Politics

*ಬಿಜೆಪಿ-ಜೆಡಿಎಸ್ ನಾಯಕರ ಟೀಕೆಗಳಿಗೆ ತಿರುಗೇಟು ನೀಡಿದ ಡಿಸಿಎಂ*

ಪ್ರಗತಿವಾಹಿನಿ ಸುದ್ದಿ: “ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಭವಿಷ್ಯವಿದೆ ಎಂದು ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರಿಗೆ ಅರಿವಾಗಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ವಿಧಾನಸೌಧದ ಆವರಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಸೋಮವಾರ ಪ್ರತಿಕ್ರಿಯೆ ನೀಡಿದರು.

ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು, ನಾಯಕರ ಸಹಕಾರ ಸಿಕ್ಕಿದೆ ಎಂದು ಹೇಳಿದ್ದು, ಎನ್ ಡಿಎ ಮೈತ್ರಿಕೂಟವನ್ನು ಜನ ತಿರಸ್ಕರಿಸಿದ್ದಾರಾ ಎಂಬ ಹೇಳಿಕೆ ಬಗ್ಗೆ ಕೇಳಿದಾಗ, “ಕಳೆದ ವರ್ಷದ ವಿಧಾನಸಭೆ ಚುನಾವಣೆ ಫಲಿತಾಂಶಕ್ಕೂ ಈ ಉಪಚುನಾವಣೆಯಲ್ಲಿ ಈ ಕ್ಷೇತ್ರಗಳಲ್ಲಿನ ಮತಗಳ ಅಂತರವನ್ನು ಗಮನಿಸಿ. ಬಸವರಾಜ ಬೊಮ್ಮಾಯಿ ಅವರ ಕ್ಷೇತ್ರದಲ್ಲಿ 50 ಸಾವಿರ ಮತಗಳು ಬದಲಾಗಿವೆ. ಚನ್ನಪಟ್ಟಣದಲ್ಲಿ ವಿಧಾನಸಭೆ ಚುನಾವಣೆಯಲ್ಲಿ .ಕಾಂಗ್ರೆಸ್ ಅಭ್ಯರ್ಥಿ 16 ಸಾವಿರ ಮತಗಳನ್ನು ಪಡೆದಿದ್ದರು. ಈ ಉಪಚುನಾವಣೆಯಲ್ಲಿ 1.12 ಲಕ್ಷ ಮತಗಳನ್ನು ಪಡೆದಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ನಮಗೆ ಮತ ಹಾಕದಿದ್ದರೆ ಇಷ್ಟು ಪ್ರಮಾಣದಲ್ಲಿ ಮತಗಳು ವ್ಯತ್ಯಾಸವಾಗುತ್ತಿತ್ತೇ? ಆಮೂಲಕ ಜನ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಕೂಟವನ್ನು ತಿರಸ್ಕರಿಸಿದ್ದಾರೆ” ಎಂದು ತಿಳಿಸಿದರು.

ತಮ್ಮ ಹುಳುಕು ಮುಚ್ಚಿಕೊಳ್ಳಲು ಬಿಜೆಪಿ ಹೋರಾಟ:

ಬಿಜೆಪಿ ಅವಧಿಯಲ್ಲಿ ವಕ್ಫ್ ಆಸ್ತಿ ವಿಚಾರವಾಗಿ ನೋಟೀಸ್ ನೀಡಿ ಈಗ ಅವರೇ ಹೋರಾಟ ಮಾಡುತ್ತಿರುವ ಬಗ್ಗೆ ಕೇಳಿದಾಗ, “ಅವರಿಗೆ ಬೇಕಾಗಿರುವುದು ಕೇವಲ ಪ್ರಚಾರ. ಅವರು ಪ್ರತಿಭಟನೆ ಮಾಡಿದಷ್ಟು ನಮಗೆ ಒಳ್ಳೆಯದು. ಅವರು ತಮ್ಮ ಮುಖಗಳನ್ನು ಕನ್ನಡಿಯಲ್ಲಿ ನೋಡಿಕೊಳ್ಳಲಿ ಎಂದು ಹೇಳಿದ್ದೇನೆ. ಗೋಮುಖ ವ್ಯಾಘ್ರರ ಸತ್ಯಾಂಶವನ್ನು ನಾವು ಬಿಚ್ಚಿಡುತ್ತೇವೆ. ಚನ್ನಪಟ್ಟಣ ಉಪಚುನಾವಣೆ ಸಂದರ್ಭದಲ್ಲಿ ಅಲ್ಲಿನ ಜನ ಪಹಣಿಯಲ್ಲಿ ವಕ್ಫ್ ನಮೂದಾಗಿರುವ ವಿಚಾರವಾಗಿ ಅರ್ಜಿ ತೆಗೆದುಕೊಂಡು ಹೋಗುತ್ತಿದ್ದರು. ನಾನು ಅದನ್ನು ಪರಿಶೀಲಿಸಿದಾಗ 2020ರಲ್ಲಿ ಅವರ ಪಹಣಿ ತಿದ್ದುಪಡಿಯಾಗಿದೆ. ಈಗ ಅದನ್ನು ಮನೆ ಮನೆಗೆ ತೋರಿಸುತ್ತಿದ್ದಾರೆ. ಬಿಜೆಪಿಯವರು ತಮ್ಮ ಆಂತರಿಕ ಹುಳುಕು ಮುಚ್ಚಿಕೊಳ್ಳಲು ಈ ವಿಚಾರವಾಗಿ ಹೋರಾಟ ಮಾಡುತ್ತಿದ್ದಾರೆ. ಜನ ಅವರಿಗೆ ತಕ್ಕ ಪಾಠ ಕಲಿಸಿದ್ದಾರೆ” ಎಂದು ತಿಳಿಸಿದರು.

ಬಿಜೆಪಿಯಲ್ಲಿ ಬಣ ರಾಜಕೀಯ ಹೆಚ್ಚಾಗಿದ್ದು, ಅವರವರೇ ಪರಸ್ಪರ ದೂರು ನೀಡುತ್ತಿದ್ದಾರೆ ಎಂದು ಕೇಳಿದಾಗ, “ಅವರೇ ಈ ವಿಚಾರ ತೀರ್ಮಾನ ಮಾಡಿಕೊಳ್ಳಬೇಕು. ಅವರ ಪಕ್ಷದಲ್ಲಿ ಎಷ್ಟೇ ಗುಂಪಿದ್ದರೂ ನಮ್ಮ ಲೆಕ್ಕಕ್ಕೆ ಅವರು ಒಂದೇ ಗುಂಪು. ಜೆಡಿಎಸ್ ಚಿಹ್ನೆ ಬೇರೆಯಾದರೂ ಅವರೂ ಅದೇ ಗುಂಪು. ಜೆಡಿಎಸ್ ಅವರು ಕೂಡ ಅದೇ ಪ್ರಯತ್ನದಲ್ಲಿದ್ದಾರೆ. ಅವರು ಹೋರಾಟ ಮಾಡಿ ನಮಗೆ ಪ್ರಚಾರ ನೀಡುತ್ತಿದ್ದು, ಮಾಡಲಿ” ಎಂದು ತಿಳಿಸಿದರು.

ಮುಸಲ್ಮಾನರ ಮತ ಕೇಳುವ ನೈತಿಕತೆ ಇಲ್ಲ:

ಮುಸಲ್ಮಾನರು ಕೈಕೊಟ್ಟಿದ್ದಕ್ಕೆ ನಮಗೆ ಹಿನ್ನಡೆಯಾಯಿತು ಎಂಬ ನಿಖಿಲ್ ಹೇಳಿಕೆ ಬಗ್ಗೆ ಕೇಳಿದಾಗ, “ಕುಮಾರಸ್ವಾಮಿ ಬಿಜೆಪಿಯವರ ಜತೆ ಸೇರಿದರೆ ಮುಸಲ್ಮಾನರು ಹೇಗೆ ಮತ ಹಾಕುತ್ತಾರೆ. ಮುಸಲ್ಮಾನರನ್ನು ಎನ್ ಡಿಎ ಮೈತ್ರಿಕೂಟ ವಿಶ್ವಾಸಕ್ಕೆ ಪಡೆದಿಲ್ಲ. ಹೀಗಿರುವಾಗ ಅವರು ಯಾಕೆ ಮತ ಹಾಕುತ್ತಾರೆ. ನೀವು ಅವರಿಗೆ ನೆರವಾಗಿದ್ದರೆ, ಎನ್ ಡಿಎ ವತಿಯಿಂದ ಮುಸಲ್ಮಾನರಿಗೆ ಟಿಕೆಟ್ ನೀಡಿದ್ದಾರಾ? ಮಂತ್ರಿ ಮಾಡಿದ್ದಾರಾ? ಅವರಿಗಾಗಿ ಕಾರ್ಯಕ್ರಮ ಕೊಟ್ಟಿದ್ದಾರಾ? ಅವರಿಗಿದ್ದ 4% ಮೀಸಲಾತಿ ಕಿತ್ತುಕೊಂಡಿದ್ದೀರಿ. ನಿಮಗೆ ಅವರ ಮತ ಕೇಳುವ ನೈತಿಕತೆಯೇ ಇಲ್ಲ. ನಿಖಿಲ್ ಪಾಪ ಚಿಕ್ಕ ಹುಡುಗ. ಅವನ ಅನುಭವದ ಬಗ್ಗೆ ನಾನು ಮಾತನಾಡುವುದಿಲ್ಲ. ಈ ವಿಚಾರವಾಗಿ ದೊಡ್ಡ ಗೌಡರು ಮಾತನಾಡಬೇಕು” ಎಂದರು.

ಚಕ್ರವರ್ತಿಗಳೇ ಬಿದ್ದಿದ್ದಾರೆ:

ದೇಶದಲ್ಲಿ ಕಾಂಗ್ರೆಸ್ ಅವನತಿಯತ್ತ ಸಾಗುತ್ತಿದೆ ಎಂಬ ಜೆಡಿಎಸ್ ಟ್ವೀಟ್ ಬಗ್ಗೆ ಕೇಳಿದಾಗ, “ಅವರು ತಮ್ಮ ಪರಿಸ್ಥಿತಿ ಬಗ್ಗೆ ನೋಡಿಕೊಳ್ಳಲಿ. ನಾನು ಇಲ್ಲವಾದರೂ ಕಾಂಗ್ರೆಸ್ ಗೆ ಏನೂ ಆಗುವುದಿಲ್ಲ. ಯಾರೇ ಹೋದರೂ ಕಾಂಗ್ರೆಸ್ ಪಕ್ಷಕ್ಕೆ ಏನೂ ಆಗುವುದಿಲ್ಲ. ಕಾಂಗ್ರೆಸ್ ಇತಿಹಾಸ, ದೇಶದ ಇತಿಹಾಸ, ಕಾಂಗ್ರೆಸ್ ಪಕ್ಷ ತ್ಯಾಗ ಮಾಡಿ ಈ ದೇಶವನ್ನು ಒಗ್ಗಟ್ಟಾಗಿಟ್ಟಿದೆ. ಪ್ರಪಂಚದಲ್ಲಿ ದೊಡ್ಡ ದೊಡ್ಡ ಚಕ್ರವರ್ತಿಗಳೇ ಬಿದ್ದಿದ್ದಾರೆ. ಸದ್ದಾಂ ಹುಸೇನ್, ಪಾಕಿಸ್ತಾನದ ಕತೆ ಏನಾಯ್ತು ಎಂದು ಎಲ್ಲರಿಗೂ ಗೊತ್ತು” ಎಂದು ತಿಳಿಸಿದರು.

ಅಶೋಕಣ್ಣ ನನ್ನ ಮೇಲೆ ಕುಸ್ತಿಗೆ ಬಂದು ಎಷ್ಟು ಡೆಪಾಸಿಟ್ ತಗೊಂಡೆ?
ತಮ್ಮನನ್ನು ಗೆಲ್ಲಿಸಿಕೊಳ್ಳಲು ಆಗಲಿಲ್ಲ, ಚನ್ನಪಟ್ಟಣ ಗೆದ್ದ ಮಾತ್ರಕ್ಕೆ ಡಿ.ಕೆ. ಶಿವಕುಮಾರ್ ಒಕ್ಕಲಿಗ ನಾಯಕರೇ ಎಂಬ ಆರ್.ಅಶೋಕ್ ಹೇಳಿಕೆ ಬಗ್ಗೆ ಕೇಳಿದಾಗ, “ನಾನು ನಾಯಕ ಎಂದು ಯಾವತ್ತು ಹೇಳಿದ್ದೇನೆ? ಅಶೋಕಣ್ಣ, ನೀನು ಕನಕಪುರಕ್ಕೆ ಬಂದು ಎಷ್ಟು ಡೆಪಾಸಿಟ್ ತೆಗೆದುಕೊಂಡೆ? ಕಂದಾಯ ಸಚಿವರಾಗಿದ್ದುಕೊಂಡು ನನ್ನ ಮೇಲೆ ಕುಸ್ತಿ ಮಾಡಲು, ಡಿಚ್ಚಿ ಹೊಡೆಯಲು ಬಂದಿದ್ಯಲ್ಲ, ನಿನಗೆ ಎಷ್ಟು ಮತ ಬಂತು? ನನ್ನ ತಮ್ಮ ಸೋತಿರುವುದು ನಿಜ. ಅದಕ್ಕೆ ಕಾರಣವಾದ ಒಂದೊಂದೇ ಕೊಂಡಿಗಳು ಕಳಚಿಕೊಳ್ಳುತ್ತಿವೆಯಲ್ಲವೇ? ಆರ್ ಆರ್ ನಗರ, ಚನ್ನಪಟ್ಟಣ ಏನಾಗಿದೆ ಎಂದು ನಾನು ಈಗ ಮಾತನಾಡುವುದಿಲ್ಲ” ಎಂದು ತಿಳಿಸಿದರು.

ಕಾಂಗ್ರೆಸ್ ಹೈಕಮಾಂಡ್ ಅನುಮತಿ ಕೊಟ್ಟರೆ ಒಂದು ತಿಂಗಳಲ್ಲಿ ಜೆಡಿಎಸ್ ಶಾಸಕರನ್ನು ಕರೆ ತರುತ್ತೇನೆ ಎಂಬ ಯೋಗೇಶ್ವರ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ನನಗೆ ಆ ವಿಚಾರ ಗೊತ್ತಿಲ್ಲ” ಎಂದರು.

ಮನನೊಂದು ಜಿಟಿಡಿ ಹೇಳಿಕೆ

ಜಿ.ಟಿ ದೇವೇಗೌಡರ ನೇತೃತ್ವದಲ್ಲಿ ಆಪರೇಷನ್ ಮಾಡಲಾಗುವುದೇ ಎಂದು ಕೇಳಿದಾಗ, “ಜಿ.ಟಿ ದೇವೇಗೌಡ ಹಿರಿಯ ನಾಯಕರು. ಅವರ ಪಕ್ಷದ ಕೋರ್ ಕಮಿಟಿ ಅಧ್ಯಕ್ಷರಾದ್ದಾರೆ. ಅವರು ಜೆಡಿಎಸ್ ಪಕ್ಷಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ನಾವು ಈ ಹಿಂದೆ ಕಾಂಗ್ರೆಸ್ ಪಕ್ಷಕ್ಕೆ ಬನ್ನಿ ಎಂದು ಆಹ್ವಾನ ನೀಡಿದ್ದೆವು. ಆದರೆ ಅವರು ಕುಮಾರಣ್ಣ ಅವರನ್ನು ಸಿಎಂ ಮಾಡುತ್ತೇವೆ ಎಂದು ನಮ್ಮ ಆಹ್ವಾನ ತಿರಸ್ಕರಿಸಿದರು. ಈಗ ಅವರನ್ನು ನಡೆಸಿಕೊಳ್ಳುತ್ತಿರುವ ರೀತಿಗೆ ಅವರು ನೊಂದಿದ್ದಾರೆ” ಎಂದರು.

ಜೆಡಿಎಸ್ ನೊಂದ ಶಾಸಕರು ಕಾಂಗ್ರೆಸ್ ಸೇರುತ್ತಾರಾ ಎಂದು ಕೇಳಿದಾಗ, “ಈ ವಿಚಾರವಾಗಿ ನನ್ನ ಬಳಿ ಯಾರೂ ಚರ್ಚೆ ಮಾಡಿಲ್ಲ” ಎಂದು ತಿಳಿಸಿದರು.

ಮುಡಾ ಪ್ರಕರಣದ 144 ಫೈಲ್ ಗಳು ಪತ್ತೆಯಾಗಿಲ್ಲ ಎಂಬ ಲೋಕಾಯುಕ್ತ ವರದಿ ಬಗ್ಗೆ ಕೇಳಿದಾಗ, “ನನಗೆ ಲೋಕಾಯುಕ್ತದ ಹೇಳಿಕೆ ವಿಚಾರ ಗೊತ್ತಿಲ್ಲ. ಆ ರೀತಿ ಫೈಲ್ ಗಳನ್ನು ಯಾರು ಎತ್ತಿಕೊಂಡು ಹೋಗಲು ಸಾಧ್ಯ? ಕಚೇರಿಯಲ್ಲೇ ಇರುತ್ತದೆ, ಅಥವಾ ಯಾರಾದರೂ ಸರ್ಕಾರಕ್ಕೆ ಅದನ್ನು ತೋರಿಸಲು ತೆಗೆದುಕೊಂಡು ಹೋಗಿರುತ್ತಾರೆ. ನನ್ನ ಪ್ರಕಾರ ಪ್ರತಿ ಫೈಲ್ ಗಳನ್ನು ಚಲನಗಳ ಮೇಲೂ ನಿಗಾ ಇಡಲಾಗುವುದು. ಹೀಗಾಗಿ ಈ ರೀತಿ ನಡೆದಿರುವ ಸಾಧ್ಯತೆ ಇಲ್ಲ” ಎಂದರು.

ಉಪಚುನಾವಣೆಯಲ್ಲಿ ಪಕ್ಷದ ಅಭೂತಪೂರ್ವ ಯಶಸ್ಸಿನ ಬಗ್ಗೆ ಕೇಳಿದಾಗ, “ಬ್ಲಾಕ್ ಮಟ್ಟದಿಂದ ರಾಜ್ಯ ಮಟ್ಟದವರೆಗೆ ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು, ಅಭ್ಯರ್ಥಿ ಆಯ್ಕೆಯಲ್ಲಿ ನಮ್ಮ ಕಾರ್ಯತಂತ್ರ ಯಶಸ್ವಿಯಾಗಿದೆ. ಜನರಿಗೆ ನಮ್ಮ ಮೇಲೆ ವಿಶ್ವಾಸವಿದೆ. ನಾವು ಕೊಟ್ಟ ಭರವಸೆ ಈಡೇರಿಸಿದ್ದು, ಉತ್ತಮ ಆಡಳಿತ ನೀಡುವ ನಂಬಿಕೆ ಜನರಲ್ಲಿದೆ. ಹೀಗಾಗಿ ಅವರು 2028ರ ವಿಧಾನಸಭೆ ಚುನಾವಣೆಗೆ ಸ್ಪಷ್ಟ ಸಂದೇಶ ನೀಡಿದ್ದಾರೆ” ಎಂದು ತಿಳಿಸಿದರು.

ಮಹಾರಾಷ್ಟ್ರ ಚುನಾವಣೆಯಲ್ಲಿ ಮತಯಂತ್ರಗಳನ್ನು ಹ್ಯಾಕ್ ಮಾಡಲಾಗಿದೆ ಎಂಬ ಆರೋಪಗಳ ಬಗ್ಗೆ ಕೇಳಿದಾಗ, “ಈ ವಿಚಾರವಾಗಿ ಪರಮೇಶ್ವರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಶಿವಸೇನಾ ನಾಯಕರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಕೆಲವೇ ದಿನಗಳಲ್ಲಿ ನಾನು ದೆಹಲಿಗೆ ಭೇಟಿ ನೀಡುತ್ತಿದ್ದು, ಅಲ್ಲಿ ಚರ್ಚೆ ಮಾಡುತ್ತೇವೆ. ಇದು ದೇಶದ ವಿಚಾರ” ಎಂದು ತಿಳಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button