*ಬಳ್ಳಾರಿ ಬಳಿಕ ಮತ್ತೊಂದು ಜಿಲ್ಲೆಯಲ್ಲಿಯೂ ಬ್ಯಾನರ್ ಗಲಾಟೆ: ಪೌರಾಯುಕ್ತೆಗೆ ಮುಖಂಡನಿಂದ ಜೀವ ಬೆದರಿಕೆ: ತೀವ್ರಗೊಂಡ ಪ್ರತಿಭಟನೆ*

ಪ್ರಗತಿವಾಹಿನಿ ಸುದ್ದಿ: ಬಳ್ಳಾರಿಯಲ್ಲಿ ನಡೆದ ಬ್ಯಾನರ್ ಗಲಾಟೆ, ಫೈರಿಂಗ್ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಜಿಲ್ಲೆಯಲ್ಲಿ ಬ್ಯಾನರ್ ವಿಚಾರವಾಗಿ ಮಹಿಳಾ ಅಧಿಕಾರಿ ಮೇಲೆ ದಬ್ಬಾಳಿಕೆ ನಡೆದಿದೆ. ಅವಾಚ್ಯವಾಗಿ ನಿಂದಿಸಿ, ಚಪ್ಪಲಿಯಲ್ಲಿ ಹೊಡೆದು, ಬೆಂಕಿ ಹಚ್ಚುವುದಾಗಿ ಕಾಂಗ್ರೆಸ್ ಮುಖಂಡರೊಬ್ಬರು, ಪೌರಾಯುಕ್ತೆಗೆ ಬೆದರಿಕೆ ಹಾಕಿದ್ದು, ಸಿಬ್ಬಂದಿಗಳು ಪ್ರತಿಭಟನೆ ತೀವ್ರಗೊಳಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾ ಅವರಿಗೆ ಕೆಪಿಸಿಸಿ ರಾಜ್ಯ ಸಂಯೋಜಕ ರಾಜೀವ್ ಗೌಡ ಎಂಬುವವರು ಅವಾಚ್ಯವಾಗಿ ನಿಂದಿಸಿ, ಬೆದರಿಕೆ ಹಾಕಿರುವ ಆಡೀಯೋ ವೈರಲ್ ಆಗಿದೆ. ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದ ನಾನು ದೊಡ್ದ ಪ್ಯಾಕೇಜ್ ಬಿಟ್ಟು ತಂದೆ ಆಸೆ ಪೂರೈಸಲು ಕೆಎಎಸ್ ಓದಿ ಸಿವಿಲ್ ಸರ್ವಿಸ್ ಗೆ ಬಂದಿದ್ದೇನೆ. ಈಗ ಒಂದು ಸಣ್ಣ ವಿಚಾರಕ್ಕೆ ರಾಜಕೀಯ ನಾಯಕ ರಾಜೀವ್ ಗೌಡ ಕರೆ ಮಾಡಿ ಜನರಿಂದ ಚಪ್ಪಲಿಯಲ್ಲಿ ಹೊಡೆದು, ಬೆಂಕಿ ಹಚ್ಚುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಅಮೃತಾ ಕಣ್ಣೀರಿಟ್ಟಿದ್ದಾರೆ. ಮಹಿಳಾ ಅಧಿಕಾರಿಗೆ ಹಾಗೂ ನಮ್ಮ ಕಚೇರಿಯ ಸಿಬ್ಬಂದಿಗಳಿಗೆ ಅವಾಚ್ಯವಾಗಿ ನಿಂದಿಸಿದ್ದಾರೆ. ಹಾಗೆಲ್ಲ ಮಾತನಾಡಬೇಡಿ ಎಂದಿದ್ದಕ್ಕೆ ನನಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ.
ಕಲ್ಟ್ ಸಿನಿಮಾದ ಬ್ಯಾನರ್ ನ್ನು ರಾಜೀವ್ ಗೌಡ ಬೆಂಬಲಿಗರು ನಗರದಲ್ಲಿ ಹಾಗೂ ನಗರದ ಸರ್ಕಲ್ ಮಧ್ಯದಲ್ಲಿ ಅಳವಡಿಸಿದ್ದರಂತೆ. ಯಾವುದೇ ಅನುಮತಿ ಪಡೆಯದೇ ಬ್ಯಾನರ್ ಅಳವಡಿಸಿದ್ದರು ಎನ್ನಲಾಗಿದೆ. ಅಲ್ಲದೇ ಸರ್ಕಲ್ ಮಧ್ಯದ ಬ್ಯಾನರ್ ನಿಂದಾಗಿ ನಿನ್ನೆ ಒಂದು ಅಪಘಾತ ಕೂಡ ಸಂಭವಿಸಿತ್ತು. ಬ್ಯಾನರ್ ನಿಂದಾಗಿ ಅಪಘಾತವಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು. ಸ್ಥಳಕ್ಕಾಗಮಿಸಿದ ಪೌರಾಯುಕ್ತೆ ಅಮೃತಾ ಅಕ್ರಮವಾಗಿ ಬ್ಯಾನರ್ ಕಟ್ಟಿದ್ದಕ್ಕೆ ಸರ್ಕಲ್ ಮಧ್ಯೆ ಇರುವ ಬ್ಯಾನರ್ ತೆರವು ಮಾಡಿಸಿದ್ದರು. ರಾಜೀವ್ ಗೌಡ ಕಡೆಯವರಿಗೆ ರಸ್ತೆ ಪಕ್ಕದಲ್ಲಿ ಬ್ಯಾನರ್ ಹಾಕಿಕೊಳ್ಳಲು ಸೂಚಿಸಿದ್ದರು. ಒಂದು ಬ್ಯಾನರ್ ತೆರವು ಗೊಳಿಸಿದ ವಿಚಾರವಾಗಿ ಪೌರಾಯುಕ್ತೆ ಅಮೃತಾ ಅವರಿಗೆ ಕರೆ ಮಾಡಿ ಆವಾಜ್ ಹಾಕಿದ ರಾಜೀವ್ ಗೌಡ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ನಾಳೆ ನಮ್ಮ ಜನರನ್ನು ಕಳುಹಿಸಿ ಚಪ್ಪಲಿಯಲ್ಲಿ ಹೊಡೆದು ಬೆಂಕಿ ಹಚ್ಚಿಸುತ್ತೇನೆ ಎಂದು ಧಮ್ಕಿ ಹಾಕಿದ್ದಾರೆ. ಕಚೇರಿ ಸಿಬ್ಬಂದಿಗಳನ್ನು ಬೈದಿದ್ದಾರೆ. ಈ ಕುರಿತ ಆಡಿಯೋ ವೈರಲ್ ಆಗಿದ್ದು, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸಿಎಸ್ ಶಾಲಿನಿ ರಜನೀಶ್ ಅವರಿಗೆ ದೂರು ನೀಡಿದ್ದಾರೆ. ನಿಮ್ಮ ಅಧಿಕಾರಾವಧಿಯಲ್ಲಿ ಇನ್ನೋರ್ವ ಮಹಿಳಾ ಅಧಿಕಾರಿ ಮೇಲೆ ದಬ್ಬಾಳಿಕೆ ನಡೆಯುತ್ತಿದ್ದರೆ ಸುಮ್ಮನಿರಬೇಡಿ ಮಹಿಳಾ ಆಧಿಕಾರಿಗೆ ಜೀವಬೆದರಿಕೆ ಹಾಕಿರುವವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಮತ್ತೊಂದೆಡೆ ಚಿಕ್ಕಬಳ್ಳಾಪುರದಲ್ಲಿ ರಾಜೀವ್ ಗೌಡ ವಿರುದ್ಧ ನಗರಸಭೆ, ಪುರಸಭೆ ಅಧಿಕಾರಿಗಳು, ಇತರ ಸರ್ಕಾರಿ ಕಚೇರಿ ಅಧಿಕಾರಿಗಳು, ಸಿಬ್ಬಂದಿಗಳು ಪ್ರತಿಭಟನೆ ನಡೆಸುತ್ತಿದ್ದು, ಅಧಿಕಾರಿಗಳಿಗೆ ಸಿಬ್ಬಂದಿಗಳಿಗೆ ರಕ್ಷಣೆ ನೀಡುವಂತೆ ಒತ್ತಾಯಿಸಿದ್ದಾರೆ.




