ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಅಧಿವೇಶನದ ವೇಳೆ ಬಿಜೆಪಿ ನಾಯಕ ಸಿ.ಟಿ ರವಿ ಅವರು ಸಚಿವೆ ಲಕ್ಷ್ಮಿ ಹೆಬ್ಬಳ್ಳರ್ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆಗೆ ಸಂಬಂಧಪಟ್ಟಂತೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು ವರದಿ ನೀಡುವಂತೆ ಸೂಚಿಸಿದ್ದಾರೆ.
ಸಿ.ಟಿ ರವಿ ಅವರ ಬಂಧನ ಹಾಗೂ ಬಂಧನದ ನಂತರ ನಡೆದಂತಹ ನಾಟಕೀಯ ಘಟನೆಗಳಿಗೆ ಸಂಬಂಧಿಸಿದಂತೆ ಸಿ.ಟಿ ರವಿ ರಾಜ್ಯಪಾಲರಿಗೆ ಪತ್ರ ಬರೆದು ಸರ್ಕಾರದ ವಿರುದ್ಧ ಹಾಗೂ ಪೊಲೀಸರ ನಡವಳಿಕೆಯ ಬಗ್ಗೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಇದರ ಬೆನ್ನಲ್ಲೇ ರಾಜ್ಯಪಾಲರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ಬೆಳಗಾವಿ ಪೊಲೀಸ್ ಕಮಿಷನರ್ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳು ನನ್ನನ್ನು ಅಪಹರಿಸಿ ರಾತ್ರಿಯಲ್ಲಿ 400 ಕಿ.ಮೀ ದೂರದ ಪ್ರದೇಶಗಳಿಗೆ ಸಾಗಿಸಿದ್ದಾರೆ. ಕಸ್ಟಡಿಯಲ್ಲಿದ್ದಾಗ ನನಗೆ ಕಿರುಕುಳ ನೀಡಿದ್ದಾರೆ. ನನ್ನನ್ನು ಕಬ್ಬಿನ ಗದ್ದೆ ಮತ್ತು ಹಳ್ಳಿಗಳಿಗೆ ಕರೆದೊಯ್ದು ದೈಹಿಕವಾಗಿ ಗಾಯಗೊಳಿಸಿದ್ದಲ್ಲದೇ ಮಾನಸಿಕವಾಗಿಯೂ ಹಿಂಸಿಸಿದ್ದಾರೆ ಎಂದು ಸಿ.ಟಿ ರವಿ ವಿವರಿಸಿದ್ದಾರೆ.
ಇದೀಗ ಸಿಟಿ ರವಿ ಅವರ ಪತ್ರಕ್ಕೆ ಸ್ಪಂದಿಸಿರುವ ಗೆಹ್ಲೋಟ್, ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು, ಈ ಘಟನೆ ಅತ್ಯಂತ ಗಂಭೀರವಾದುದು. ಇದನ್ನು ವೈಯಕ್ತಿಕವಾಗಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ