ಪ್ರಗತಿವಾಹಿನಿ ಸುದ್ದಿ: ಬಸ್ ಪ್ರಯಾಣ ದರ ಏರಿಕೆ ಮಾಡಿತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ನಿರ್ಣಯ ಖಂಡಿಸಿ ಭಾರತೀಯ ಜನತಾ ಪಕ್ಷದಿಂದ ಬಸ್ ತಡೆದು ವಿನೂತನವಾಗಿ ಪ್ರತಿಭಟಿಸಲಾಯಿತು.
ಇಂದು ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ವಿಪಕ್ಷ ನಾಯಕ ಆರ್. ಅಶೋಕ್ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ. ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಇತರರಿದ್ದರು. ಈ ವೇಳೆ ಕೆಲವು ಕಾರ್ಯಕರ್ತರು ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಯವರ ಮುಖವಾಡ ಧರಿಸಿ ಪುರುಷ ಪ್ರಯಾಣಿಕರಿಗೆ ಗುಲಾಬಿ ಹೂ ನೀಡಿದರು.
ಈ ವೇಳೆ ಮಾತನಾಡಿದ ಆರ್. ಅಶೋಕ್, ಕರ್ನಾಟಕದ 7 ಕೋಟಿ ಜನರು ಹೊಸ ವರ್ಷಕ್ಕೆ ಉಡುಗೊರೆಗೆ ಕಾಯುತ್ತಿದ್ದೆವು. ಮೋದಿಯವರು ಹೊಸ ವರ್ಷಕ್ಕೆ ನಿಜವಾದ ಗಿಫ್ಟ್ ಕೊಟ್ಟಿದ್ದಾರೆ. ರಾಜ್ಯ ಸರ್ಕಾರ, ದಿ ಗ್ರೇಟ್ 14 ಬಜೆಟ್ ಚಾಂಪಿಯನ್ ಸಿದ್ದರಾಮಯ್ಯನವರು ಬಸ್ ದರ ಏರಿಕೆಯ ಉಡುಗೊರೆ ನೀಡಿದ್ದಾರೆ ಎಂದು ಟೀಕಿಸಿದರು.
ಈ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪ್ರತಿದಿನ ತೆರಿಗೆ ಹೆಚ್ಚಳ, ಟ್ಯಾಕ್ಸ್ ಏರಿಕೆಯದೇ ಸಾಧನೆ ಮಾಡುತ್ತಿದೆ. ರಾಜ್ಯ ಸರ್ಕಾರವು ಅಭಿವೃದ್ಧಿ ವಿಚಾರದಲ್ಲಿ ಶೂನ್ಯ ಸಾಧನೆ ಮಾಡಿದೆ. ಆದರೆ, ಬೆಲೆ ಏರಿಕೆ ನಿರಂತರವಾಗಿ ಸಾಗಿದೆ. ಜನ ಸಾಮಾನ್ಯರ ಮೇಲೆ ಬರೆ ಎಳೆಯುವ ಕೆಲಸ ಮಾಡುತ್ತಿದೆ. ಟಿಕೆಟ್ ಬೆಲೆ ಏರಿಕೆ ವಾಪಸ್ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ