*ಕಪಿಲೇಶ್ವರನ ಮೊರೆ ಹೋದ ಡಿಸಿಎಂ: ಶಿವನಿಗೆ 111 ಲೀಟರ್ ಹಾಲಿನಿಂದ ಕ್ಷೀರಾಭಿಷೇಕ, ವಿಶೇಷ ಪೂಜೆ ಸಲ್ಲಿಕೆ*
ಪ್ರಗತಿವಾಹಿನಿ ಸುದ್ದಿ: ಗಾಂಧಿ ಭಾರತ ಕಾರ್ಯಕ್ರಮ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಬೀಡುಬಿಟ್ಟಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಕಪಿಲೇಶ್ವರ ದೇವರ ಮೊರೆ ಹೋಗಿದ್ದು, ವಿಶೇಷ ಪೂಜೆ ಸಲ್ಲಿಸಿದ್ದಾರೆ.
ದಕ್ಷಿಣ ಕಾಶಿ ಎನಿಸಿರುವ ಬೆಳಗಾವಿಯ ಕಪಿಲೇಶ್ವರ ದೇಗುಲದಲ್ಲಿ ಕೆಪಿಸಿಸಿ ಅಧ್ಯಕ್ಷರೂ ಆದ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಭಾನುವಾರ ಪೂಜೆ ಸಲ್ಲಿಸಿದರು. ಕ್ಷೀರಾಭಿಷೇಕಕ್ಕೆ 111 ಲೀಟರ್ ಹಾಲು ಸಮರ್ಪಿಸಿದರು.
ಕಾರ್ಯಕ್ರಮದ ಯಶಸ್ಸಿಗಾಗಿ ಹಾಗೂ ತಮ್ಮ ರಕ್ಷಣೆಗಾಗಿ ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ಬೆಳಗಾವಿಯ ಕಪಿಲೇಶ್ವರ ದೇವಸ್ಥಾನದಲ್ಲಿ ಸ್ವತಃ ಡಿಸಿಎಂ ಡಿ.ಕೆ.ಶಿವಕುಮಾರ್, ಶಿವಲಿಂಗಕ್ಕೆ ಪಂಚಾಮೃತ ಅಭಿಷೇಕ, ಕ್ಷೀರಾಭಿಷೇಕ ಮಾಡಿ ವಿಶೇಷ ಪೂಜೆ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಬೆಳಗಾವಿಯಲ್ಲಿ ಐತಿಹಾಸಿಕ ಕಾರ್ಯಕ್ರಮ ನಡೆಯುತ್ತಿದೆ. ಜೈ ಬಾಪು, ಜೈ ಭೀಮ್ ಸಮಾವೇಶ ಯಶಸ್ವಿಯಾಗಬೇಕು ಎಂದು ಪೂಜೆ ಸಲ್ಲಿಸಿದ್ದೇನೆ. ನಮಗೂ ರಕ್ಷಣೆ ಬೇಕು ಹಾಗಾಗಿ ಪೂಜೆ ನೆರವೇರಿಸಿದ್ದೇನೆ. ನಾನು ದೈವ ಭಕ್ತ. ಪೂಜೆ ಮಾಡದೆಯೇ ಮನೆಯಿಂದಲೂ ಹೊರಬರುವುದಿಲ್ಲ. ಕೆಲ ದಿನಗಳಿಂದ ಪೂಜೆ ಮಾಡಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಇಂದು ಕಪಿಲೇಶ್ವರ ದೇವಸ್ಥಾನದಲ್ಲಿ ಈಶ್ವರನಿಗೆ ವಿಶೇಷವಾಗಿ ಪೂಜೆ ಸಲ್ಲಿಸಿದ್ದೇನೆ. ನಮಗೂ ರಕ್ಷಣೆ ಬೇಕು. ರಾಜ್ಯದ ಜನತೆಗೂ ರಕ್ಷಣೆ, ಶಾಂತಿ-ನೆಮ್ಮದಿ ಬೇಕು. ಎಲ್ಲರಿಗೂ ಒಳ್ಳೆಯದಾಗಬೇಕು. ಹಾಗಾಗಿ 111 ಲೀಟರ್ ಹಾಲಿನಿಂದ ಕ್ಷೀರಾಭಿಷೇಕ ಮಾಡಿದ್ದೇನೆ. ಭಗವಂತನಲ್ಲಿ ಭಕ್ತಿಪೂರ್ವಕವಾಗಿ ಪ್ರಾರ್ಥಿಸಿದ್ದೇನೆ ಎಂದು ಹೇಳಿದರು.
ಸಚಿವ ಡಾ ಎಂ ಸಿ ಸುಧಾಕರ್, ಎಂಎಲ್ಸಿ ಚನ್ನರಾಜ ಹಟ್ಟಿಹೊಳಿ ಮೊದಲಾದವರು ಜತೆಗಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ