ಯಳ್ಳೂರ ಗ್ರಾಮ ಪಂಚಾಯಿತಿಯಲ್ಲಿ ಮತ್ತೆ ಗಡಿ ವಿವಾದದ ಸದ್ದು; ಬಿಜೆಪಿ ಸದಸ್ಯೆಯಿಂದಲೇ ಗಡಿ ವಿವಾದದ ಪ್ರಸ್ತಾಪ ಮಂಡನೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಗಡಿ ವಿವಾದಕ್ಕೆ ಸಂಬಂಧಿಸಿದಂತೆ ವಿವಾದದ ಕೇಂದ್ರಬಿಂದುವಾಗಿದ್ದು ಸದಾ ಸುದ್ದಿಯಲ್ಲಿರುವ ಯಳ್ಳೂರು ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಮತ್ತೆ ಗಡಿ ವಿವಾದ ಸಂಬಂಧಿ ನಿರ್ಣಯ ಮಂಡಿಸಲಾಗಿದೆ.
ಬಿಜೆಪಿ ಸದಸ್ಯೆಯೇ ಈ ವಿಷಯವನ್ನು ಕೆದಕಿ ಠರಾವು ಮಂಡಿಸಲು ಕಾರಣವಾಗಿದ್ದಾರೆ.
ಕಳೆದ 65 ವರ್ಷಗಳಿಂದ ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದದ ನಿರ್ಣಯ ನೆನಗುದಿಯಲ್ಲೇ ಇದೆ. ಈ ಕುರಿತ ದಾವೆ 2004ರಿಂದಲೂ ಸರ್ವೋಚ್ಚ ನ್ಯಾಯಾಲಯದಲ್ಲಿ ನಿರ್ಣಯವಾಗದೆ ಉಳಿದಿದೆ. ಆದಷ್ಟೂ ಶೀಘ್ರ ಈ ಕುರಿತು ನ್ಯಾಯಾಲಯ ನ್ಯಾಯದಾನ ಮಾಡಿ ಮರಾಠಿಗರಿಗೆ ನ್ಯಾಯ ಒದಗಿಸಲು ಒತ್ತಾಯಿಸಿ ಠರಾವು ಕೈಗೊಳ್ಳಬೇಕು ಎಂದು ಯಳ್ಳೂರು ಗ್ರಾಮ ಪಂಚಾಯಿತಿ ಬಿಜೆಪಿ ಸದಸ್ಯೆ ರಾಜಕುಂವರ ಪಾವಲೆ ಅವರು ಬುಧವಾರ ನಡೆದ ಗ್ರಾಮ ಪಂಚಾಯಿತಿ ಮಾಸಿಕ ಸಾಮಾನ್ಯ ಸಭೆಯಲ್ಲಿ ವಿಷಯ ಮಂಡಿಸಿದರು.
ಗಡಿ ಸಂಘರ್ಷದಲ್ಲಿ ಮುಂಚೂಣಿಯಲ್ಲಿರುವ ಯಳ್ಳೂರಿನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ನಂತರ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆಗಾಗಿ ನಡೆದ ಮೊದಲ ಸಭೆಯಲ್ಲಿ ಗಡಿ ವಿವಾದದ ಪ್ರಸ್ತಾಪವಾಗಿ ನಿರ್ಣಯ ಕೈಗೊಳ್ಳಲಾಗಿದೆ. 2020ರ ಜನವರಿಯಲ್ಲಿ ಚುನಾವಣೆ ನಡೆದು ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆಯಾದ ವೇಳೆ ಈ ಕುರಿತು ಪ್ರಸ್ತಾಪವಾಗಿರಲಿಲ್ಲ. ಈ ರೀತಿ ಗಡಿ ಸಂಬಂಧದಲ್ಲಿ ನಿರ್ಣಯ ಕೈಗೊಳ್ಳದೆ ನಿರ್ಲಿಪ್ತತೆ ತೋರಿರುವುದು ಈ ಗ್ರಾಮ ಪಂಚಾಯಿತಿ ಇತಿಹಾಸದಲ್ಲೇ ಮೊದಲ ಬಾರಿ ಎಂಬ ಅಪವಾದಕ್ಕೆ ಗುರಿಯಾಗಿತ್ತು. ಹೀಗಾಗಿ ಈ ಬಗ್ಗೆ ಇದು ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಲು ಕಾರಣವಾಗಿತ್ತು. ಈ ಅಪವಾದದಿಂದ ಮುಕ್ತರಾಗುವ ಉದ್ದೇಶದಿಂದ ರಾಜಕುಂವರ ಪಾವಲೆ ಅವರು ಗಡಿ ವಿಚಾರವನ್ನು ಈ ಬಾರಿ ಪ್ರಸ್ತಾಪಿಸಿದ್ದಾರೆ.
ಠರಾವು ಕೈಗೊಂಡ ನಂತರ ಮಾತನಾಡಿದ ರಾಜಕುಂವರ ಪಾವಲೆ ಅವರು “ಪ್ರತಿವರ್ಷವೂ ಗ್ರಾಮ ಪಂಚಾಯಿತಿ ಸಭೆಯಲ್ಲಿ ಈ ಕುರಿತು ಠರಾವು ಕೈಗೊಳ್ಳುತ್ತ ಬರಲಾಗಿದೆ. ಕಳೆದ 16 ವರ್ಷಗಳಿಂದ ಯಳ್ಳೂರ ಗ್ರಾಮೀಣ ಸಾಹಿತ್ಯ ಮರಾಠಿ ಸಮ್ಮೇಳನದಲ್ಲೂ ಈ ಬಗ್ಗೆ ಠರಾವು ಕೈಗೊಳ್ಳುತ್ತ ಬರಲಾಗಿದೆ. ಆದರೆ 2020ರಲ್ಲಿ ಅಸ್ತಿತ್ವಕ್ಕೆ ಬಂದ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಎರಡು ವರ್ಷಗಳ ಕಾಲ ಈ ಕುರಿತು ನಿರ್ಣಯ ಕೈಗೊಳ್ಳದಿರುವುದು ಜನತೆಯ ಅಸಮಾಧಾನಕ್ಕೆ ಕಾರಣವಾಗಿತ್ತು.ಹೀಗಾಗಿ ಈ ವಿಷಯ ಪ್ರಸ್ತಾಪಿಸಿದ್ದೇನೆ” ಎಂದರು.
ರಾಜಕುಂವರ ಪಾವಲೆ ಅವರು ನಾಲ್ಕು ಬಾರಿ ಯಳ್ಳೂರವಾಡಿ ಗ್ರಾಮ ಪಂಚಾಯಿತಿಗೆ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಒಂದು ಬಾರಿ ಅವಿರೋಧ ಆಯ್ಕೆಯಾಗಿದ್ದರೆ ಮೂರು ಬಾರಿ ಭಾರೀ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.
ಪ್ರಸ್ತುತ ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿಯ ಸದಸ್ಯರಾಗಿಯೂ ಅವರು ಗಡಿ ವಿಷಯ ಕೆದಕಿರುವುದು ಸಾಕಷ್ಟು ಚರ್ಚೆಗಳಿಗೆ ಕಾರಣವಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ