ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ: ಯಕ್ಸಂಬಾದಲ್ಲಿ, ಪ್ರತಿ ಜಿಲ್ಲೆಯಲ್ಲಿ ಮಕ್ಕಳಿಗಾಗಿ ಕೋವಿಡ್ ಕೇರ್ ಸೆಂಟರ್ ಆರಂಭಿಸುವ ಕುರಿತು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು, ಡಿ.ಸಿ.ಪಿ.ಓ ಹಾಗೂ ಸಿ.ಡಿ.ಪಿ.ಓ ಗಳೊಂದಿಗೆ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಶಶಿಕಲಾ ಜೊಲ್ಲೆ ಪೂರ್ವಭಾವಿ ಸಭೆ ನಡೆಸಿ, ಹಲವು ವಿಚಾರಗಳ ಕುರಿತು ಚರ್ಚಿಸಿ, ಸಮಾಲೋಚನೆ ನಡೆಸಿದರು.
ಕೊರೋನಾ ಮೂರನೇ ಅಲೆ ಮಕ್ಕಳಿಗೆ ತಗಲುವ ಕುರಿತು ತಜ್ಞರು ಸಲಹೆ ನೀಡಿದ ಮೇರೆಗೆ ಮಕ್ಕಳಿಗಾಗಿ ಪ್ರತಿ ಜಿಲ್ಲೆಯಲ್ಲಿ ಪ್ರತ್ಯೇಕ ಕೋವಿಡ್ ಕೇರ್ ಸೆಂಟರ್ ತೆರೆಯಲು ನಿರ್ಧರಿಸಲಾಗಿದೆ. ಈ ಸಲುವಾಗಿ ಇಲ್ಲಿಯವರೆಗೆ ಮಕ್ಕಳಲ್ಲಿ ಕಂಡುಬಂದ ಕೋವಿಡ್ ಪಾಸಿಟಿವ್ ಕೇಸ್, ಕೊರೋನಾದಿಂದ ಬಾಧಿತರಾದ ಮಕ್ಕಳ ಬಗ್ಗೆ ಮಾಹಿತಿ ಪಡೆದು, ಸಮಾಲೋಚಿಸಿದರು.
ಕಡಿಮೆ ರೋಗ ಲಕ್ಷಣ ಹಾಗೂ ಸೋಂಕು ಬಾಧಿತ ಮಕ್ಕಳಿಗೆ ಕೋವಿಡ್ ಕೇರ್ ಸೆಂಟರ್ ನಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಿ, ಚಿಕಿತ್ಸೆ ನೀಡಲಾಗುವುದು. ತುರ್ತಾಗಿ ಬೆಳಗಾವಿಯಲ್ಲಿ ಮಕ್ಕಳಿಗೆ ಕೋವಿಡ್ ಕೇರ್ ಸೆಂಟರ್ ತೆರೆಯಲು ಚಿಂತನೆ ನಡೆಸಲಾಗಿದೆ. ಚಿಕ್ಕೋಡಿ ಭಾಗದ ಮಕ್ಕಳಿಗೆ ಅನುಕೂಲವಾಗಲು ಜೊಲ್ಲೆ ಉದ್ಯೋಗ ಸಮೂಹ ಸಂಸ್ಥೆಯಲ್ಲಿ ಕೋವಿಡ್ ಕೇರ್ ಸೆಂಟರ್ ಪ್ರಾರಂಭಿಸಲಾಗುವುದು. ಈಗಾಗಲೇ ಮಕ್ಕಳಿಗಾಗಿ ಕೋವಿಡ್ ಕೇರ್ ಸೆಂಟರ್ ತೆರೆಯಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದು, ಅದರಂತೆ ಅವರು ಸರ್ವೇ ನಡೆಸಿ, ನಮಗೆ ಮಾಹಿತಿ ನೀಡಿದ್ದಾರೆ. ಅದನ್ನು ಅಂತಿಮ ಮಾಡಿ, ಯಾವ ಸ್ಥಳದಲ್ಲಿ ಮಾಡಿದರೆ ಸೂಕ್ತ ಅನ್ನೋದನ್ನು ಶೀಘ್ರದಲ್ಲಿ ನಿರ್ಧರಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಶ್ರೀ ಬಸವರಾಜ ವರವಟ್ಟಿ, ಡಿ.ಸಿ.ಪಿ.ಓ. ಶ್ರೀ ರತ್ನಾಕರ, ಜಿಲ್ಲಾ ನಿರೂಪಣಾ ಅಧಿಕಾರಿ ನವೀನಕುಮಾರ, ಜಿಲ್ಲಾ ಅಂಗವಿಕಲ ಕಲ್ಯಾಣ ಅಧಿಕಾರಿ ಶ್ರೀ ನಾಮದೇವ ಬಿಲಕರ, ಸಿ.ಡಿ.ಪಿ.ಓ. ಶ್ರೀಮತಿ ಸುಮಿತ್ರಾ ಡಿ.ಬಿ, ಶ್ರೀಮತಿ ದೀಪಾ ಕಾಳೆ ಹಾಗೂ ಅಧಿಕಾರಿಗಳು ಹಾಜರಿದ್ದರು.
ಸ್ವಾಮೀಜಿಗಳ ಮೂಲಕ ಸಂಧಾನಕ್ಕೆ ಯತ್ನಿಸಿದ್ರಾ ಸಿ.ಪಿ.ಯೋಗೇಶ್ವರ್…?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ