
ಪ್ರಗತಿವಾಹಿನಿ ಸುದ್ದಿ: ಕಾಂಗ್ರೆಸ್ ಕಚೇರಿ ನಮಗೆ ದೇವಾಲಯವಿದ್ದಂತೆ. ದೆಹಲಿಗೆ ಬಂದಾಗಲೆಲ್ಲ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡುತ್ತೇವೆ. ನಾಯಕರನ್ನು ಭೇಟಿಯಾಗುತ್ತೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ಬೆಂಗಳೂರಿನಲ್ಲಿ ಕಾಂಗ್ರೆಸ್ ಭವನ ಕಟ್ಟಡಕ್ಕೆ ಭೂಮಿ ಪೂಜೆ ಹಿನ್ನೆಲೆಯಲ್ಲಿ ಆಹ್ವಾನ ನೀಡಲು ಬಂದಿದ್ದೆ ಎಂದರು. ಇನ್ನು ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಜಿಲ್ಲಾ ಉಸ್ತುವಾರಿ ಸಚಿವರುಗಳಿಗೆ ಟಾಸ್ಕ್ ನೀಡಲಾಗಿದೆ ಎಂದು ವರಿಷ್ಠರಿಗೆ ವಿವರಿಸಿದ್ದೇವೆ.
ವಿಧಾನಸಭಾ ಅಧಿವೇಶನ ಮುಗಿಯುತ್ತಿದ್ದಂತೆ ಎಲ್ಲಾ ಸಚಿವರು ಕಡ್ಡಾಯವಾಗಿ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಕಾರ್ಯಕರ್ತರ ಸಭೆ ನಡೆಸಬೇಕು. ಅಭಿವೃದ್ಧಿ ಕೆಲಸಗಳ ಬಗ್ಗೆ ವರದಿ ಕೊಡಲು ಸೂಚಿಸಲಾಗಿದೆ ಎಂದರು.
ಅಧಿಕಾರ ಹಂಚಿಕೆ, ಅಧ್ಯಕ್ಷ ಸ್ಥಾನ ಬದಲಾವಣೆ ವಿಚಾರವಾಗಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ, ಅವುಗಳ ಯಾವುದೇ ಚರ್ಚೆ ನಡೆದಿಲ್ಲ. ನಾವು ಆ ಬಗ್ಗೆ ಕೇಳುವುದೂ ಇಲ್ಲ, ಚರ್ಚಿಸಲು ಹೋಗಲ್ಲ ಎಂದು ಹೇಳಿದರು. ಇದೇ ವೇಳೆ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಸೂಚನೆ ನೀಡಿದ್ದಾರೆ ಎಂದರು.
ಕಾಂಗ್ರೆಸ್ ಭವನ ಭೂಮಿಪೂಜೆಗಾಗಿ ರಾಹುಲ್ ಗಾಂಧಿ ಅವರಿಗೆ ಆಹ್ವಾನ: ಡಿಸಿಎಂ ಡಿ.ಕೆ.ಶಿವಕುಮಾರ್
“ರಾಹುಲ್ ಗಾಂಧಿ ಅವರನ್ನು ಹಾಗೂ ಪಕ್ಷದ ಪ್ರಧಾನ ಕಾರ್ಯದರ್ಶಿಗಳನ್ನು ಭೇಟಿ ಮಾಡಿ ನೂತನ ಕಾಂಗ್ರೆಸ್ ಭವನದ ಭೂಮಿ ಪೂಜೆಗೆ ಸಮಯ ನೀಡಿ ಎಂದು ಹೇಳಿದ್ದೇನೆ. 100 ಕಾಂಗ್ರೆಸ್ ಕಚೇರಿಗಳನ್ನು ಕಟ್ಟಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅವರು ಸಮಯ ನೀಡಿದಾಗ ಭೂಮಿಪೂಜೆ ನಡೆಸಲಾಗುವುದು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ದೆಹಲಿಯಲ್ಲಿ ಮಾಧ್ಯಮದವರ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಬುಧವಾರ ಉತ್ತರಿಸಿದರು.
ರಾಜ್ಯದಲ್ಲಿ ಪಕ್ಷದ ಬೆಳವಣಿಗೆ ವಿಚಾರವಾಗಿ ಹೈಕಮಾಂಡ್ ಬಳಿ ಚರ್ಚೆ ನಡೆಸಿದ್ದೀರಾ ಎಂದು ಕೇಳಿದಾಗ, “ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಕಾರ್ಯಕರ್ತರ ಸಭೆ ನಡೆಸಬೇಕು ಎಂದು ಸೂಚನೆ ನೀಡಲಾಗಿದ್ದು, ವಿಧಾನಸಭೆ ಅಧಿವೇಶನ ಮುಗಿದ ನಂತರ ಎಲ್ಲಾ ಕ್ಷೇತ್ರಗಳಲ್ಲಿ ಸಭೆ ನಡೆಸಲಾಗುವುದು” ಎಂದರು.
“ರಾಜ್ಯದ ಎಲ್ಲಾ ಬೆಳವಣಿಗೆಗಳು ಹೈಕಮಾಂಡಿನ ಗಮನದಲ್ಲಿವೆ. ಕಾರ್ಯಕರ್ತರ ಸಭೆ ವಿಚಾರವನ್ನು ತಿಳಿಸಲಾಗಿದೆ. ಸಭೆಯ ವರದಿಯನ್ನು ನೀಡಬೇಕು ಎಂದು ಸೂಚನೆ ನೀಡಿದ್ದಾರೆ” ಎಂದರು.
ಅಧಿಕಾರ ಹಸ್ತಾಂತರ ವಿಚಾರವಾಗಿ ಚರ್ಚೆ ನಡೆಸಲಾಯಿತೇ ಎಂದು ಕೇಳಿದಾಗ, “ಈ ರೀತಿಯ ಯಾವ ಸುದ್ದಿಯೂ ಇಲ್ಲ, ಏನೂ ಇಲ್ಲ. ನಾವು ಇದರ ಬಗ್ಗೆ ಯಾವ ವಿಚಾರವನ್ನೂ ಮಾತನಾಡಲು ಹೋಗುವುದಿಲ್ಲ. ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಿ ಎಂದಷ್ಟೇ ಹೈಕಮಾಂಡ್ ಹೇಳಿದೆ” ಎಂದು ತಿಳಿಸಿದರು.
ಎಐಸಿಸಿ ಕಚೇರಿಗೆ ಭೇಟಿ ಕುರಿತು ಪ್ರಶ್ನಿಸಿದಾಗ “ದೆಹಲಿಗೆ ಬಂದಾಗಲೆಲ್ಲಾ ಪಕ್ಷದ ದೇವಾಲಯ ಎಐಸಿಸಿ ಕಚೇರಿಗೆ ಭೇಟಿ ನೀಡುತ್ತೇನೆ” ಎಂದರು.
ರಾಮನಗರ ಜಿಲ್ಲೆ ಹೆಸರು ಬದಲಾವಣೆಗೆ ಕೇಂದ್ರ ನಕಾರ; ನಮಗೂ ಕಾನೂನು ಗೊತ್ತಿದೆ
ರಾಮನಗರ ಜಿಲ್ಲೆ ಹೆಸರು ಬದಲಾವಣೆಯನ್ನು ಕೆಂದ್ರ ತಿರಸ್ಕರಿಸಿರುವ ಬಗ್ಗೆ ಕೇಳಿದಾಗ, “ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ರಾಜ್ಯದ ವಿಚಾರ. ನಮಗೂ ಕಾನೂನು ಗೊತ್ತಿದೆ. ಇದನ್ನು ಹೇಗೆ ಜಾರಿಗೆ ತರಬೇಕು ಎಂಬುದು ನಮಗೆ ಗೊತ್ತಿದೆ” ಎಂದು ಹೇಳಿದರು.
“ಇಲ್ಲಿ ಒಂದಷ್ಟು ಸಚಿವರು ಇದ್ದಾರಲ್ಲ ಅವರುಗಳು ಕೇಂದ್ರ ಗೃಹ ಸಚಿವರಿಗೆ ಹೇಳಿ ಹೆಸರು ಬದಲಾವಣೆ ಬೇಡ ಎಂದು ಬರೆಸಿದ್ದಾರೆ” ಎಂದರು. ಈ ವೇಳೆ ಕುಮಾರಸ್ವಾಮಿ ಅವರೇ ಎಂದು ಮರು ಪ್ರಶ್ನಿಸಿದಾಗ ‘ಇನ್ನ್ಯಾರು’ ಎಂದು ಹೆಸರು ಹೇಳದೆ ಛೇಡಿಸಿದರು.
“ಈ ವಿಚಾರವಾಗಿ ಎಲ್ಲಾ ಇಲಾಖೆಗಳು ಧನಾತ್ಮಕವಾಗಿ ಸ್ಪಂದಿಸಿದ್ದವು. ಹಾಗೆ ನೋಡಿದರೆ ಇದರ ಅವಶ್ಯಕತೆಯೂ ಇಲ್ಲ” ಎಂದರು.
ದ್ವೇಷದ ರಾಜಕಾರಣಕ್ಕೆ ಸಾಕ್ಷಿ
“ನೀವು ಹೆಸರು ಬದಲಾವಣೆ ಮಾಡಿಕೊಳ್ಳುವಾಗ ಒಂದು ಅಫಿಡವಿಟ್ ಮಾಡಿಕೊಂಡು ಬದಲಾವಣೆ ಮಾಡಿಕೊಳ್ಳಬಹುದಂತೆ. ಇದು ರಾಜ್ಯದ ವಿಷಯ. ದ್ವೇಷದ ರಾಜಕಾರಣ ಹೇಗೆ ನಡೆಯುತ್ತಿದೆ ಹಾಗೂ ರಾಮನಗರ ಜನತೆಯ ಮೇಲೆ ನಡೆಸುತ್ತಿರುವ ಗದಾಪ್ರಹಾರಕ್ಕೆ ಇದೆಲ್ಲಾ ಸಾಕ್ಷಿ” ಎಂದು ವ್ಯಂಗ್ಯವಾಡಿದರು.
ಪೋಟೊ ಹಾಕಿಕೊಂಡು ನೋಡಿಕೊಳ್ಳಲಿ
ನನ್ನ ಕೊಲೆಗೆ ಶಿವಕುಮಾರ್, ಸುರೇಶ್, ಹನುಮಂತರಾಯಪ್ಪ, ಕುಸುಮ ಸಂಚು ಹೂಡಿದ್ದಾರೆ ಎನ್ನುವ ಶಾಸಕ ಮುನಿರತ್ನ ಆರೋಪದ ಬಗ್ಗೆ ಕೇಳಿದಾಗ, “ದಿನಾ ಪೋಟೋ ಹಾಕಿಕೊಂಡು ನೋಡಿಕೊಳ್ಳಲು ಹೇಳಿ” ಎಂದು ಕುಟುಕಿದರು.