*BJP ಒಡೆದ ಮನೆಯಾಗಿದೆ; ಅದನ್ನು ರಕ್ಷಿಸಲು ಪ್ರಧಾನಿ ಮೋದಿ, ಅಮಿತ್ ಶಾ ರಾಜ್ಯದಲ್ಲೇ ಠಿಕಾಣಿ ಹೂಡಿದ್ದಾರೆ; ವ್ಯಂಗ್ಯವಾಡಿದ ಡಿ.ಕೆ.ಶಿವಕುಮಾರ್*
ಪ್ರಗತಿವಾಹಿನಿ ಸುದ್ದಿ; ಮೂಡಿಗೆರೆ: ಈ ಸಭೆ ನೋಡಿದರೆ ಕನಕಪುರ ಕ್ಷೇತ್ರದಲ್ಲಿ ಭಾಷಣ ಮಾಡುತ್ತಿದ್ದೇನೆ ಎಂದು ಭಾಸವಾಗುತ್ತಿದೆ. ನನಗೆ ಕನಕಪುರದಷ್ಟೇ ಮೂಡಿಗೆರೆ ಕ್ಷೇತ್ರವೂ ಮುಖ್ಯ. ಮನುಷ್ಯನ ಗುಣಗಳಲ್ಲಿ ನಂಬಿಕೆ ಅತ್ಯಂತ ಶ್ರೇಷ್ಠ ಗುಣವಾಗಿದೆ. ಅದೇರೀತಿ ನಾನು ಈ ಕ್ಷೇತ್ರದ ಮಹಾಜನತೆ ಮೇಲೆ ನಂಬಿಕೆ ಇಟ್ಟು ಇಲ್ಲಿಗೆ ಬಂದಿದ್ದೇನೆ. ನೀವು ಇಂದಿರಾ ಗಾಂಧಿ ಅವರಿಗೆ ಆಶೀರ್ವಾದ ಮಾಡಿ ಬದಲಾವಣೆ ತಂದಂತೆ ಈ ಬಾರಿಯೂ ಬದಲಾವಣೆ ತರುವ ನಂಬಿಕೆ ಇದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.
ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ ಡಿ.ಕೆ.ಶಿವಕುಮಾರ್, ಈ ಕ್ಷೇತ್ರದ ಜನ ಪ್ರಜ್ಞಾವಂತ ಹಾಗೂ ವಿದ್ಯಾವಂತರಿದ್ದಾರೆ. ಮರಕ್ಕೆ ಬೇರು ಎಷ್ಟು ಮುಖ್ಯವೋ ಅದೇ ರೀತಿ ಮನುಷ್ಯನಿಗೆ ನಂಬಿಕೆ ಬಹಳ ಮುಖ್ಯ. ಇಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ನಯನ ಅವರು ಮಾತ್ರ ಅಭ್ಯರ್ಥಿಯಲ್ಲ. ಇಲ್ಲಿ ನಯನ ಅವರು ಗೆದ್ದರೆ, ಕ್ಷೇತ್ರದ ಜನ ಗೆದ್ದಂತೆ. ಮೋಟಮ್ಮ ಅವರ ಮಗಳು ನನ್ನಿಂದ ತಪ್ಪಾಗಿದ್ದರೆ ಕ್ಷಮಿಸಿ ಎಂದು ನಿಮ್ಮ ಮುಂದೆ ಕ್ಷಮೆಯಾಚಿಸಿದ್ದಾರೆ. ಆಕೆ ಕಲ್ಲಿನಂತೆ ಗಟ್ಟಿಯಾಗಿದ್ದಾಳೆ. ಕಲ್ಲು ಪ್ರಕೃತಿ, ಕಡಿದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ. ಆಕೆ ಎಲ್ಲಾ ಹಿರಿಯರ ಮಾರ್ಗದರ್ಶನದಲ್ಲಿ ಮುನ್ನಡೆಯಲಿದ್ದಾರೆ ಎಂಬ ವಿಶ್ವಾಸ ನಮಗಿದೆ.
ಈ ಕ್ಷೇತ್ರದಲ್ಲಿ ಎಲ್ಲರೂ ಒಗ್ಗಟ್ಟಾಗಿ ತ್ರಿವರ್ಣಧ್ವಜ ಹಿಡಿದು ಕಾಂಗ್ರೆಸ್ ಗೆಲ್ಲಿಸಲು ಪಣ ತೊಟ್ಟಿದ್ದೀರಿ. ನಿಮಗೆ ಧನ್ಯವಾದಗಳು. ಕಾಂಗ್ರೆಸ್ ಶಕ್ತಿ ದೆಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲಾ ವರ್ಗಗಳು ಅಧಿಕಾರಕ್ಕೆ ಬಂದಂತೆ. ಕಾಂಗ್ರೆಸ್ ಪಕ್ಷ ದೇವರಾಜ ಅರಸು ಅವರ ಕಾಲದಲ್ಲಿ ಉಳುವವನಿಗೆ ಭೂಮಿ ಕೊಟ್ಟಿತು. ಈ ಬಾರಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅರಣ್ಯ ಭೂಮಿ ಕಾಯ್ದೆ ತಿದ್ದುಪಡಿ ತರುತ್ತೇವೆ. ನಿಮ್ಮನ್ನು ಒಕ್ಕಲೆಬ್ಬಿಸಲು ಕಾಂಗ್ರೆಸ್ ಅವಕಾಶ ನೀಡುವುದಿಲ್ಲ.
ಮೋಟಮ್ಮ ಅವರು ಮಹಿಳಾ ಮತ್ತು ಕಲ್ಯಾಣ ಮಂತ್ರಿಯಾಗಿದ್ದರು. ಪುಟಾಣಿ ಮಕ್ಕಳಿಗೆ ಬಿಸಿಯೂಟ ಕಾರ್ಯಕ್ರಮ ಕೊಟ್ಟರು. ಮಹಿಳೆಯರಿಗೆ ಶಕ್ತಿ ತುಂಬಲು ಸ್ತ್ರೀಶಕ್ತಿ ಕಾರ್ಯಕ್ರಮ ನೀಡಿದರು. ಆಗ ಈ ಕಾರ್ಯಕ್ರಮ ದೇಶಕ್ಕೆ ಮಾದರಿಯಾಗಿತ್ತು. ಕೇಂದ್ರ ಸರ್ಕಾರ ರೈತರ ಜಮೀನು ಉಳಿಸಿಕೊಳ್ಳಲು ನಿಮ್ಮ ಸಂಸದರು ಆಲೋಚನೆ ಮಾಡುತ್ತಿಲ್ಲ. ನಾವು ರೈತನನ್ನು ಉಳಿಸಬೇಕು, ಬದುಕಿಸಬೇಕು. ರೈತನಿಗೆ ಯಾವುದೇ ಸವಲತ್ತು. ಇಲ್ಲ. ಬಿಜೆಪಿ ಎಲ್ಲರ ಆದಾಯ ಡಬಲ್ ಮಾಡುತ್ತೇವೆ ಎಂದರು. ಯಾರ ಆದಾಯವಾದರೂ ಡಬಲ್ ಆಗಿದೆಯಾ? ಬೆಲೆ ಏರಿಕೆ ಗಗನಕ್ಕೆ ಹೋಗಿದೆ. ಈ ಬೆಲೆ ಏರಿಕೆಯಿಂದ ಜನಸಾಮಾನ್ಯರನ್ನು ಉಳಿಸಬೇಕಿದೆ.
ಈ ಭಾಗದ ಶಾಸಕರು ಕಳೆದ ಒಂದು ವರ್ಷದಿಂದ ಕಾಂಗ್ರೆಸ್ ಬಾಗಿಲು ತಟ್ಟುತ್ತಿದ್ದರು. ಈಗ ಜನತಾದಳ ಸೇರಿದ್ದಾರೆ. ಇಲ್ಲಿ ಕೇವಲ ನಯನ ಮೋಟಮ್ಮ ಮಾತ್ರ ಅಭ್ಯರ್ಥಿಯಲ್ಲ, ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ಅಭ್ಯರ್ಥಿ ಎಂದು ಆಲೋಚಿಸಿ. ಇಲ್ಲಿನ ಶಾಸಕರಿಗೆ ಬಿಜೆಪಿ ಯಾಕೆ ಟಿಕೆಟ್ ನೀಡಲಿಲ್ಲ ಎಂಬ ಚರ್ಚೆ ಬೇಡ.
ಪಕ್ಕದ ಚಿಕ್ಕಮಗಳೂರಿನಲ್ಲಿ ಬಿಜೆಪಿಯ ಸಿ.ಟಿ ರವಿಗೆ ಮೇ 10ರಂದು ಸೋಲು ಖಚಿತ. ಅವರು ಮಾಜಿ ಶಾಸಕರಾಗಲಿದ್ದಾರೆ. ನಾನು ಇಡೀ ರಾಜ್ಯ ಪ್ರವಾಸ ಮಾಡಿದ್ದೇನೆ. ಜಗದೀಶ್ ಶೆಟ್ಟರ್ ಅವರು 6 ಬಾರಿ ಶಾಸಕರಾಗಿ, ಪಕ್ಷದ ಅಧ್ಯಕ್ಷರಾಗಿ, ಉಪಮುಖ್ಯಮಂತ್ರಿ, ಮುಖ್ಯಮಂತ್ರಿಯಾಗಿದ್ದರು ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಲಕ್ಷ್ಮಣ ಸವದಿ ಹಾಗೂ ಪುಟ್ಟಣ್ಣ ಅವರು ಪರಿಷತ್ ಸದಸ್ಯತ್ವ ಇದ್ದರೂ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದ್ದಾರೆ. ಶಿವಲಿಂಗೆಗೌಡರು, ಗುಬ್ಬಿ ವಾಸು, ಮಧು ಬಂಗಾರಪ್ಪ, ತೀರ್ಥಹಳ್ಳಿ ಮಂಜುನಾಥ್ ಸೇರಿದಂತೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದಿಂದ 20 ಕ್ಕೂ ಹೆಚ್ಚು ಮಂದಿ ಕಾಂಗ್ರೆಸ್ ಸೇರಿದ್ದಾರೆ.
ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಮಾತ್ರ ಚೆಂದ. ಅದೇ ರೀತಿ ನಯನಾ ಮೋಟಮ್ಮ ಅವರ ಕೈ ಅಧಿಕಾರದಲ್ಲಿದ್ದರೆ ಚೆಂದ. ಅವರು ಶಾಸಕರಾಗದಿದ್ದರೂ ಕೋವಿಡ್ ಸಮಯದಲ್ಲಿ ಅಲ್ಪಸ್ವಲ್ಪ ಸಹಾಯ ಮಾಡಿದ್ದಾರೆ. ರಾಜ್ಯಕ್ಕೆ ಬಿಜೆಪಿ ಭ್ರಷ್ಟ ರಾಜ್ಯ ಎಂಬ ಕಳಂಕ ತಂದಿದೆ. ಇದನ್ನು ತೊಳೆದುಹಾಕಬೇಕು. ಬಿಜೆಪಿ ಜಾತಿ, ಧರ್ಮದ ಮೇಲೆ ರಾಜಕಾರಣ ಮಾಡಿದರೆ, ನಾವು ನಿಮ್ಮ ಬದುಕು ರೂಪಿಸುವ ಬಗ್ಗೆ ಆಲೋಚನೆ ಮಾಡುತ್ತಿದೆ.
ನಿಮ್ಮ ಬದುಕು ಕಟ್ಟುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷ ಐದು ಗ್ಯಾರೆಂಟಿ ಯೋಜನೆ ಘೋಷಿಸಿದ್ದು, ಗೃಹಜ್ಯೋತಿ ಯೋಜನೆ ಮೂಲಕ ಪ್ರತಿ ತಿಂಗಳು 200 ಯೂನಿಟ್ ಉಚಿತ, ಗೃಹಲಕ್ಷ್ಮಿ ಯೋಜನೆ ಮೂಲಕ ಪ್ರತಿ ಮನೆಯೊಡತಿಗೆ ಪ್ರತಿ ತಿಂಗಳು 2 ಸಾವಿರ ಪ್ರೋತ್ಸಾಹ ಧನ ನೀಡಲಾಗುವುದು. ಅನ್ನಭಾಗ್ಯ ಯೋಜನೆ ಮೂಲಕ ಬಡ ಕುಟುಂಬದ ಪ್ರತಿ ಸದಸ್ಯರಿಗೆ ಪ್ರತಿ ತಿಂಗಳು 10 ಕೆ.ಜಿ ಅಕ್ಕಿ ಉಚಿತವಾಗಿ ನೀಡಲಾಗುವುದು. ಇನ್ನು ಯುವನಿಧಿ ಕಾರ್ಯಕ್ರಮದ ಮೂಲಕ ನಿರುದ್ಯೋಗ ಪದವೀಧರರಿಗೆ ಪ್ರತಿ ತಿಂಗಳು 2 ವರ್ಷದವರೆಗೆ 3 ಸಾವಿರ, ಡಿಪ್ಲೋಮಾ ಪದವೀಧರರಿಗೆ 1500 ರೂ ನಿರುದ್ಯೋಗ ಭತ್ಯೆ ನೀಡಲಾಗುವುದು. ಇನ್ನು ರಾಜ್ಯದ ಮಹಿಳೆಯರಿಗೆ ಸಾರ್ವಜನಿಕ ಬಸ್ ಗಳಲ್ಲಿ ಉಚಿತ ಪ್ರಯಾಣ ಕಲ್ಪಿಸಲಾಗುವುದು.
ಇಂತಹ ಯೋಜನೆ, ಸಿ.ಟಿ ರವಿ, ಯಡಿಯೂರಪ್ಪ, ಬೊಮ್ಮಾಯಿ ಅವರು ನೀಡಲು ಸಾಧ್ಯವೇ? ಈ ಹಿಂದೆ ಶೋಭಕ್ಕಾ ಹಾಗೂ ಯಡಿಯೂರಪ್ಪ ಅವರು ಒಂದು ಸೈಕಲ್ ಮತ್ತು ಒಂದು ಸೀರೆ ಕೊಟ್ಟಿದ್ದರು. ಬಿಜೆಪಿ ಈಗ ಒಡೆದ ಮನೆಯಾಗಿದೆ. ಈ ಬಿಜೆಪಿ ರಕ್ಷಿಸಲು ಪ್ರಧಾನಮಂತ್ರಿಗಳು ಹಾಗೂ ಅಮಿತ್ ಶಾ ರಾಜ್ಯದಲ್ಲೇ ಠಿಕಾಣಿ ಹೂಡಿದ್ದಾರೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಬಡವರಿಗೆ ಬಡ್ಡಿ ರಹಿತ 10 ಲಕ್ಷವರೆಗೂ ಸಾಲ, ಚಾಲಕರಿಗೆ ವಿಶೇಷ ಕಾರ್ಯಕ್ರಮ ರೂಪಿಸಿದ್ದೇವೆ. ನೀವೆಲ್ಲರೂ ಸೇರಿ ಹೊಸ ಇತಿಹಾಸ ಸೃಷ್ಟಿಸಬೇಕು. ಇತಿಹಾಸ ಮರೆತವ, ಇತಿಹಾಸ ಸೃಷ್ಟಿಸಲಾರ ಎಂದು ಅಂಬೇಡ್ಕರ್ ಹೇಳಿದ್ದಾರೆ. ನಾವು ಹಳೇ ಪಿಂಚಣಿ ವ್ಯವಸ್ಥೆ ಜಾರಿಗೆ ತರುವುದಾಗಿ ಹೇಳಿದ್ದೇವೆ.
ನಾವು ಕಬ್ಬಿಣವನ್ನು ಎರಡು ರೀತಿ ಬಳಸಬಹುದು. ಬಿಜೆಪಿ ಕತ್ತರಿಯಂತೆ ಸಮಾಜ ಒಡೆಯುತ್ತಿದೆ. ಆದರೆ ಕಾಂಗ್ರೆಸ್ ಪಕ್ಷ ಸೂಜಿಯಂತೆ ಸಮಾಜವನ್ನು ಒಂದು ಮಾಡುತ್ತಿದೆ. ದೇವರು ವರ ಹಾಗೂ ಶಾಪ ನೀಡುವುದಿಲ್ಲ. ಕೇವಲ ಅವಕಾಶ ನೀಡುತ್ತಾನೆ. ನಿಮ್ಮ ಮುಂದಿರುವ ಅವಕಾಶ ಬಳಸಿಕೊಂಡು ನಯನ ಮೋಟಮ್ಮ ಅವರನ್ನು ವಿಧಾನಸೌಧಕ್ಕೆ ಕಳುಹಿಸಿ. ಈ ಡಿ.ಕೆ. ಶಿವಕುಮಾರ್ ನಿಮ್ಮ ಜತೆ ಸದಾ ಇದ್ದೇ ಇರುತ್ತೇನೆ.
ಮೇ 10ರ ದಿನ ಕೇವಲ ಮತದಾನದ ದಿನ ಮಾತ್ರವಲ್ಲ, ನಿಮ್ಮ ಭವಿಷ್ಯ ಬದಲಿಸುವ ದಿನ, ಭ್ರಷ್ಟ ಸರ್ಕಾರವನ್ನು ಬಡಿದೋಡಿಸುವ ದಿನ. ರಾಜ್ಯಕ್ಕೆ ದಕ್ಷ ಆಡಳಿತ ನೀಡುವ ದಿನ. ಹೀಗಾಗಿ ಮೇ 10ರಂದು ನೀವೆಲ್ಲರೂ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ ಬೇರೆಯವರಿಂದಲೂ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿಸಿ ಎಂದು ಕರೆ ನೀಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ