Politics

*ಅವರು ತಮ್ಮ ಅನುಕೂಲಕ್ಕೆ ತಕ್ಕಂತೆ ಮಾತನಾಡುತ್ತಾರೆ: HDK ಹೇಳಿಕೆಗೆ ಡಿ.ಕೆ.ಶಿವಕುಮಾರ್ ಟಾಂಗ್*

ಪ್ರಗತಿವಾಹಿನಿ ಸುದ್ದಿ: “ಸರ್ವರಿಗೂ ಸಮಬಾಳು, ಸಮಪಾಲು ಎಂಬ ಬಸವಣ್ಣನವರ ಆಚಾರ ವಿಚಾರ ನಮ್ಮ ಪಕ್ಷದಲ್ಲಿ ಬೆರೆತಿದೆ. ನಾವು ಸಂವಿಧಾನದಲ್ಲಿ ನಂಬಿಕೆ ಇಟ್ಟುಕೊಂಡಿದ್ದೇವೆ. ಯಾರಿಗೆ ನ್ಯಾಯ ಒದಗಿಸಿಕೊಡಬೇಕೋ ಅವರಿಗೆ ನ್ಯಾಯ ಒದಗಿಸಿಕೊಡಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಮಹಾಲಕ್ಷ್ಮಿ ಲೇಔಟ್ ನಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಂಗಳವಾರ ಪ್ರತಿಕ್ರಿಯೆ ನೀಡಿದರು.

Home add -Advt

ಇದು ಜಾತಿಗಣತಿಯೋ ಅಥವಾ ದ್ವೇಷ ಗಣತಿಯೋ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಮಾಡಿರುವ ಟ್ವೀಟ್ ಬಗ್ಗೆ ಕೇಳಿದಾಗ, “ಅವರು ಬಹಳ ದೊಡ್ಡವರು. ದೊಡ್ಡ ಮಾತುಗಳನ್ನು ಆಡುತ್ತಾರೆ. ಅವರು ತಮ್ಮ ಅನುಕೂಲಕ್ಕೆ ತಕ್ಕಂತೆ ಮಾತನಾಡುತ್ತಾರೆ. ನಮ್ಮ ಪಕ್ಷ ತನ್ನದೇ ಆದ ತತ್ವ ಸಿದ್ಧಾಂತಗಳನ್ನು ಹೊಂದಿದ್ದು, ಪಕ್ಷದಲ್ಲಿ ಅನೇಕ ತೀರ್ಮಾನ ಮಾಡಲಾಗಿದ್ದು, ಕಾನೂನಿನಲ್ಲಿ ಯಾರು ಯಾವ ಕೆಲಸ ಮಾಡಬೇಕು ಎಂದು ಇದೆ. ಅದನ್ನು ಗಮನದಲ್ಲಿಟ್ಟುಕೊಂಡು ಮುಂದಿನ ದಿನಗಳಲ್ಲಿ ನಮ್ಮ ಸರ್ಕಾರ ಅನೇಕ ತೀರ್ಮಾನ ಮಾಡಲಿದೆ” ಎಂದು ತಿರುಗೇಟು ನೀಡಿದರು.

ನಾನು ಪಂಡಿತನೂ ಅಲ್ಲ, ಸರ್ವಜ್ಞನೂ ಅಲ್ಲ

ಒಕ್ಕಲಿಗ ಶಾಸಕರ ಸಭೆ ಬಗ್ಗೆ ಕೇಳಿದಾಗ, “ನಾನು ಈ ಸಮಾಜದ ಪ್ರತಿನಿಧಿಯಾಗಿ, ಸಚಿವ ಸಂಪುಟ ಸಭೆಯಲ್ಲಿ ನಮ್ಮ ವಿಚಾರವನ್ನು ಹೇಗೆ ಮಂಡಿಸಬೇಕು, ಯಾವ ರೀತಿ ಸಲಹೆ ನೀಡಬೇಕು ಎಂದು ಚರ್ಚೆ ಮಾಡಬೇಕಲ್ಲವೇ? ಏಕಾಏಕಿ ನಾನೊಬ್ಬನೇ ಸರ್ವಜ್ಞನಲ್ಲ. ದೊಡ್ಡ ಪಂಡಿತನೂ ಅಲ್ಲ. ನಾನು ಹಳ್ಳಿಯಿಂದ ಬಂದು ಬೆಂಗಳೂರು ಸೇರಿರುವವನು. ಹಿರಿಯರು, ಸ್ನೇಹಿತರು, ಶಾಸಕರ ಅನುಭವ, ತಮ್ಮ ಕ್ಷೇತ್ರಗಳಲ್ಲಿ ಜನ ಏನು ಹೇಳುತ್ತಿದ್ದಾರೆ, ಮಾಧ್ಯಮಗಳು ನೀಡಿರುವ ವರದಿ ಎಲ್ಲವನ್ನು ಚರ್ಚೆ ಮಾಡಿ ಅವಲೋಕಿಸಿ ಚರ್ಚೆ ಮಾಡಬೇಕಿದೆ. ನಾನು ಈ ವಿಚಾರವನ್ನು ಮಾಧ್ಯಮಗಳ ಮುಂದೆ ಮಾತನಾಡುವವನಲ್ಲ” ಎಂದು ತಿಳಿಸಿದರು.

ಜಾತಿಗಣತಿ ವಿಚಾರವಾಗಿ ನಿರ್ಮಲಾನಂದ ಶ್ರೀಗಳ ಜತೆ ಚರ್ಚೆ ಮಾಡಲಾಗಿದೆಯೇ ಎಂದು ಕೇಳಿದಾಗ, “ಏನಿಲ್ಲಾ” ಎಂದು ಉತ್ತರಿಸಿದರು.

ಡಿ.ಕೆ. ಶಿವಕುಮಾರ್ ಅವರು ಅಧಿಕಾರಕ್ಕೆ ಯೋಗ್ಯರು ಎಂಬ ನಿರ್ಮಲಾನಂದ ಶ್ರೀಗಳು ಆಶೀರ್ವಾದ ಮಾಡಿರುವ ಬಗ್ಗೆ ಕೇಳಿದಾಗ, “ಈಗ ನಾನು ಆ ವಿಚಾರವಾಗಿ ಚರ್ಚೆ ಮಾಡಲು ಹೋಗುವುದಿಲ್ಲ. ನನಗೆ ನೀವುಗಳು (ಮಾಧ್ಯಮಗಳು) ಆಶೀರ್ವಾದ ಮಾಡಿ” ಎಂದರು.

Related Articles

Back to top button