ಪ್ರಗತಿವಾಹಿನಿ ಸುದ್ದಿ: “ಶಕ್ತಿ ಯೋಜನೆಯಿಂದ ಮೆಟ್ರೋ ಪ್ರಯಾಣಿಕರ ಸಂಖ್ಯೆ ಹಾಗೂ ಆದಾಯ ಕುಸಿಯುತ್ತಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆ ಆಘಾತ ತಂದಿದೆ. ಮಾಹಿತಿ ಕೊರತೆಯಿಂದ ಅವರು ಈ ರೀತಿಯ ಹೇಳಿಕೆ ನೀಡಿದ್ದಾರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಡಿ.ಕೆ. ಶಿವಕುಮಾರ್ ಅವರು ಶನಿವಾರ ಮಾತನಾಡಿದರು.
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸಿರುವುದರಿಂದ ಮೆಟ್ರೋ ಆದಾಯ ಕುಸಿದಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆ ಬಗ್ಗೆ ಕೇಳಿದಾಗ ಅವರು ಹೇಳಿದ್ದಿಷ್ಟು:
“ಮೆಟ್ರೋ ಆದಾಯ ಹಾಗೂ ಶಕ್ತಿ ಯೋಜನೆ ಬಗ್ಗೆ ಪ್ರಧಾನಮಂತ್ರಿಗಳು ಪ್ರಸ್ತಾಪ ಮಾಡಿದ್ದಾರೆ. ಕಳೆದ ಒಂದು ವರ್ಷದಲ್ಲಿ ಮೆಟ್ರೋ 130 ಕೋಟಿ ರೂ. ಆದಾಯ ಗಳಿಸಿದೆ. ಮೆಟ್ರೋ ಪ್ರಯಾಣಿಕರ ಸಂಖ್ಯೆಯೂ ಶೇ. 30 ರಷ್ಟು ಏರಿಕೆ ಕಂಡಿದೆ. ನಮ್ಮ ರಾಜ್ಯದ ಪೈಕಿ ಬೆಂಗಳೂರಿನಲ್ಲಿ ಮಾತ್ರ ಮೆಟ್ರೋ ಇದೆ. ಶಕ್ತಿ ಯೋಜನೆ ಕರ್ನಾಟಕದಾದ್ಯಂತ ಜಾರಿ ಮಾಡಲಾಗಿದೆ. ನಾವು ಬಡವರ ಬಗ್ಗೆ ಆಲೋಚಿಸಿ ಈ ಯೋಜನೆ ಜಾರಿ ಮಾಡಿದ್ದೇವೆ.
ಕೋವಿಡ್ ಸಮಯದಲ್ಲಿ ಉಚಿತ ಬಸ್ ಪ್ರಯಾಣ ವ್ಯವಸ್ಥೆಗೆ ಒತ್ತಾಯ ಮಾಡಿದ್ದು ನಾವೇ. ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ಜನರಿಗೆ ನೆರವಾಗಲು ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೇವೆ. ಕಾಂಗ್ರೆಸ್ ಸರ್ಕಾರ ಬಂದ ನಂತರ ಮೊದಲು ಜಾರಿ ಮಾಡಿದ್ದು ಶಕ್ತಿ ಯೋಜನೆ. ಸಾರ್ವಜನಿಕರ ಅನುಕೂಲಕ್ಕೆ ಸಾರಿಗೆ ಇಲಾಖೆಯಿಂದ ಒಂದು ಸಾವಿರಕ್ಕೂ ಹೆಚ್ಚು ಹೊಸ ಬಸ್ ಗಳನ್ನು ಖರೀದಿ ಮಾಡಲಾಗಿದೆ. ಬಿಜೆಪಿಯವರಿಂದ ಇಂತಹ ಒಂದೇ ಒಂದು ಯೋಜನೆ ಜಾರಿ ಮಾಡಲು ಆಗಲಿಲ್ಲ. ತೆಲಂಗಾಣದಲ್ಲೂ ಈ ಯೋಜನೆ ಜಾರಿ ಮಾಡಿದ್ದೇವೆ. ನಮ್ಮ ಮೆಟ್ರೋದಲ್ಲಿ ಶೇ. 30 ರಷ್ಟು ಪ್ರಯಾಣಿಕರ ಸಂಖ್ಯೆ ಹಾಗೂ ಆದಾಯ ಹೆಚ್ಚಾಗಿದೆ. ಮೆಟ್ರೋದಲ್ಲಿ ಕೇಂದ್ರ ಹಾಗೂ ರಾಜ್ಯಸರ್ಕಾರಗಳು ಪಾಲುದಾರರು. ಆದರೂ ಪ್ರಧಾನಮಂತ್ರಿಗಳಿಗೆ ಈ ವಿಚಾರವಾಗಿ ಮಾಹಿತಿ ಕೊರತೆ ಇದೆ. ಯಾರೋ ಅವರಿಗೆ ತಪ್ಪು ಮಾಹಿತಿ ನೀಡಿದಂತಿದೆ.
ನಾವು ಶಕ್ತಿ ಯೋಜನೆ ಮೂಲಕ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸಿದರೂ ಕೆಎಸ್ಆರ್ ಟಿಸಿ ಹಾಗೂ ಮೆಟ್ರೋ ಸಂಸ್ಥೆಗಳನ್ನು ಸಮರ್ಥವಾಗಿ ನಡೆಸುತ್ತಿದ್ದೇವೆ. ಪ್ರಧಾನಮಂತ್ರಿಗಳಿಗೆ ಮಾಧ್ಯಮಗಳ ಮೂಲಕ ಈ ಮಾಹಿತಿ ನೀಡಲು ಬಯಸುತ್ತೇನೆ. ನಮ್ಮ ಶಕ್ತಿ ಯೋಜನೆ ಬಗ್ಗೆ ಬೇರೆ ರಾಜ್ಯದವರು ಬಂದು ಮಾಹಿತಿ ಪಡೆಯುತ್ತಿದ್ದಾರೆ. ಈ ಯೋಜನೆ ಜನರಿಗೆ ಅನುಕೂಲ ತಂದಿದೆ, ಅವರ ವಿಶ್ವಾಸ ಗಳಿಸಿದೆ. ದಿನನಿತ್ಯ ರಾಜ್ಯದಲ್ಲಿ ಮಹಿಳೆಯರು 60 ಲಕ್ಷ ಟ್ರಿಪ್ ನಷ್ಟು ಉಚಿತ ಬಸ್ ಪ್ರಯಾಣ ಮಾಡುತ್ತಿದ್ದಾರೆ. ಮಹಿಳೆಯರು ಈ ಯೋಜನೆಯಿಂದ ತೃಪ್ತರಾಗಿ ಸಂತೋಷದಿಂದ ಪ್ರಯಾಣ ಮಾಡುತ್ತಿದ್ದಾರೆ” ಎಂದು ತಿಳಿಸಿದರು.
ಉತ್ತರ ಕರ್ನಾಟಕ ಭಾಗಗಳಲ್ಲಿ ಬಸ್ ಕೊರತೆ ಇದೆ ಎಂದು ಕೇಳಿದಾಗ, “ಈಗಾಗಲೇ ಸಾರಿಗೆ ಇಲಾಖೆ ವತಿಯಿಂದ 1 ಸಾವಿರ ಹೊಸ ಬಸ್ ಗಳನ್ನು ನಿಯೋಜಿಸಲು ಬುಕ್ ಮಾಡಲಾಗಿದೆ. ರಾಮನಗರಕ್ಕೆ 100 ಬಸ್ ನಿಯೋಜಿಸಲಾಗಿದೆ. ಬೆಂಗಳೂರು, ಉತ್ತರ ಕರ್ನಾಟಕದ ಭಾಗಗಳಿಗೂ ಬಸ್ ಹಂಚಿಕೆ ಮಾಡುತ್ತೇವೆ. ಕೆಎಸ್ ಆರ್ ಟಿಸಿಯಲ್ಲಿ ನಾವು ಲಾಭ ನೋಡುತ್ತಿಲ್ಲ. ನಮಗೆ ನಷ್ಟ ಆಗದಿದ್ದರೆ ಸಾಕು. ಇನ್ನು ಸರ್ಕಾರ ಮಹಿಳೆಯರ ಪ್ರಯಾಣದ ವೆಚ್ಚವನ್ನು ಭರಿಸುತ್ತಿದೆಯೇ ಹೊರತು ಸಾರಿಗೆ ಸಂಸ್ಥೆಗಳಿಂದ ವೆಚ್ಚ ಭರಿಸುತ್ತಿಲ್ಲ. ”
ಲೋಕಸಭೆಯಲ್ಲಿ ನಿಮ್ಮ ಸಂಖ್ಯೆಗಳೆಷ್ಟು ಎಂಬ ಪ್ರಶ್ನೆಗೆ, “ಉತ್ತರ ಭಾರತದ ರಾಜ್ಯಗಳಲ್ಲೂ ಚುನಾವಣೆ ಉತ್ತಮವಾಗಿ ನಡೆಯುತ್ತಿದ್ದು ಜನ ಬದಲಾವಣೆ ಬಯಸಿದ್ದಾರೆ. ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ 20 ಸ್ಥಾನಗಳ ಆಸುಪಾಸು ಕ್ಷೇತ್ರಗಳನ್ನು ಗೆಲ್ಲಲಿದೆ. ನಮ್ಮ ಗ್ಯಾರಂಟಿ ಏಟು ಏನು ಎಂದು ಗೊತ್ತಿಲ್ಲ. ಬಿಜೆಪಿಯವರು ನಮ್ಮ ಗ್ಯಾರಂಟಿ ನೋಡಿ ಗಾಬರಿಯಾಗಿದ್ದಾರೆ” ಎಂದರು.
ದೇವರಾಜೇಗೌಡ ಮೆಂಟಲ್ ಕೇಸ್, ದಾಖಲೆಗಳಿದ್ದರೆ ಲೋಕಾಯುಕ್ತಕ್ಕೆ ದೂರು ನೀಡಲಿ:
ಪೆನ್ ಡ್ರೈವ್ ಪ್ರಕರಣದಲ್ಲಿ ದೇವರಾಜೇಗೌಡ ಮತ್ತೆ ನಿಮ್ಮ ಹೆಸರು ಪ್ರಸ್ತಾಪ ಮಾಡಿ 100 ಕೋಟಿ ಆಮಿಷ ಒಡ್ಡಿರುವುದಾಗಿ ಹೇಳಿದ್ದಾರೆ ಎಂದು ಕೇಳಿದಾಗ, “ದೇವರಾಜೇಗೌಡನ ಬಳಿ ಆರೋಪಗಳ ಬಗ್ಗೆ ದಾಖಲೆ ಇದ್ದರೆ ಲೋಕಾಯುಕ್ತಕ್ಕೆ ದೂರು ನೀಡಲಿ. ಆತ ಮಾನಸಿಕ ಸಮಸ್ಯೆ ಎದುರಿಸುತ್ತಿರಬೇಕು. ಅವನಂತಹ ಮೆಂಟಲ್ ಗಿರಾಕಿ ಹೇಳಿಕೆಗಳಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಅವನು ಏನಾದರೂ ಮಾತನಾಡಲಿ, ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನನಗೆ ನಿಮ್ಮ (ಮಾಧ್ಯಮ) ಬಗ್ಗೆ ಅನುಕಂಪವಿದೆ. ಮಾಧ್ಯಮದವರು ವಿದ್ಯಾವಂತರು, ಪ್ರಜ್ಞಾವಂತರಿದ್ದೀರಿ. ಯಾರೋ ಏನೋ ಹೇಳುತ್ತಾರೆ ಎಂದು ಇಂತಹ ವಿಚಾರ ಹಾಕಿಕೊಂಡು ಕೂತರೆ, ನಿಮ್ಮ ಘನತೆ ಏನಾಗಬೇಕು. ಅವನ ಹೇಳಿಕೆಯಲ್ಲಿ ಸತ್ಯ ಇದೆಯೇ, ಇಲ್ಲವೆ ಎಂದು ಪರಿಶೀಲಿಸಬೇಕಲ್ಲವೇ? ಯಾರಾದರೂ ಆರೋಪ ಮಾಡುವಾಗ ಅದಕ್ಕೆ ಆಧಾರ ಇರಬೇಕಲ್ಲವೇ? ತಲೆಕೆಟ್ಟು, ಆಸ್ಪತ್ರೆ ಸೇರಬೇಕಾದವರ ಮಾತಿಗೆ ಇಷ್ಟು ಪ್ರಾಮುಖ್ಯತೆ ನೀಡುವುದು ಸರಿಯಲ್ಲ” ಎಂದು ತಿಳಿಸಿದರು.
ನೀವು ಆ ವ್ಯಕ್ತಿ ಜತೆ ಮಾತನಾಡಿರುವುದಕ್ಕೆ ಮಾಧ್ಯಮಗಳು ಆ ವ್ಯಕ್ತಿಯನ್ನು ಗಂಭೀರವಾಗಿ ಪರಿಗಣಿಸಿವೆ ಎಂದು ಕೇಳಿದಾಗ, “ನಾನು ಆ ವ್ಯಕ್ತಿ ಜತೆ ವಿಶೇಷವಾಗಿ ಮಾತನಾಡಿಲ್ಲ. ನಾನು ಡಿಸಿಎಂ ಆಗಿದ್ದು ನೂರಾರು ಜನ ಬಂದು ನಮ್ಮನ್ನು ಸಂಪರ್ಕಿಸುತ್ತಾರೆ. ಒಳ್ಳೆಯವರು, ಕೆಟ್ಟವರು ಎಲ್ಲರೂ ಬರುತ್ತಾರೆ. ನನ್ನ ಬಳಿ ಬಂದು ಮಾತನಾಡುತ್ತೇನೆ ಎನ್ನುವವರನ್ನು ಬೇಡ ಎಂದು ಹೇಳಲು ಆಗುವುದಿಲ್ಲ. ನನ್ನ ಬಳಿ ಬರುವವರನ್ನು ಸತ್ಯವಂತರು, ಸುಳ್ಳು ಹೇಳುವವರು ಎಂದು ಪರಿಶೀಲಿಸಿಕೊಂಡು ಕೂರಲು ಸಾಧ್ಯವೇ. ಯಾವ ಹುತ್ತದಲ್ಲಿ ಯಾವ ಹಾವಿರುತ್ತದೆಯೋ ಗೊತ್ತಿಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ, ಮಾತನಾಡಿಲ್ಲ. ಹೀಗಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ. ನನಗೆ ನನ್ನದೇ ಆದ ಕೆಲಸ ಕಾರ್ಯಗಳಿವೆ. ನಮ್ಮ ಹೆಸರು ಬಳಸಿಕೊಂಡರೆ ಕೆಲವರಿಗೆ ಮಾರ್ಕೆಟ್ ಸಿಗುತ್ತದೆ. ಹೀಗಾಗಿ ಬಳಸಿಕೊಳ್ಳುತ್ತಾರೆ” ಎಂದರು.
ಪೆನ್ ಡ್ರೈವ್ ಪ್ರಕರಣದಲ್ಲಿ ಹಲವರು ಭಾಗಿಯಾಗಿದ್ದು, ಎಲ್ಲರ ವಿರುದ್ಧ ಕ್ರಮ ಜರುಗಿಸಬೇಕು ಎಂಬ ದೇವೇಗೌಡರ ಹೇಳಿಕೆ ಬಗ್ಗೆ ಕೇಳಿದಾಗ, “ದೇವೇಗೌಡರು ಜನ್ಮದಿನ ಪ್ರಯುಕ್ತ ದೇವಾಲಯಕ್ಕೆ ಹೋಗಿದ್ದಾರೆ. ಅವರಿಗೆ ಉತ್ತಮ ಆರೋಗ್ಯ, ನೆಮ್ಮದಿ, ಸಂತೋಷ ಸಿಗಲಿ. ಅವರ ದುಃಖ ದೂರವಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಸರ್ಕಾರದ ಪರವಾಗಿ ಹಾಗೂ ವೈಯಕ್ತಿಕವಾಗಿ ತುಂಬು ಹೃದಯದಿಂದ ಅವರಿಗೆ ಜನ್ಮದಿನದ ಶುಭಾಶಯ ಕೋರುತ್ತೇನೆ.” ಎಂದರು.
ಪ್ರಜ್ವಲ್ ರೇವಣ್ಣ ಇನ್ನು ಬಂಧನವಾಗಿಲ್ಲ, ಸಂತ್ರಸ್ತೆಯರಿಗೆ ನ್ಯಾಯ ಸಿಗುತ್ತದೆಯೇ ಎಂದು ಕೇಳಿದಾಗ, “ಇಷ್ಟು ದಿನವೂ ಪೆನ್ ಡ್ರೈವ್ ಬಗ್ಗೆ ಚರ್ಚೆಯಾಗುತ್ತಿದೆಯೇ ಹೊರತು ಸಂತ್ರಸ್ತೆಯರ ಬಗ್ಗೆ, ಅವರಿಗಾಗಿರುವ ಅನ್ಯಾಯದ ಬಗ್ಗೆ ಯಾರೂ ಚರ್ಚೆ ಮಾಡುತ್ತಿಲ್ಲ. ಎಸ್ಐಟಿ ಸಮರ್ಥವಾಗಿ ತನಿಖೆ ನಡೆಸಿ ಸಂತ್ರಸ್ತೆಯರಿಗೆ ನ್ಯಾಯ ಒದಗಿಸಲಿದೆ ಎಂಬ ವಿಶ್ವಾಸ ನನಗಿದೆ. ಸಂತ್ರಸ್ತೆಯರಿಗೆ ನ್ಯಾಯ ಒದಗಿಸಿಕೊಡುವುದು ನಮ್ಮ ಕರ್ತವ್ಯ” ಎಂದರು.
ಬಿಡಿಎ ಕಾಂಪ್ಲೆಕ್ಸ್ ವಿಚಾರದಲ್ಲಿ ಬಿಜೆಪಿ ಸರ್ಕಾರದ ತೀರ್ಮಾನವೇ ಜಾರಿಯಾಗುತ್ತಿದೆ
ಬಿಡಿಎ ಕಾಂಪ್ಲೆಕ್ಸ್ ಗಳನ್ನು ಒಡೆಯುತ್ತಿರುವ ಬಗ್ಗೆ ಕೇಳಿದಾಗ, “ಈ ವಿಚಾರವಾಗಿ ಅಶೋಕ್ ಅವರು ಮಾತನಾಡಿದ್ದು, ಈ ಪ್ರಕ್ರಿಯೆ ಯಾರ ಕಾಲದಲ್ಲಿ ಆರಂಭವಾಗಿದೆ, ಇದಕ್ಕೆ ಅನುಮತಿ ಕೊಟ್ಟವರು ಯಾರು ಎಂದು ಅವರು ಮರೆತಿದ್ದಾರೆ. ನನ್ನ ಬಳಿ ಈ ಬಗ್ಗೆ ಎಲ್ಲಾ ಮಾಹಿತಿ ಇದೆ. ಬೊಮ್ಮಾಯಿ ಅವರು ಈ ಹಿಂದೆ ಒಪ್ಪಂದ ಮಾಡಿಕೊಂಡು ಟೆಂಡರ್ ಕರೆದಿದ್ದರು. ಯಡಿಯೂರಪ್ಪ ಅವರು ಇದನ್ನು ತಡೆಹಿಡಿಯಲು ಹೇಳಿದ್ದರು. ನಂತರ ಬೊಮ್ಮಾಯಿ ಅವರು ಮುಖ್ಯಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ಮಾಡಿ, ಒಪ್ಪಂದ ಮಾಡಿಕೊಂಡಿಯಾಗಿದೆ, ನಮಗೆ ನಷ್ಟವಾಗುತ್ತಿದ್ದು ಈ ಪ್ರಕ್ರಿಯೆ ಮುಂದುವರಿಸಬೇಕು ಎಂದು ಪತ್ರ ಕೂಡ ಬರೆದಿದ್ದಾರೆ. ಅವರ ಕಾಲದಲ್ಲಿ ಆಗಿರುವ ಕ್ರಮ ಈಗ ಮುಂದುವರಿಯುತ್ತಿದೆ. ಈಗ ಬೋಗ್ಯಕ್ಕೆ ಕೊಡಲಾಗಿದ್ದು, ಸರ್ಕಾರಕ್ಕೆ ಆದಾಯ ಬರುವಂತೆ ವ್ಯವಸ್ಥೆ ಮಾಡಲಾಗಿದೆ. ಈ ವಿಚಾರದ ಬಗ್ಗೆ ಪ್ರತ್ಯೇಕವಾಗಿ ಹೇಳಿಕೆ ಬಿಡುಗಡೆ ಮಾಡುತ್ತೇನೆ. ಈ ವಿಚಾರವಾಗಿ ಅಶೋಕ್ ಅವರಿಗೆ ಎಷ್ಟು ಮಾಹಿತಿ ಇದೆಯೋ ಇಲ್ಲವೋ ಗೊತ್ತಿಲ್ಲ. ಅವರಿಗೆ ಸಂಪೂರ್ಣ ಮಾಹಿತಿ ರವಾನಿಸುತ್ತೇನೆ” ಎಂದರು.
ಹುಬ್ಬಳ್ಳಿಯಲ್ಲಿ ಅಂಜಲಿ ಹತ್ಯೆ ಪ್ರಕರಣ ವಿಚಾರವಾಗಿ ಬಿಜೆಪಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಟೀಕೆ ಮಾಡುತ್ತಿರುವ ಬಗ್ಗೆ ಕೇಳಿದಾಗ, “ಬಿಜೆಪಿ ಇರುವುದೇ ಆರೋಪ ಮಾಡಲು, ಸರ್ಕಾರಕ್ಕೆ ಕೆಟ್ಟ ಹೆಸರು ತರಲು. ಅವರ ಹುಳುಕು ಮುಚ್ಚಿಹಾಕಿ ಕಾಂಗ್ರೆಸ್ ಬಗ್ಗೆ ಟೀಕೆ ಮಾಡುವುದು ಅವರ ಕೆಲಸವಾಗಿದೆ. ನಾವು ಸಮರ್ಥವಾಗಿ ಸರ್ಕಾರ ನಡೆಸುತ್ತಿರುವುದನ್ನು ಅವರಿಂದ ಸಹಿಸಿಕೊಳ್ಳಲು ಆಗುತ್ತಿಲ್ಲ” ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ