EducationKannada NewsKarnataka News

ಶಿಕ್ಷಕರ ಸ್ಥಳೀಯ ನಿಯೋಜನೆಗಳು ರದ್ದು – ಸರಕಾರ ಆದೇಶ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಸ್ಥಳೀಯವಾಗಿ ಡಿಡಿಪಿಐ ಮತ್ತು ಬಿಇಒ ಮಟ್ಟದಲ್ಲಿ ಮಾಡಲಾಗಿರುವ ಶಿಕ್ಷಕರ ನಿಯೋಜನೆಗಳನ್ನು ರದ್ದುಪಡಿಸಿ ಸರಕಾರದ ಆದೇಶ ಹೊರಡಿಸಿದೆ.

ಶಾಲಾ ಶಿಕ್ಷಣ ಇಲಾಖೆಯ ಆಯುಕ್ತ ಡಾ.ಆರ್.ವಿಶಾಲ ಈ ಕುರಿತು ಸುತ್ತೋಲೆ ಹೊರಡಿಸಿದ್ದಾರೆ. ಸರ್ಕಾರದಿಂದ ಆದೇಶವಾಗಿರುವ ಪ್ರಕರಣಗಳನ್ನು ಹೊರತುಪಡಿಸಿ ಉಳಿದಂತೆ ನಿಯೋಜನೆಯ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ನಿಯೋಜನೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಪಡಿಸಿ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.

ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಉಪನಿರ್ದೇಶಕರುಗಳು ಹಾಗೂ ಕ್ಷೇತ್ರಶಿಕ್ಷಣಾಧಿಕಾರಿಗಳು ಮಕ್ಕಳ ಶೈಕ್ಷಣಿಕ ಹಿತಾಸಕ್ತಿಯನ್ನು ಗಮನದಲ್ಲಿರಿಸದೇ ನಿಯಮಬಾಹಿರವಾಗಿ ಶಿಕ್ಷಕರುಗಳನ್ನು ನಿಯಮಗಳನ್ನು ಉಲ್ಲಂಘಿಸಿ ನಿಯೋಜನೆ ಮಾಡಿರುವುದು ಕಂಡುಬಂದಿರುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆ/ತಾಲ್ಲೂಕುಗಳಲ್ಲಿ ನಿಯೋಜನೆಯ ಮೇಲೆ ಕಛೇರಿ/ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಾಥಮಿಕ ಮತ್ತು ಪ್ರೌಢಶಾಲಾ ಸಹಶಿಕ್ಷಕರ ನಿಯೋಜನೆಯನ್ನು ಆಯಾ ಶೈಕ್ಷಣಿಕ ವರ್ಪಾಂತ್ಯಕ್ಕೆ ರದ್ದುಪಡಿಸಲು ಸೂಚಿಸಲಾಗಿತ್ತು.

ಆದರೆ ಇದುವರೆಗೂ ನಿಯೋಜನೆಯ ಮೇಲೆ ಸದರಿ ಶಿಕ್ಷಕರುಗಳು ಮುಂದುವರೆಯುತ್ತಿರುವುದು ವಿಷಾಧನೀಯ. ಇಲಾಖೆಯಿಂದ ಸ್ಪಷ್ಟ ಸೂಚನೆಗಳು ಇದ್ದಾಗೂ ಸಹಾ ಕೆಲವು ಶಿಕ್ಷಕರನ್ನು ಅದೇ ಶಾಲೆಯಲ್ಲಿ ನಿಯಮಬಾಹಿರವಾಗಿ ಮುಂದುವರೆಯಲು ಅವಕಾಶ ನೀಡುವುದರ ಮೂಲಕ ಸಂಬಂಧಪಟ್ಟ ಜಿಲ್ಲಾ ಉಪನಿರ್ದೇಶಕರು(ಆಡಳಿತ) ಮತ್ತು ಕ್ಷೇತ್ರಶಿಕ್ಷಣಾಧಿಕಾರಿಗಳು ಮೇಲಾಧಿಕಾರಿಗಳ ಆದೇಶವನ್ನು ಪಾಲಿಸುವಲ್ಲಿ ವಿಫಲರಾಗಿರುವ ಅಂಶವನ್ನು ಬಹಳ ಗಂಭೀರವಾಗಿ ಪರಿಗಣಿಸಿದೆ.

ಒಂದು ವೇಳೆ ಸರ್ಕಾರದಿಂದ ಆದೇಶವಾಗಿರುವ ಪ್ರಕರಣಗಳನ್ನು ಹೊರತುಪಡಿಸಿ ಉಳಿದಂತೆ ನಿಯೋಜನೆಯ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ನಿಯೋಜನೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಪಡಿಸಿ ಆದೇಶಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅಂತಹ ಶಿಕ್ಷಕರುಗಳನ್ನು ಕೂಡಲೆ ಶಾಲಾ ಕರ್ತವ್ಯದಿಂದ ಬಿಡುಗಡೆಗೊಳಿಸತಕ್ಕದ್ದು ಹಾಗೂ ಬಿಡುಗಡೆಗೊಂಡ ಶಿಕ್ಷಕರು ತಕ್ಷಣ ಮೂಲ ಶಾಲೆಯಲ್ಲಿ ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗತಕ್ಕದ್ದು.

ಒಂದು ವೇಳೆ ಮೂಲ ಶಾಲೆಯಲ್ಲಿ ಕರ್ತವ್ಯಕ್ಕೆ ಹಾಜರಾಗದಿದ್ದಲ್ಲಿ ಅಂತಹ ಶಿಕ್ಷಕರನ್ನು ಅನಧಿಕೃತ ಗೈರು ಹಾಜರಿ ಪ್ರಕರಣ ಎಂದು ಪರಿಗಣಿಸಿ ಶಿಸ್ತು ಕ್ರಮ ಜರುಗಿಸಲು ತಿಳಿಸಿದ ಹಾಗೂ ಮೂಲ ಶಾಲೆಯಲ್ಲಿ ಕರ್ತವ್ಯಕ್ಕೆ ಹಾಜರಾಗದ ಶಿಕ್ಷಕರ ವೇತನವನ್ನು ಪಾವತಿಸದೇ ತಡೆಹಿಡಿಯಲು ಸೂಚಿಸಿದೆ.

ಈಗಾಗಲೇ ಶಿಕ್ಷಕರನ್ನು ಬಿಡುಗಡೆಗೊಳಿಸಲಾಗಿರುವ ಹಾಗೂ ಮೂಲ ಶಾಲೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿರುವ ಶಿಕ್ಷಕರ ಜಿಲ್ಲಾವಾರು ಪಟ್ಟಿಯನ್ನು ನಮೂನೆಯಲ್ಲಿರುವಂತೆ ದಿನಾಂಕ: 05/07/2023ರ ಒಳಗಾಗಿ ಈ ಕಛೇರಿಗೆ ಕಳುಹಿಸಲು ತಿಳಿಸಿದೆ. ಆದೇಶವನ್ನು ಮೀರಿ ಯಾವುದೇ ಶಿಕ್ಷಕರು ನಿಯೋಜನೆಯ ಮೇಲೆ ಮುಂದುವರೆದಿರುವ ಪ್ರಕರಣ ಕಂಡುಬಂದಲ್ಲಿ ಅಂತಹ ಉಪನಿರ್ದೇಶಕರು(ಆಡಳಿತ) ಹಾಗೂ ಕ್ಷೇತ್ರಶಿಕ್ಷಣಾಧಿಕಾರಿಗಳು ಮತ್ತು ಸಂಬಂಧಿಸಿದ ಸಿಬ್ಬಂಧಿ ವಿರುದ್ಧ ಕರ್ತವ್ಯ ನಿರ್ಲಕ್ಷತೆ ಎಂದು ಪರಿಗಣಿಸಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button