಗೂ ಪದ್ಮಶ್ರೀ ಪುರಸ್ಕೃತರಾದ, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ, ಹೈ ಎನರ್ಜಿ ಭೌತಿಕ ವಿಜ್ಞಾನ ವಿಭಾಗದ ಪ್ರಾಧ್ಯಾಪಕರಾದ ಪ್ರೋ.ರೋಹಿಣಿ ಗೊಡಬೋಲೆ ಅವರು ಡಾಕ್ಟರ್ ಆಪ್ ಸೈನ್ಸ್ ಗೌರವ, ಪದವಿಯನ್ನು ನೀಡಲಾಗುವುದು.

ಹತ್ತು ವಿದ್ಯಾರ್ಥಿಗಳಿಗೆ ಚಿನ್ನದ ಪದಕ :
ರಾಯಚೂರು ಎಸ್ ಎಲ್ ಎನ್ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿನಿ ಬುಷ್ರಾ ಮತೀನ್ ಒಟ್ಟು ೧೬ ಚಿನ್ನದ ಪದಕ ಪಡೆಯುವ ಮೂಲಕ ಅತೀ ಹೆಚ್ಚು ಚಿನ್ನದ ಪದಕ ಪಡೆದ ವಿದ್ಯಾರ್ಥಿಯಾಗಿದ್ದಾಳೆ. ಬೆಂಗಳೂರಿನ ಬಿ.ಎನ್.ಎಮ್. ಇನ್‌ಸ್ಟಿಟ್ಯೂಟ್ ಆಪ್ ಟೆಕ್ನಾಲಜಿಯ ಎಲೆಟ್ರಿಕಲ್ ಆ್ಯಂಡ್ ಕಮ್ಯೂನಿಕೇಶನ್ ಇಂಜಿನಿಯರಿಂಗ್ ವಿದ್ಯಾರ್ಥಿ ಸ್ವಾತಿ ದಯಾನಂದ ಏಳು ಚಿನ್ನದ ಪದಕ ಪಡೆದಿದ್ದಾರೆ.

ಕೆ.ಎಲ್.ಇ ಶೇಷಗಿರಿ ಕಾಲೇಜಿನ ವಿವೇಕ ಭದ್ರಕಾಳಿ ಏಳು ಚಿನ್ನದ ಪದಕ, ಬಳ್ಳಾರಿಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮ್ಯಾನೇಜ್ಮೆಂಟ್ ನ ವಿಧ್ಯಾರ್ಥಿನಿ ಚಂದನಾ ಎಂ. ಏಳು ಚಿನ್ನದ ಪದಕ, ಬೆಂಗಳೂರಿನ ಸಿ.ಎಂ.ಆರ್. ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕೊಂದಲ ಹಳ್ಳಿಯ ವಿಧ್ಯಾರ್ಥಿನಿ ರಮ್ಯಾ ಟಿ. ಆರು ಚಿನ್ನದ ಪದಕ, ಬೆಂಗಳೂರಿನ ಆರ್ ಎನ್ ಎಸ್ ನಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿಧ್ಯಾರ್ಥಿನಿ ಪ್ರಜ್ಞಾ ಎನ್. ನಾಲ್ಕು ಚಿನ್ನದ ಪದಕ, ಶಿವಮೊಗ್ಗದ ಜೆ.ಎನ್.ಎನ್. ಸಿ.ಇ ವಿಧ್ಯಾರ್ಥಿನಿ ಪಲ್ಲವಿ ಪಿ. ನಾಲ್ಕು ಚಿನ್ನದ ಪದಕ, ಬೆಂಗಳೂರಿನ ಆರ್ ಎನ್ ಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿಧ್ಯಾರ್ಥಿನಿ ತೇಜಸ್ವಿನಿ ಆರ್ ನಾಲ್ಕು ಚಿನ್ನದ ಪದಕ ಹಾಗೂ ಅಶ್ವಿತಾ ಎನ್. ಮೂರು ಚಿನ್ನದ ಪದಕ ಮತ್ತು ದಾವಣಗೆರೆಯ ಯು.ಬಿ.ಡಿ.ಟಿ ಕಾಲೇಜಿನ ವಿದ್ಯಾರ್ಥಿನಿ ಸವಿತಾ ಎಚ್. ಟಿ. ಮೂರು ಚಿನ್ನದ ಪದಕ ಪಡೆದಿದ್ದಾರೆ.

ಸಂಶೋಧನಾ ಅಧ್ಯಯನ ಮುಗಿಸಿದ ಸಂಶೋಧನಾರ್ಥಿಗಳಿಗೆ 515+ ಪಿಎಚ್ ಡಿ, 4ಎಂಎಸ್ಸಿ (ಎಂಜಿನಿಯರಿಂಗ್) ಬೈ ರಿಸರ್ಚ್ ಮತ್ತು 3 ಇಂಟಿಗ್ರೇಟೆಡ್ ಡುಯಲ್ ಪದವಿ ಪ್ರಧಾನ ಮಾಡಲಾಗುವುದು ಎಂದು ಅವರು ತಿಳಿಸಿದರು.

ವಿಶ್ವವಿದ್ಯಾಲಯ 21 ನೇ ಘಟಿಕೋತ್ಸವದಲ್ಲಿ 57,498 ಬಿಇ/ಬಿಟೆಕ್ ಪದವಿ, 902ಬಿ.ಆರ್ಚ್ ಪದವಿ, 12 ಬಿ.ಪ್ಲೇನ್ ಪದವಿ , 4362 ಎಂಬಿಎ ಪದವಿ, 1387 ಎಂಟೆಕ್ ಹಾಗೂ 33 ಪಿಜಿ ಡಿಪ್ಲೋಮಾ ಪದವಿಯನ್ನು ಪ್ರಧಾನ ಮಾಡಲಾಗುತ್ತಿದೆ.

ಘಟಕೋತ್ಸವಕೆ ಆಗಮಿಸುವ ವಿದ್ಯಾರ್ಥಿಗಳು, ಪಾಲಕರು ಹಾಗೂ ಆಹ್ವಾನಿತರಿಗೆ ಸಾರಿಗೆ ಇಲಾಖೆಯಿಂದ ಬಸ್ ಗಳ ವ್ಯವಸ್ಥೆ ಮಾಡಲಾಗಿದ್ದು, ವಿಶ್ವ ವಿದ್ಯಾಲಯದಲ್ಲಿ ಇತರೆ ವ್ಯವಸ್ಥೆ ಕಲ್ಪಿಸಲು ಇಬ್ಬರು ಕೊ-ಆರ್ಡಿನೆಟರ್ ನೇಮಕ ಮಾಡಲಾಗಿದೆ.

2022-23 ನೇ ವರ್ಷದಿಂದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಿ.ಟಿ.ಯು ಅಳವಡಿಕೊಂಡಿದ್ದು, ಇಂಜಿನಿಯರಿಂಗ್ ನ ತಾಂತ್ರಿಕ ಲೋಕದಲ್ಲಿ ಮುಂದಿನ ಜೀವನಕ್ಕೆ ಉಪಯುಕ್ತವಾಗುವ ರೀತಿ ದೊಡ್ಡ ಪ್ತಮಾಣದ ಕೈಗಾರಿಕೆಯಲ್ಲಿ ವರ್ಕ್ ಮಾಡುವವರನ್ನು ವಿ.ಟಿ.ಯು ಬೋರ್ಡನಲ್ಲಿ ಸೇರಿಸಿಕೊಂಡು, ವೃತ್ತಿಪರ ಕೌಶಲ್ಯವನ್ನು ಬೇಳಸುವ ಕಾರ್ಯ ಮಾಡುತ್ತಿದ್ದೆವೆ ಎಂದು ಕುಲಪತಿ ಪ್ರೊ.ಕರಿಸಿದ್ದಪ್ಪ ಅವರು ತಿಳಿಸಿದರು

ಸುದ್ದಿಗೋಷ್ಟಿಯಲ್ಲಿ ಕುಲಸಚಿವರಾದ ಪ್ರೊ. ಆನಂದ ದೇಶಪಾಂಡೆ ಹಾಗೂ ಮೌಲ್ಯಮಾಪನ ಕುಲಸಚಿವರಾದ ಪ್ರೊ. ಬಿ. ಈ ರಂಗಸ್ವಾಮಿ ಅವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಬೆಳಗಾವಿಯಲ್ಲಿ ಕಾಲೇಜ್ ಬಳಿ ಗಾಂಜಾ ಮಾರುತ್ತಿದ್ದ ವ್ಯಕ್ತಿ ಬಂಧನ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button