ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸರ್ಕಾರಿ ಪದವಿ ಪೂರ್ವ ವಿದ್ಯಾಲಯಗಳಲ್ಲಿ ವಿಜ್ಞಾನ ವ್ಯಾಸಂಗ ಮಾಡುತ್ತಿರುವ ಜಿಲ್ಲೆಯ ವಿದ್ಯಾರ್ಥಿಗಳ ಶೈಕ್ಷಣಿಕ ಉನ್ನತಿಗಾಗಿ ಆರಂಭಿಸಲಾಗಿರುವ “ಸಿ.ಇ.ಟಿ.-ಸಕ್ಷಮ್” ಸಿದ್ಧತಾ ಪರೀಕ್ಷೆಯು ಇಂದು ಶನಿವಾರ(ಸೆ.14) ಜಿಲ್ಲೆಯಾದ್ಯಂತ ಯಶಸ್ವಿಯಾಗಿ ನಡೆಯಿತು.
ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಪರೀಕ್ಷೆಗೆ ದ್ವಿತೀಯ ವರ್ಷದ ವಿದ್ಯಾರ್ಥಿಗಳು ಕೂಡ ಹಾಜರಾಗಲು ಆಸಕ್ತಿ ವ್ಯಕ್ತಪಡಿಸಿದ್ದರಿಂದ ಅವರಿಗೂ ಕೂಡ ಅವಕಾಶ ಕಲ್ಪಿಸಲಾಗಿತ್ತು ಎಂದು ಸಿಇಟಿ-ಸಕ್ಷಮ ಪರೀಕ್ಷೆಯ ರೂವಾರಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ತಿಳಿಸಿದ್ದಾರೆ.
ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಒಟ್ಟು 15 ಪರೀಕ್ಷಾ ಕೇಂದ್ರಗಳಲ್ಲಿ ಸರಕಾರಿ ಕಾಲೇಜುಗಳ ಪ್ರಥಮ ಪಿಯುಸಿ ವಿಭಾಗದ ಒಟ್ಟು 1696 ವಿದ್ಯಾರ್ಥಿಗಳ ಪೈಕಿ 1639 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.
ಅದೇ ರೀತಿ ದ್ವಿತೀಯ ಪಿಯುಸಿ ವಿಭಾಗದ ಒಟ್ಟು 1557 ವಿದ್ಯಾರ್ಥಿಗಳ ಪೈಕಿ 1512 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿರುತ್ತಾರೆ.
ಇನ್ನು ಬೆಳಗಾವಿ ಶೈಕ್ಷಣಿಕ ಜಿಲ್ಲೆ ವ್ಯಾಪ್ತಿಯ- ಒಟ್ಟು 19 ಪರೀಕ್ಷಾ ಕೇಂದ್ರಗಳಲ್ಲಿ ಪಿಯುಸಿ ಪ್ರಥಮ ವರ್ಷದ ಒಟ್ಟು 1484 ವಿದ್ಯಾರ್ಥಿಗಳಲ್ಲಿ 1439 ಜನರು ಪರೀಕ್ಷೆಗೆ ಹಾಜರಾಗಿದ್ದರು. ಅದೇ ರೀತಿ ದ್ವಿತೀಯ ಪಿಯುಸಿ ವಿಭಾಗದ 1360 ವಿದ್ಯಾರ್ಥಿಗಳಲ್ಲಿ 1310 ಜನರು ಪರೀಕ್ಷೆಯನ್ನು ಬರೆಯುವ ಮೂಲಕ ಸಿಇಟಿ-ಸಕ್ಷಮ ಸಿದ್ಧತಾ ಪರೀಕ್ಷೆಯನ್ನು ಯಶಸ್ವಿಗೊಳಿಸಿದ್ದಾರೆ.
ಸರ್ಕಾರಿ ವಿಜ್ಞಾನ ವಿದ್ಯಾಲಯಗಳ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಸಶಕ್ತಗೊಳಿಸಲು ಮತ್ತು ಅವರ ಶೈಕ್ಷಣಿಕ ಸಾಮರ್ಥ್ಯವನ್ನು ವೃದ್ಧಿಸಲು ಬೆಳಗಾವಿ ಜಿಲ್ಲಾ ಪಂಚಾಯತಿಯು ಪದವಿಪೂರ್ವ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಸರ್ಕಾರಿ ಪದವಿಪೂರ್ವ (ವಿಜ್ಞಾನ) ವಿದ್ಯಾರ್ಥಿಗಳಿಗೆ OMR ಪ್ರಶ್ನೆ ಪತ್ರಿಕೆ ಮೂಲಕ (ಈಗಾಗಲೇ ಜಾರಿಯಲ್ಲಿರುವ ಮಾದರಿಯಲ್ಲಿ) CET/NEET ಸಿದ್ಧತಾ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಎಂದು ರಾಹುಲ್ ಶಿಂಧೆ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ