*ಸಹಕಾರಿ ಸಂಘದ ಚುನಾವಣೆ ಪ್ರತಿಷ್ಠೆಯಾಗಿ ತೆಗೆದುಕೊಂಡಿಲ್ಲ: ಸಚಿವ ಸತೀಶ್ ಜಾರಕಿಹೊಳಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯನ್ನು ನಾವು ಪ್ರತಿಷ್ಠೆಯಾಗಿ ತೆಗೆದುಕೊಂಡಿಲ್ಲ. ನಾನು ಈ ಮೊದಲೆ ಹೇಳಿದ್ದೆ, ನಮ್ಮ ಚುನಾವಣೆಯಲ್ಲಿ ತೆಗೆದುಕೊಂಡ ಕಾಳಜಿ ಕಾರ್ಯಕರ್ತರ ಚುನಾವಣೆಯಲ್ಲಿ ತೆಗೆದುಕೊಂಡಿದ್ದೇನೆಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು ತಿಳಿಸಿದರು.
ಹುಕ್ಕೇರಿ ತಾಲೂಕಿನ ಕಮತನೂರ ಗ್ರಾಮದಲ್ಲಿ ಮಾಧ್ಯಮವರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಡಿಸಿಸಿ ಬ್ಯಾಂಕ್ ಅನ್ನು ಕಟ್ಟಿದವರು ಲಿಂಗಾಯತ ಸಮುದಾಯದವರೇ, ಅದರಲ್ಲಿ ಎರಡು ಮಾತಿಲ್ಲ. ಆದರೆ ಈಗ ಅದೇ ಸಮುದಾಯದವರಿಂದ ಬ್ಯಾಂಕ್, ಸೇರಿದಂತೆ ಸಹಕಾರಿ ಸಂಸ್ಥೆಗಳು ಹಾಳಾಗುತ್ತಿದ್ದರಿಂದ ನಾವು ಅವುಗಳ ಉಳಿವಿಗಾಗಿ ಶ್ರಮಿಸುತ್ತಿದ್ದೇವೆ ಎಂದರು.
ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಸ್ಥೆಯಿಂದ ಇಲ್ಲಿನ ಸ್ಥಳೀಯ ಜನರಿಗೆ ಸರಿಯಾಗಿ ಸೌಲಭ್ಯಗಳು ಸಿಗುತ್ತಿಲ್ಲ. ಒಂದು ಟಿಸಿ ನೀಡಲು ಆರು ತಿಂಗಳ ಅವಧಿ ತೆಗೆದುಕೊಳ್ಳುತ್ತಿದ್ದರು. ಹೀಗಾಗಿಯೇ ನಮ್ಮ ನೇತೃತ್ವದಲ್ಲಿ ಕಳೆದ ಮೂರು ತಿಂಗಳ ಅವಧಿಯಲ್ಲಿ ಇಲ್ಲಿನ ರೈತರಿಗೆ 24 ಗಂಟೆ ಒಳಗಾಗಿ ಟಿಸಿಗಳನ್ನು ಒದಗಿಸುವ ಕಾರ್ಯ ಮಾಡುತ್ತಿದ್ದೇವೆ. ಇದರಿಂದ ಈ ಚುನಾವಣೆಯಲ್ಲಿ ಜನರು ದಿ. ಅಪ್ಪಣಗೌಡ ಪಾಟೀಲ್ ಪೆನಲ್ ಬೆಂಬಲಿಸುತ್ತಾರೆಂಬ ವಿಶ್ವಾಸವಿದೆ ಎಂದರು.
ಇನ್ನು ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನಮಗೆ ಬಹುಮತ ಸಿಗುತ್ತದೆ. ಆದರೆ ಅಧ್ಯಕ್ಷ, ಉಪಾಧ್ಯಕ್ಷರನ್ನು ನೇಮಕವಾಗಬೇಕಾದರೆ ಬಾಲಚಂದ್ರ ಜಾರಕಿಹೊಳಿ, ಅಣ್ಣಾಸಾಬ್ ಜೊಲ್ಲೆ ಅವರು ಸೇರಿದಂತೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾಡುತ್ತೇವೆ ಎಂದರು.
ಲಾಂಗು, ಮಚ್ಚು ಕೈಯಲ್ಲಿ ಹಿಡಿದು ಚುನಾವಣೆ ಮಾಡುವುದಕ್ಕೆ ಜನ ಉತ್ತರ ನೀಡುತ್ತಾರೆ. ಯಾವುದೇ ಚುನಾವಣೆ ಇರಲಿ ನಾವು ಯಾರ ವೈಯಕ್ತಿಕ ವಿಷಯದ ಬಗ್ಗೆ ಮಾತನಾಡಲ್ಲ. ಚುನಾವಣೆಯಲ್ಲಿ ರಾಜಕೀಯವಾಗಿ ಆರೋಪಿಸುವುದು ಸಹಜ. ಇನ್ನು ಸುಳ್ಳು ಭಾಷಣ ಮಾಡದರೆ ಯಾರೂ ನಂಬಲ್ಲ. ಅಭಿವೃದ್ಧಿ ಕೆಲಸಗಳನ್ನು ಜನ ನೋಡುತ್ತಾರೆಂಬ ವಿಶ್ವಾಸ ನಮಗಿದೆ ಎಂದರು.
ರಮೇಶ ಕತ್ತಿ ರಾಜಕೀಯವಾಗಿ ಲಿಂಗಾಯತ ಸಮಾಜದವರ ವಿರುದ್ಧವೇ ಸಾಕಷ್ಟು ಚುನಾವಣೆ ಮಾಡಿದ್ದಾರೆ. ಇನ್ನು ಅವರು ಗೋಕಾಕ, ಅರಭಾವಿಗೆ ಬರಲು ನಾವೇನು ತಡೆದಿಲ್ಲ. ಅವರು ನಮ್ಮಕ್ಕಿಂತ ಮೊದಲೆ ಅಧಿಕಾರದಲ್ಲಿ ಇದ್ದಾರೆ. ಹುಕ್ಕೇರಿ, ಯಮಕನಮರಡಿ ಮತಕ್ಷೇತ್ರದಲ್ಲಿರುವ ರಸ್ತೆಗಳನ್ನು ನೋಡಿ ಯಾರು ಎಷ್ಟು ಅಭಿವೃದ್ಧಿ ಮಾಡಿದ್ದಾರೆ ಗೊತ್ತಾಗುತ್ತದೆ ಎಂದು ಹೇಳಿದರು.