*ಕೊಳವೆಬಾವಿಯಿಂದ ನೀರು ಪೂರೈಸುವ ಟ್ಯಾಂಕರ್ ಗಳು ಸರ್ಕಾರದ ಸುಪರ್ದಿಗೆ*
ಮಾ.7 ರ ಒಳಗಾಗಿ ನೋಂದಣಿ ಮಾಡಿಕೊಳ್ಳುವಂತೆ ಸೂಚನೆ
ಪ್ರಗತಿವಾಹಿನಿ ಸುದ್ದಿ: “ಬೆಂಗಳೂರಿನ ನೀರಿನ ಅಭಾವ ನೀಗಿಸಲು ಕೊಳವೆಬಾವಿ ನೀರು ಪೂರೈಸುವ ಟ್ಯಾಂಕರ್ ಗಳನ್ನು ಸರ್ಕಾರದ ಸುಪರ್ದಿಗೆ ತೆಗೆದುಕೊಳ್ಳಲಾಗುವುದು. ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಮಾಹಿತಿ ನೀಡಿದರು.
ಸದಾಶಿವನಗರದ ಬಳಿ ಮಾಧ್ಯಮಗಳಿಗೆ ಈ ಬಗ್ಗೆ ಮಾಹಿತಿ ನೀಡಿದ ಶಿವಕುಮಾರ್ ಅವರು ಶನಿವಾರ ಹೇಳಿದ್ದಿಷ್ಟು;
“ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ಆಹಾಕಾರ ಎದುರಾಗಿದೆ. ಪ್ರತಿನಿತ್ಯ ಬಿಡಬ್ಲ್ಯೂಎಸ್ಎಸ್ ಬಿ ಹಾಗೂ ಪಾಲಿಕೆ ಅಧಿಕಾರಿಗಳು ಸಭೆ ಮಾಡುತ್ತಿದ್ದಾರೆ.
ಕುಡಿಯುವ ನೀರಿನ ದಂಧೆ ತಡೆಯಲು ಕೊಳವೆಬಾವಿ ಹಾಗೂ ಅವುಗಳಿಂದ ನೀರು ಪೂರೈಕೆ ಮಾಡುವ ಟ್ಯಾಂಕರ್ ಗಳು ಮಾ.7 ರ ಒಳಗಾಗಿ ನೋಂದಣಿ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದೇವೆ.
ಕೊಳವೆ ಬಾವಿಗಳ ಮೂಲಕ ಬೆಂಗಳೂರಿನ ಕುಡಿಯುವ ನೀರಿನ ಅಭಾವ ನೀಗಿಸುತ್ತೇವೆ. ಈ ವಿಚಾರವಾಗಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಭೆ ಕರೆಯಲಾಗಿದೆ. ಇನ್ನು ನನ್ನ ಇಲಾಖೆ ಅನುದಾನದಿಂದ ಬೆಂಗಳೂರಿನ ಎಲ್ಲಾ ಕ್ಷೇತ್ರಗಳ ಕುಡಿಯುವ ನೀರಿನ ಪೂರೈಕೆಗೆ ತಲಾ 10 ಕೋಟಿ ರೂ. ನೀಡಲಾಗಿದೆ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ