ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಜಿ.ಆರ್.ಫಾರ್ಮ್ ಹೌಸ್ ನಲ್ಲಿ ನಡೆದಿದ್ದ ರೇವ್ ಪಾರ್ಟಿ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ ಚಿತ್ರರಂಗದ ಹಲವು ನಟ-ನಟಿಯರು, ರಾಜಕಾರಣಿಗಳ ಮಕ್ಕಳು ಸಿಕ್ಕಿಬಿದ್ದಿದ್ದಾರೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿ.ದಯಾನಂದ್, ಜಿ.ಆರ್.ಫಾರ್ಮ್ ಹೌಸ್ ನಲ್ಲಿ ”ಸನ್ ಸೆಟ್ ಟು ಸನ್ ರೈಸ್ ವಿಕ್ಟರಿ’ ಎಂಬ ಹೆಸರಲ್ಲಿ ಈವೆಂಟ್ ಆಯೋಜನೆ ಮಾಡಲಾಗಿತ್ತು. ಸಂಜೆಯಿಂದ ಬೆಳಗಿನವರೆಗೂ ಪಾರ್ಟಿ ಆಯೋಜನೆ ಮಾಡಲಾಗಿತ್ತು. ಪಾರ್ಟಿಯಲ್ಲಿ ಮಾದಕವಸ್ತು, ಮದ್ಯ ಮಾರಾಟ ಮಾಹಿತಿ ಹಿನ್ನೆಲೆಯಲ್ಲಿ ನಿನ್ನೆ ಬೆಳಗಿನ ಜಾವ 3 ಗಂಟೆ ವೇಳೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದರು.
ರೇವ್ ಪಾರ್ಟಿಯಲ್ಲಿ ತೆಲುಗು ಖ್ಯಾತ ನಟಿ ಹೇಮಾ ಕೂಡ ಭಾಗಿಯಾಗಿರುವುದು ಸತ್ಯ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಬೆಂಗಳೂರಿನ ರೇವ್ ಪಾರ್ಟಿಯಲ್ಲಿ ನಟಿ ಹೇಮಾ ಭಾಗಿಯಾಗಿದ್ದರು ಎಂಬ ಸುದ್ದಿ ಪ್ರಸಾರವಾಗುತ್ತಿದ್ದಂತೆ ಕೆಲವೇ ಹೊತ್ತಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನಿನ್ನೆ ವಿಡಿಯೋ ಹಂಚಿಕೊಂಡಿದ್ದ ಹೇಮಾ, ತಾನು ಹೈದರಾಬಾದ್ ನಲ್ಲಿಯೇ ಇದ್ದೇನೆ ಎಲ್ಲೂ ಹೋಗಿಲ್ಲ. ಹೈದರಾಬಾದ್ ನ ಫಾರ್ಮ್ ಹೌಸ್ ನಲ್ಲಿ ಆರಾಮವಾಗಿದ್ದೇನೆ. ನಾನು ರೇವ್ ಪಾರ್ಟಿಯಲ್ಲಿ ಭಾಗಿಯಾಗಿದ್ದೇನೆ ಎಂದು ಹರಡುತ್ತಿರುವ ಸುದ್ದಿ ಫೇಕ್ ಸುದ್ದಿ ಎಂದು ವಿಡಿಯೋ ಶೇರ್ ಮಾಡಿದ್ದರು. ಅಸಲಿಗೆ ಬೆಂಗಳೂರಿನ ಫಾರ್ಮ್ ಹೌಸ್ ನಲ್ಲಿದ್ದೇ ಪೊಲೀಸರ ದಾಳಿ ಮಧ್ಯೆಯೇ ನಟಿ ಹೇಮಾ ತಾನು ಹೈದರಾಬಾದ್ ನಲ್ಲಿದ್ದೇನೆ ಎಂದು ಸುಳ್ಳು ನಾಟಕವಾಡಿದ್ದರು ಎಂಬುದು ಖಚಿತಪಟ್ಟಿದೆ.
ರೇವ್ ಪಾರ್ಟಿಯಲ್ಲಿ ತೆಲುಗು ನಟಿ ಹೇಮಾ ಇದಿದ್ದು ಸತ್ಯ ಎಂದು ಹೇಳಿರುವ ಪೊಲೀಸ್ ಆಯುಕ್ತರು, ಅವರು ಯಾವ ಸಂದರ್ಭದಲ್ಲಿ ವಿಡಿಯೋ ಮಾಡಿದ್ದಾರೆ ಎಂಬುದನ್ನು ಪರಿಶೀಲಿಸಲಾಗುವುದು ಎಂದು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ