Politics

*ಬಿಜೆಪಿ ಸದಸ್ಯತ್ವ: ದೇಶಕ್ಕೆ ಪ್ರಥಮ ಯಾವ ಕ್ಷೇತ್ರ ಗೊತ್ತೇ?*

2.13 ಲಕ್ಷ ನೂತನ ಸದಸ್ಯರ ನೋಂದಣಿ: ಸಾಧನೆ ಮಾಡಿದ ಶಾಸಕ ಎಸ್.ಆರ್.ವಿಶ್ವನಾಥ್ ತಂಡ

ಪ್ರಗತಿವಾಹಿನಿ ಸುದ್ದಿ: ಭಾರತೀಯ ಜನತಾ ಪಕ್ಷ ದೇಶಾದ್ಯಂತ ಕೈಗೊಂಡಿರುವ ಸದಸ್ಯತ್ವ ಅಭಿಯಾನದಲ್ಲಿ ಬೆಂಗಳೂರಿನ ಯಲಹಂಕ ವಿಧಾನಸಭಾ ಕ್ಷೇತ್ರ ಇಡೀ ದೇಶಕ್ಕೆ ಪ್ರಥಮ ಸ್ಥಾನದಲ್ಲಿದೆ.


ಕ್ಷೇತ್ರದಲ್ಲಿ 2 ಲಕ್ಷದ 13 ಸಾವಿರಕ್ಕೂ ಅಧಿಕ ನೂತನ ಸದಸ್ಯರು ಬಿಜೆಪಿಗೆ ನೋಂದಣಿ ಮಾಡಿಕೊಳ್ಳುವ ಮೂಲಕ ಈ ಸಾಧನೆ ಮಾಡಿದೆ.
ಕಳೆದ ಹಲವಾರು ದಿನಗಳಿಂದ ಕ್ಷೇತ್ರದ ಶಾಸಕ ಎಸ್.ಆರ್.ವಿಶ್ವನಾಥ್ ಅವರ ನೇತೃತ್ವದಲ್ಲಿ ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರು ಈ ಅಭಿಯಾನದಲ್ಲಿ ಪಾಲ್ಗೊಂಡು 2 ಲಕ್ಷಕ್ಕೂ ಅಧಿಕ ನೂತನ ಸದಸ್ಯರನ್ನು ನೋಂದಣಿ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಈ ಸಾಧನೆ ಮಾಡಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ವಿಶ್ವನಾಥ್ ಅವರಿಗೆ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರ ನೇತೃತ್ವದಲ್ಲಿ ಪಕ್ಷದ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.


ಈ ಸಂದರ್ಭದಲ್ಲಿ ಮಾತನಾಡಿದ ವಿಶ್ವನಾಥ್, ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಮಾರ್ಗದರ್ಶನದಲ್ಲಿ ಕೈಗೊಂಡ ಅಭಿಯಾನ ಅಭೂತಪೂರ್ವವಾಗಿ ನಡೆದಿದೆ. 2 ಲಕ್ಷದ 13 ಸಾವಿರಕ್ಕೂ ಅಧಿಕ ಜನರನ್ನು ಪಕ್ಷಕ್ಕೆ ಸೇರಿಸಿಕೊಂಡಿರುವುದು ನನಗೆ ಅತೀವ ಸಂತೋಷ ತಂದಿದೆ. ಅಲ್ಲದೇ, ದೇಶದಲ್ಲಿ ಇಷ್ಟೊಂದು ಸಂಖ್ಯೆಯ ಸದಸ್ಯತ್ವವನ್ನು ಮಾಡಿರುವ ಮೊದಲ ವಿಧಾನಸಭಾ ಕ್ಷೇತ್ರ ಯಲಹಂಕ ಆಗಿರುವುದು ನಮ್ಮ ಸಂತಸವನ್ನು ಇಮ್ಮಡಿ ಮಾಡಿರುವುದರ ಜೊತೆಗೆ ಜವಾಬ್ದಾರಿಯನ್ನೂ ಹೆಚ್ಚಿಸಿದೆ ಎಂದು ತಿಳಿಸಿದರು.


ಅಧಿಕಾರದಲ್ಲಿರಲಿ ಬಿಡಲಿ ನಮ್ಮ ಪಕ್ಷಕ್ಕೆ ಹೊಸದಾಗಿ ಸದಸ್ಯರಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ವಿಶೇಷವಾಗಿ ನಮ್ಮ ಕ್ಷೇತ್ರದಲ್ಲಿ ಯುವಕರು ಮತ್ತು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ಪಡೆಯುವ ಮೂಲಕ ಬಿಜೆಪಿ ಪರವಾದ ಅಲೆ ಇದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು.


ಸದಸ್ಯತ್ವ ಅಭಿಯಾನದ ಆರಂಭದಲ್ಲಿ ಕನಿಷ್ಠ 2 ಲಕ್ಷ ನೂತನ ಸದಸ್ಯರನ್ನು ನೋಂದಾಯಿಸಿಕೊಳ್ಳಬೇಕೆಂಬ ಗುರಿಯನ್ನು ಹಾಕಿಕೊಳ್ಳಲಾಗಿತ್ತು. ಆದರೆ, ಈ ಗುರಿಯನ್ನೂ ಮೀರಿ ನಮ್ಮ ಕ್ಷೇತ್ರದಲ್ಲಿ ನೋಂದಣಿ ಆಗಿದ್ದು, ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಇನ್ನೂ 10 ಸಾವಿರಕ್ಕೂ ಹೆಚ್ಚು ಸದಸ್ಯರನ್ನು ನೋಂದಾಯಿಸುವ ನಿರೀಕ್ಷೆ ಇದೆ ಎಂದು ವಿಶ್ವನಾಥ್ ತಿಳಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button