ಅಂಬುಲನ್ಸ್ ನಲ್ಲೇ ಕೌನ್ಸಲಿಂಗ್; ಅಲ್ಲೇ ಆದೇಶ ಪತ್ರ ಹಸ್ತಾಂತರ!
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಜ್ಯಾದ್ಯಂತ ಶಿಕ್ಷಕರ ವರ್ಗಾವಣೆ ಕೌನ್ಸಲಿಂಗ್ ನಡೆಯುತ್ತಿದೆ. ಶಿಕ್ಷಕರು ನಿಗದಿಪಡಿಸಿದ ಸ್ಥಳಕ್ಕೆ ಹಾಜರಾಗಿ ಸ್ಥಳ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.
ಬೆಳಗಾವಿಯಲ್ಲಿ ಬಿ.ಕೆ.ಮಾಡೆಲ್ ಸ್ಕೂಲ್ ನಲ್ಲಿ ಶಿಕ್ಷಕರ ಕೌನ್ಸಲಿಂಗ್ ನಡೆಯುತ್ತಿದೆ. ಗುರುವಾರ ಕೌನ್ಸಲಿಂಗ್ ವೇಳೆ ಶಿಕ್ಷಕಿಯೋರ್ವರಿಗೆ ಸ್ಥಳ ಆಯ್ಕೆಗೆ ಅಂಬುಲನ್ಸ್ ನಲ್ಲೇ ಅವಕಾಶ ಮಾಡಿಕೊಟ್ಟು, ಅಲ್ಲೇ ಆದೇಶ ಪತ್ರವನ್ನು ವಿತರಿಸಲಾಯಿತು. ಈ ಅಪರೂಪದ ವಿದ್ಯಮಾನಕ್ಕೆ ಗುರುವರಾದ ಕೌನ್ಸಲಿಂಗ್ ಸಾಕ್ಷಿಯಾಯಿತು.
ಖಾನಾಪುರ ತಾಲೂಕಿನ ಪ್ರಭುನಗರ ಸರಕಾರಿ ಪ್ರಾಥಮಿಕ ಶಾಲೆ ಶಿಕ್ಷಕಿ ರೇಖಾ ರಂಗಸಮುದ್ರ ಎನ್ನುವವರು ಕೆಲ ದಿನಗಳ ಹಿಂದೆ ಬೈಕ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದಾರೆ. ಅವರು ಬೆಡ್ ರೆಸ್ಟ್ ನಲ್ಲಿದ್ದಾರೆ. ಹಾಗಾಗಿ ಗುರುವಾರ ಅಂಬುಲನ್ಸ್ ನಲ್ಲಿ ಅವರನ್ನು ಬಿ.ಕೆ ಮಾಡೆಲ್ ಸ್ಕೂಲ್ ಬಳಿ ಕರೆತರಲಾಗಿತ್ತು. ಆದರೆ ಇಳಿದು ಹೋಗಿ ಸ್ಥಳ ಆಯ್ಕೆ ಮಾಡುವ ಪರಿಸ್ಥಿತಿಯಲ್ಲಿ ಅವರು ಇರಲಿಲ್ಲ. ಹಾಗಾಗಿ ಅಧಿಕಾರಿಗಳು ಅಂಬುಲನ್ಸ್ ನಲ್ಲೇ ಸ್ಥಳ ಆಯ್ಕೆಗೆ ಅವಕಾಶ ಮಾಡಿಕೊಟ್ಟರು. ಅಲ್ಲೇ ಆದೇಶ ಪತ್ರವನ್ನೂ ನೀಡಲಾಯಿತು.
ಶಿಕ್ಷಕಿ ರೇಖಾ ರಂಗಸಮುದ್ರ ಕೇದನೂರು ಶಾಲೆಯನ್ನು ಆಯ್ಕೆ ಮಾಡಿಕೊಂಡಿದ್ದು, ಡಿಡಿಪಿಐ ಬಸವರಾಜ ನಾಲತವಾಡ ಅವರು ಅಂಬುಲನ್ಸ್ ನಲ್ಲೇ ಅವರಿಗೆ ಆದೇಶ ಪತ್ರ ನೀಡುವ ಮೂಲಕ ಮಾನವೀಯತೆ ತೋರಿದರು.
ಡಿಡಿಪಿಐ ಬಸವರಾಜ ನಾಲತವಾಡ ಮತ್ತು ಡಿಡಿಪಿಐ ಕಚೇರಿ ಕ್ಷೇತ್ರ ಶಿಕ್ಷಣಾಧಿಕಾರಿ ರವಿ ಬಳಿಗಾರ ಅವರ ಕಾರ್ಯಕ್ಕೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಜಯಕುಮಾರ ಹೆಬಳಿ ಮತ್ತು ಪ್ರಧಾನ ಕಾರ್ಯದರ್ಶಿ ರಮೇಶ ಗೋಣಿ ಧನ್ಯವಾದ ಸಲ್ಲಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ