ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ದಾನ ಮತ್ತು ದುಡ್ಡಿಗೂ ಸಂಬಂಧವೇ ಇಲ್ಲ. ಕೇವಲ ದುಡ್ಡು ಕೊಡುವುದೊಂದೇ ದಾನವಲ್ಲ. ಇನ್ನೊಬ್ಬರ ಸಮಸ್ಯೆಗೆ ಪ್ರೀತಿ, ಅಂತಃಕರಣದಿಂದ ಸ್ಪಂದಿಸುವುದೂ ದಾನ ಎಂದು ಇನ್ಪೊಸಿಸ್ ಪ್ರತಿಷ್ಠಾನದ ಅಧ್ಯಕ್ಷೆ , ಪದ್ಮಶ್ರೀ ಸುಧಾ ಮೂರ್ತಿ ಹೇಳಿದರು.
ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರ್ ( ಭಾರತ) ಬೆಳಗಾವಿ ಸ್ಥಳೀಯ ಕೇಂದ್ರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಗತ್ಯವಿರುವವರಿಗೆ ಸಹಾಯ ಮಾಡುವುದೇ ಪರೋಪಕಾರ ಎಂಬ ವಿಷಯದ ಕುರಿತ ವೆಬಿನಾರ್ನಲ್ಲಿ ಅವರು ಮಾತನಾಡಿದರು.
ಇಂದಿನ ಸ್ಥಿತಿಯಲ್ಲಿ ಮಧ್ಯಮ ವರ್ಗದ ಕುಟುಂಬದ ಮೌಲ್ಯಗಳು ಅಗತ್ಯ ಎನಿಸುತ್ತವೆ. ಮನೆಯಲ್ಲಿ ಹೆಚ್ಚು ಜನರಿದ್ದು, ಸೌಲಭ್ಯಗಳು ಕಡಿಮೆಯಿದ್ದಾಗಿ ಹಂಚಿಕೊಳ್ಳುವ ಮತ್ತು ಪರಸ್ಪರ ಕಾಳಜಿ ವಹಿಸುವ ಗುಣ ಬೆಳೆಯುತ್ತದೆ. ಇನ್ನೊಬ್ಬರಿಗೆ ಒಳ್ಳೆಯದನ್ನೇ ಬಯಸಬೇಕು. ಸ್ವಾರ್ಥಪರತೆ ಬಿಟ್ಟು, ದಾನಿಗಳಾಗಬೇಕು. ಜೀವನದಲ್ಲಿ ಹಣ ಗಳಿಸುವುದು ಮುಖ್ಯವಲ್ಲ. ಜೀವನವನ್ನು ಅನುಭವಿಸುವುದು ಮಹತ್ವದ್ದು ಎಂದು ಹೇಳಿದರು.
ದಾನ ನೀಡುವುದರ ಹಿಂದೆ ಯಾವುದೇ ನಿರೀಕ್ಷೆಗಳು ಇರಬಾರದು. ಕಷ್ಟದಲ್ಲಿರುವವರಿಗೆ ನೆರವು ನೀಡಬೇಕು, ಅವರ ಸುಖ, ದುಃಖದಲ್ಲಿಯೂ ನಾವು ಪಾಲ್ಗೊಳ್ಳಬೇಕು. ದಾನ ನೀಡುವುದರಿಂದ ಮನಸ್ಸಿಗೆ ಸುಖ, ಸಂತೃಪ್ತಿ ಸಿಗುತ್ತದೆ. ನಮ್ಮನ್ನು ವಿನಮ್ರ ಮನುಷ್ಯರನ್ನಾಗಿ ಮಾಡುತ್ತದೆ. ನಾವು ನೀಡುವ ದಾನವು ನಿಜವಾಗಿಯೂ ಅರ್ಹತೆ ಮತ್ತು ಅಗತ್ಯ ಇರುವವರಿಗೆ ಸಲ್ಲಬೇಕು ಎಂದು ಹೇಳಿದರು.
ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರ್ ಬೆಳಗಾವಿ ಸ್ಥಳೀಯ ಕೇಂದ್ರದ ಅಧ್ಯಕ್ಷ ರಮೇಶ ಜಂಗಲ ಅಧ್ಯಕ್ಷತೆ ವಹಿಸಿದ್ದರು. ವಿ.ಬಿ.ಜಾವೂರ (ಹಿರಿಯ ಎಂಜಿನಿಯರ್), ಪ್ರೊ.ಎ.ಎಸ್.ದೇಶಪಾಂಡೆ (ವಿಟಿಯು ಕುಲಸಚಿವ), ಪ್ರೊ.ಪ್ರಕಾಶ ಪಟ್ಟಣಶೆಟ್ಟಿ, ಡಾ.ಎಚ್.ಬಿ.ರಾಜಶೇಖರ ಸೇರಿದಂತೆ ಯುಎಸ್ಎ, ಯುಎಇ, ಆಸ್ಟ್ರೇಲಿಯಾ, ಸೌದಿ ಅರೇಬಿಯಾ ಮತ್ತು ಆಫ್ರಿಕನ್ ದೇಶಗಳಿಂದಲೂ ಗಣ್ಯರು ವೆಬ್ನಾರ್ನಲ್ಲಿ ಪಾಲ್ಗೊಂಡಿದ್ದರು. ಬಿ.ಜಿ.ಧರೆನ್ನಿ ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ