Belagavi NewsBelgaum News

*ಕ್ಯಾಂಟೋನಮೆಂಟ್ ವಸತಿ ಪ್ರದೇಶ ಮಹಾನಗರ ಪಾಲಿಕೆಗೆ ಹಸ್ತಾಂತರ- ದಾಖಲೆಗಳ ಕ್ರೋಢಿಕರಣಕ್ಕೆ ಡಿಸಿ ಮೊಹಮ್ಮದ್ ರೋಷನ್ ಸೂಚನೆ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಕ್ಯಾಂಟೋನಮೆಂಟ್ ಸಿವ್ಹಿಲ್ ಪ್ರದೇಶಗಳನ್ನು ಮಹಾನಗರ ಪಾಲಿಕೆ ವ್ಯಾಪ್ತಿಗೆ ವರ್ಗಾಯಿಸುವ ಕುರಿತಂತೆ ಜರುಗಿಸಲಾಗುವ ಜಂಟಿ ಸಮೀಕ್ಷೆಗೂ ಮುಂಚೆ ಅಗತ್ಯದ ದಾಖಲೆಗಳನ್ನು ಕ್ರೋಢೀಕರಣ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ (ಜು.20) ಜರುಗಿದ ಕ್ಯಾಂಟೋನಮೆಂಟ್ ವಸತಿ ಪ್ರದೇಶ ಮಹಾನಗರ ಪಾಲಿಕೆಗೆ ಹಸ್ತಾಂತರ ಕುರಿತ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕ್ಯಾಂಟೋನಮೆಂಟ್ ವಸತಿಪ್ರದೇಶ ಮಹಾನಗರ ಪಾಲಿಕೆಗೆ ಹಸ್ತಾಂತರ ಪ್ರಕ್ರಿಯೆಯು ಕ್ಲಿಷ್ಟಕರವಾದ ಕಾರ್ಯವಾಗಿದ್ದು, ಈ ಪ್ರಕ್ರಿಯೆಯಲ್ಲಿ ಸಮಿತಿಯ ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸದರಿ ಕಾರ್ಯವನ್ನು ಪಾರದರ್ಶಕವಾಗಿ ನಿರ್ವಹಿಸುವಂತೆ ತಿಳಿಸಿದರು. 

ಕ್ಯಾಂಟೋನ್ಮೆಂಟ್ ಪ್ರದೇಶಗಳಲ್ಲಿನ ವಾಸಿಸುವ ಸಾರ್ವಜನಿಕರು ತಮ್ಮ ಹಳೆಯ ಕಟ್ಟಡಗಳ ಮೇಲೆ ಮಾಲೀಕತ್ವವನ್ನು ಹೊಂದಿದ್ದು, ಭೂಮಿಯ ಮೇಲೆ ಮಾಲೀಕತ್ವ ಹೊಂದಿರುವ ಕುರಿತು ದಾಖಲೆಗಳನ್ನು ಹೊಂದಿರುವುದಿಲ್ಲ. ನಾಗರಿಕ ಸೌಲಭ್ಯಗಳನ್ನು ಒದಗಿಸುವ ರಸ್ತೆ, ಉದ್ಯಾನವನ, ಧಾರ್ಮಿಕ ಸ್ಥಳಗಳನ್ನು ಗುರುತಿಸಿ ಅಂತಹ ಜಾಗವನ್ನು ಮಹಾನಗರ ಪಾಲಿಕೆಗೆ ಉಚಿತವಾಗಿ ಹಸ್ತಾಂತರಿಸಿಕೊಳ್ಳಲು ಕ್ರಮ ಜರುಗಿಸಬೇಕು. ಈ ಕುರಿತು ಜಂಟಿ ಸಮೀಕ್ಷೆ ಜರುಗಿಸಿ ವರದಿ ಸಲ್ಲಿಸಲು ತಿಳಿಸಿದರು.

ಮುಂದಿನ ಸಭೆಯಲ್ಲಿ ಕ್ಯಾಂಟೋನ್ಮೆಂಟ್ ವಸತಿ ಪ್ರದೇಶ ಹಸ್ತಾಂತರದ ವಿಷಯವನ್ನು ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಈ ಇತ್ಯರ್ಥ ಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ತಿಳಿಸಿದರು.

ಶಾಸಕರಾದ ರಾಜು(ಆಸೀಫ್) ಸೇಠ ಮಾತನಾಡಿ ಕ್ಯಾಂಟೋನ್ಮೆಂಟ್ ವಸತಿ ಪ್ರದೇಶ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಸಮಿತಿಯ, ಸಾರ್ವಜನಿಕರ ಹಾಗೂ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ಹಸ್ತಾಂತರ ಪ್ರಕ್ರಿಯೆಯನ್ನು ಶೀಘ್ರವೇ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಪ್ರೊಬೇಷನರಿ ಐ.ಎ.ಎಸ್. ಅಧಿಕಾರಿ ದಿನೇಶಕುಮಾರ್ ಮೀನಾ, ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಉಪ ಆಯುಕ್ತರಾದ ರೇಷ್ಮಾ ತಾಳಿಕೋಟಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಲ್ಲಿಕಾರ್ಜುನ ಕಲಾದಗಿ ಸೇರಿದಂತೆ ಕಂಟೋನ್ಮೆಂಟ್, ವಿವಿಧ ಇಲಾಖೆ ಅಧಿಕಾರಿಗಳು, ಸಲಹಾ ಸಮಿತಿ ಸದಸ್ಯರುಗಳು ಹಾಜರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button