
ಪ್ರಗತಿವಾಹಿನಿ ಸುದ್ದಿ: “ಕಾವೇರಿ ಐದನೇ ಹಂತದ ಕುಡಿಯುವ ನೀರಿನ ಯೋಜನೆಯಿಂದ ಬೆಂಗಳೂರಿನ 50 ಲಕ್ಷ ಜನರಿಗೆ ಅನುಕೂಲವಾಗಲಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಸದಾಶಿವನಗರ ನಿವಾಸದ ಬಳಿ ಶಿವಕುಮಾರ್ ಅವರು ಮಾಧ್ಯಮಗಳಿಗೆ ಶನಿವಾರ ಈ ವಿಚಾರ ತಿಳಿಸಿದರು.
“ಅಕ್ಟೊಬರ್ 16ರಂದು ಬೆಂಗಳೂರಿಗೆ ಬಹಳ ವಿಶೇಷವಾದ ದಿನ. ಕಾವೇರಿ ಕುಡಿಯುವ ನೀರಿನ ಐದನೇ ಹಂತದ ಯೋಜನೆ ಜಾರಿಯಾಗುತ್ತಿದೆ. ಇಷ್ಟು ದಿನ ಬೆಂಗಳೂರಿಗೆ ನಾಲ್ಕು ಹಂತಗಳ ಯೋಜನೆಯಲ್ಲಿ ಕುಡಿಯುವ ನೀರನ್ನು ಪೂರೈಸಲಾಗುತ್ತಿತ್ತು. ಈ ಯೋಜನೆ ಜಾರಿಗೆ ಇದ್ದ ಅಡಚಣೆ ನಿವಾರಿಸಿಕೊಂಡು ಬಂದಿದ್ದು, ಕಾಮಗಾರಿಯ ವೀಕ್ಷಣೆ ಮಾಡಿಕೊಂಡು ಬಂದಿದ್ದೇನೆ. ಇದೇ 16 ರಂದು ತೊರೆಕಾಡನಹಳ್ಳಿಯಲ್ಲಿ ಯೋಜನೆಗೆ ಚಾಲನೆ ನೀಡಲಾಗುವುದು. ನಂತರ ಬೆಂಗಳೂರಿನ ಮನೆ ಮನೆಗೆ ಕಾವೇರಿ ಪೂರೈಸಲಾಗುವುದು” ಎಂದು ತಿಳಿಸಿದರು.
ಕೇಂದ್ರದ ಅನ್ಯಾಯದ ವಿರುದ್ಧ ಹೋರಾಟ:
ಕೇಂದ್ರ ಸರ್ಕಾರದ ತೆರಿಗೆ ಹಂಚಿಕೆ ಬಗ್ಗೆ ಕೇಳಿದಾಗ, “ತೆರಿಗೆ ಪಾಲು ಹಂಚಿಕೆಯಲ್ಲಿ ಕರ್ನಾಟಕಕ್ಕೆ ಬಹಳ ಅನ್ಯಾಯ ಮಾಡಲಾಗುತ್ತಿದೆ. ಉತ್ತರ ಪ್ರದೇಶ, ಉತ್ತರ ಭಾರತದ ರಾಜ್ಯಗಳು ಹಾಗೂ ಆಂಧ್ರಪ್ರದೇಶಕ್ಕಿಂತ ನಮಗೆ ಬಹಳ ಕಡಿಮೆ ಅನುದಾನ ಸಿಕ್ಕಿದೆ. ಆಂಧ್ರ ಪ್ರದೇಶದಿಂದ ಹೆಚ್ಚು ತೆರಿಗೆ ಹೋಗುವುದೇ ಇಲ್ಲ. ಅವರಿಗಿಂತ ನಮಗೆ ಕಡಿಮೆ ಪಾಲು ಸಿಗುತ್ತಿದೆ. ಇದರ ವಿರುದ್ಧ ಮುಂದಿನ ದಿನಗಳಲ್ಲಿ “ನಮ್ಮ ತೆರಿಗೆ ನಮ್ಮ ಹಕ್ಕು” ಹೋರಾಟ ಮಾಡುತ್ತೇವೆ. ಈ ಅನ್ಯಾಯದ ಬಗ್ಗೆ ಕೇಂದ್ರ ಸಚಿವರು ಹಾಗೂ ಬಿಜೆಪಿ ಸಂಸದರು ಯಾಕೆ ಧ್ವನಿ ಎತ್ತಿಲ್ಲ? ನಮ್ಮ ರಾಜ್ಯದಿಂದ ಆಯ್ಕೆಯಾಗಿರುವ ನಿರ್ಮಲಾ ಸೀತರಾಮನ್ ಅವರು ಹಣಕಾಸು ಮಂತ್ರಿಯಾಗಿ, ನಮ್ಮ ರಾಜ್ಯದ 3-4 ಕೇಂದ್ರ ಸಚಿವರಿದ್ದರೂ ಅವರು ನಮ್ಮ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ನೋಡಿಕೊಂಡು ಕೂತಿದ್ದಾರಲ್ಲಾ ಇದು ನಿಜಕ್ಕೂ ಆಘಾತಕಾರಿ. ಮನಮೋಹನ್ ಸಿಂಗ್ ಕಾಲದಲ್ಲಿ ಎಷ್ಟು ಬಂದಿತ್ತು, ಈಗ ಎಷ್ಟು ಬಂದಿದೆ ಎಂಬುದನ್ನು ವಿಧಾನಸಭೆಯಲ್ಲಿ ಚರ್ಚೆ ಮಾಡೋಣ, ಈಗ ನಮ್ಮ ಹೋರಾಟಕ್ಕೆ ಬಿಜೆಪಿ ನಾಯಕರು ಕೈ ಜೋಡಿಸಲಿ” ಎಂದು ತಿಳಿಸಿದರು.
ಜಾಹೀರಾತು ವಿಚಾರವಾಗಿ ಬಿಜೆಪಿ ಟೀಕೆ ಬಗ್ಗೆ ಕೇಳಿದಾಗ, “ನಮಗೆ ಬಂದಿರುವ ಮಾಹಿತಿಯನ್ನು ನಮ್ಮದೇ ಆದ ಭಾವನೆ ಮೂಲಕ ಜನರಿಗೆ ತಿಳಿಸಿದ್ದೇವೆ. ಉಳಿದ ವಿಚಾರವನ್ನು ವಿಧಾನಸಭೆಯಲ್ಲಿ ಚರ್ಚೆ ಮಾಡೋಣ” ಎಂದು ತಿಳಿಸಿದರು.
ತಾಯಿ ಆಶೀರ್ವಾದದಿಂದ ಮಳೆಯಾಗಿ ಅಣೆಕಟ್ಟು ತುಂಬಿವೆ:
“ಮೈಸೂರು ದಸರಾ ಕಾರ್ಯಕ್ರಮವನ್ನು ಬಹಳ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತಿದೆ. ನಾಡದೇವಿ ತಾಯಿ ಚಾಮುಂಡೇಶ್ವರಿ ಆಶೀರ್ವಾದದಿಂದ ನಾಡಿನಲ್ಲಿ ಉತ್ತಮ ಮಳೆಯಾಗಿದೆ. ನೀರಿಗಾಗಿ ಜನರು ಹಾಗೂ ತಮಿಳುನಾಡು ವಿರುದ್ಧದ ಹೋರಾಟ ನಿಂತಿದೆ. ರಾಜ್ಯದ ಎಲ್ಲಾ ಅಣೆಕಟ್ಟುಗಳು ತುಂಬಿವೆ.
ತಾಯಿ ಆಶೀರ್ವಾದದಿಂದ ನಾವು ಕೇವಲ ಆರು ದಿನಗಳಲ್ಲಿ ತುಂಗಭದ್ರಾ ಅಣೆಕಟ್ಟಿನ ಗೇಟ್ ದುರಸ್ತಿ ಮಾಡಿದ್ದೇವೆ. ಮತ್ತೆ ಅಣೆಕಟ್ಟು ತುಂಬಿ ಬಾಗಿನ ಅರ್ಪಣೆ ಮಾಡಿದ್ದೇವೆ.
ದೀಪಾಲಂಕಾರ 10-12 ದಿನಗಳ ಕಾಲ ವಿಸ್ತರಣೆ:
ಮೈಸೂರು ದಸರಾಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಮೈಸೂರಿನ ವಿದ್ಯುತ್ ದೀಪಾಲಂಕಾರವನ್ನು 10-12 ದಿನಗಳವರೆಗೆ ವಿಸ್ತರಣೆ ಮಾಡಲಾಗಿದೆ. ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಈ ವ್ಯವಸ್ಥೆ ಮಾಡಲಾಗಿದೆ. ನಾನು ಇಂಧನ ಸಚಿವನಾಗಿದ್ದಾಗ ಮಾಡಿದ್ದಕ್ಕಿಂತ ಈ ಬಾರಿ ಅತ್ಯುತ್ತಮವಾಗಿ ದೀಪಾಲಂಕಾರ ಮಾಡಲಾಗಿದೆ. ಅಲ್ಲದೆ ಒಂದೂವರೆ ಸಾವಿರ ಡ್ರೋನ್ ಗಳ ಶೋ ವ್ಯವಸ್ಥೆ ಮಾಡಲಾಗಿದೆ. ಸಾಂಸ್ಕೃತಿಕ ನಾಡಿನಲ್ಲಿ ನಮ್ಮ ಜನ ನಮ್ಮ ಸಂಸ್ಕೃತಿಯನ್ನು ಕಣ್ತುಂಬಿಕೊಂಡು ಆನಂದಿಸಲಿ ಎಂದು ಈ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕಳೆದ ಹತ್ತು ದಿನಗಳಲ್ಲಿ ಇಳಯರಾಜ, ಎ.ಆರ್ ರೆಹಮಾನ್ ಅವರ ಕಾರ್ಯಕ್ರಮಗಳಿಗೆ ಎರಡೂವರೆ ಲಕ್ಷ ಜನ ಸೇರಿದ್ದರು. ಈ ಸಂದರ್ಭದಲ್ಲಿ ನಾಡಿನ ಜನ ನೆಮ್ಮದಿ, ಶಾಂತಿಯಿಂದ ಬದುಕಲಿ ಎಂದು ಪ್ರಾರ್ಥನೆ ಮಾಡುತ್ತೇನೆ.
ನಾಡಿನ ವಿವಿಧ ಭಾಗಗಳಲ್ಲೂ ದಸರಾ ಕಾರ್ಯಕ್ರಮವನ್ನು ಬಹಳ ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ. ಮಡಿಕೇರಿಯಲ್ಲಿ ಮೈಸೂರಿಗಿಂತಲೂ ಹೆಚ್ಚಿನ ಹಣ ವ್ಯಯ ಮಾಡಿ ಸ್ತಬ್ಧಚಿತ್ರಗಳನ್ನು ಮಾಡಿದ್ದಾರೆ. ಇದನ್ನು ನೋಡಿ ನನಗೆ ಅಚ್ಚರಿಯಾಯಿತು” ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ