Kannada NewsLatestNational

*ಕ್ಯಾಮರಾ ಹಿಡಿದು ಹೂಗ್ಲಿ ನದಿಯಲ್ಲಿ ದೋಣಿ ವಿಹಾರ ನಡೆಸಿದ ಪ್ರಧಾನಿ ಮೋದಿ*

ಪ್ರಗತಿವಾಹಿನಿ ಸುದ್ದಿ: ಹೂಗ್ಲಿ ನದಿಯ ದಡದಲ್ಲಿ ಓಡಾಡಿದ ಪ್ರಧಾನಿ ನರೇಂದ್ರ ಮೋದಿ ಇಂದು ಕ್ಯಾಮರಾ ಕೈಯಲ್ಲಿ ಹಿಡಿದು ಕೆಲ ಕಾಲ ದೋಣಿ ವಿಹಾರ ನಡೆಸಿ ಗಮನ ಸೆಳೆದಿದ್ದಾರೆ.

ಪಶ್ಚಿಮ ಬಂಗಾಳ ವಿಧಾನಸಭೆಗೆ ಗುರುವಾರ ಮೊದಲ ಹಂತದ ಮತದಾನ ಮುಕ್ತಾಯವಾಗಿದ್ದು, ಇಂದು ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಕೋಲ್ಕತ್ತಾದ ಹೂಗ್ಲಿ ನದಿಯಲ್ಲಿ ದೋಣಿ ವಿಹಾರ ನಡೆಸಿದರು.

Home add -Advt

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್​ ಹಂಚಿಕೊಂಡಿರುವ ಮೋದಿ, ಹೂಗ್ಲಿ ನದಿ ಇಡೀ ನಾಗರಿಕತೆಯ ಕಾಲಾತೀತ ಚೈತನ್ಯವಾಗಿದೆ. ಪಶ್ಚಿಮ ಬಂಗಾಳದ ಅಭಿವೃದ್ಧಿ ಮತ್ತು ಬಂಗಾಳಿಗರ ಸಮೃದ್ದಿಗೆ ನಾವು ಬದ್ದ ಎಂದು ತಿಳಿಸಿದ್ದಾರೆ.

ಪ್ರಧಾನಿ ಹಂಚಿಕೊಂಡಿರುವ ಫೋಟೋಗಳಲ್ಲಿ, ಅವರು ಮರದ ದೋಣಿಯಲ್ಲಿ ಕುಳಿತು, ಕೈಯಲ್ಲಿ ಕ್ಯಾಮೆರಾ ಹಿಡಿದು ವಿಹರಿಸುತ್ತಿದ್ದಾರೆ. ಪ್ರಧಾನಿಯ ಮುಂಭಾಗ ಕೋಲ್ಕತ್ತಾದ ಹೆಗ್ಗುರುತಾಗಿರುವ ಹೌರಾ​ ಸೇತುವೆಯನ್ನು ಕಾಣಬಹುದು.

ಪ್ರತಿಯೊಬ್ಬ ಬಂಗಾಳಿಗರಿಗೂ ಗಂಗಾ ನದಿ ಬಹಳ ವಿಶೇಷವಾಗಿದೆ. ಈ ನದಿ ಬಂಗಾಳದ ಆತ್ಮದ ಮೂಲಕ ಹರಿಯುತ್ತದೆ ಎನ್ನಬಹುದು. ಅದರ ದೈವಿಕ ನೀರು ಇಡೀ ನಾಗರಿಕತೆಯ ಕಾಲಾತೀತ ಚೈತನ್ಯವನ್ನು ಹೊತ್ತೊಯ್ಯುತ್ತದೆ. ಇಂದು ಬೆಳಗ್ಗೆ ಕೋಲ್ಕತ್ತಾದಲ್ಲಿ ಹೂಗ್ಲಿ ನದಿ ದಡದಲ್ಲಿ ಸ್ವಲ್ಪ ಸಮಯ ಕಳೆದೆ. ಮಾತೆ ಗಂಗೆಗೆ ಕೃತಜ್ಞತೆ ಸಲ್ಲಿಸುವ ಅವಕಾಶ ಸಿಕ್ಕಿತು ಎಂದು ಪ್ರಧಾನಿ ಮೋದಿ ಬರೆದುಕೊಂಡಿದ್ದಾರೆ.

ಗುರುವಾರ ಸಂಜೆ ಹೌರಾದಿಂದ ಕೋಲ್ಕತ್ತಾಗೆ ರೋಡ್ ಶೋ ಸಂದರ್ಭದಲ್ಲಿ ನಾನು ಹೌರಾ ಸೇತುವೆಯ ಮೇಲಿದ್ದೆ. ಇಂದು ಬೆಳಗ್ಗೆ ಹೂಗ್ಲಿ ನದಿಯಿಂದ ಆ ಸೇತುವೆಯನ್ನು ನೋಡಿದೆ ಎಂದು ತಿಳಿಸಿರುವ ಮೋದಿ, ಪಶ್ಚಿಮ ಬಂಗಾಳ ಮತ್ತು ಶ್ರೇಷ್ಠ ಬಂಗಾಳಿಗರ ಸಮೃದ್ಧಿಯ ಕಡೆಗೆ ಕೆಲಸ ಮಾಡುವ ಬದ್ಧತೆಯನ್ನು ನಾವು ಹೊಂದಿದ್ದೇವೆ ಎಂದು ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದ 152 ವಿಧಾನಸಭಾ ಕ್ಷೇತ್ರಗಳಿಗೆ ಗುರುವಾರ ಮೊದಲ ಹಂತದ ಮತದಾನ ನಡೆದಿದ್ದು, ಏಪ್ರಿಲ್​ 29ರಂದು ಎರಡನೇ ಹಂತದ ಮತದಾನ ನಡೆಯಲಿದೆ. ಮೇ 4ರಂದು ಫಲಿತಾಂಶ ಪ್ರಕಟವಾಗಲಿದೆ.


Related Articles

Back to top button